
ಘಟನೆ ಕುರಿತು ಬೆಂಗಳೂರು ಪೊಲೀಸರು ಹೊರಡಿಸಿರುವ ಪ್ರಕಟಣೆ.
ಮದ್ಯ ಸೇವಿಸಿ 7ನೇ ಮಹಡಿಯಿಂದ ಬಿದ್ದು ಬಾಲಕ ಸಾವು; ಮದ್ಯ ನೀಡಿದ ಕಂಪನಿ ಮಾಲೀಕರ ವಿರುದ್ಧ ಕೇಸ್!
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದ್ಯ ಪೂರೈಸುವುದು ಕಾನೂನುಬಾಹಿರ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಮತ್ತು ಬಾಲಕನಿಗೆ ಮದ್ಯ ಒದಗಿಸಿದ ಆರೋಪದ ಮೇಲೆ ಸಂಬಂಧಪಟ್ಟ ಕಂಪನಿಯ ಮಾಲೀಕರು ಮತ್ತು ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ.
ಅಪ್ರಾಪ್ತ ಬಾಲಕನೊಬ್ಬ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತನಿಖೆಯ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಾಲಕನಿಗೆ ಮದ್ಯ ಪೂರೈಸಿದ ಆರೋಪದಡಿ ಕಂಪನಿಯೊಂದರ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜನವರಿ 31ರಂದು ರಾತ್ರಿ ಸುಮಾರು 9.40 ರ ಸಮಯದಲ್ಲಿ ಡಾ. ವಿಷ್ಣುವರ್ಧನ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದರ 7ನೇ ಮಹಡಿಯಿಂದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದ. ಈ ಸಂಬಂಧ ಮೃತ ಬಾಲಕನ ಪೋಷಕರು ಅಂದೇ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ, ಸಾವಿಗೂ ಮುನ್ನ ಬಾಲಕ ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಘಟನೆ ನಡೆದ ದಿನ (ಜ.31) ಮೃತ ಬಾಲಕ ತನ್ನ ಸ್ನೇಹಿತರೊಂದಿಗೆ ಸೇರಿ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿರುವ ಕಂಪನಿಯೊಂದರ ಆವರಣದಲ್ಲಿ ಮದ್ಯ ಸೇವಿಸಿ, ಧೂಮಪಾನ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಕಠಿಣ ಕಾನೂನು ಕ್ರಮ
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದ್ಯ ಪೂರೈಸುವುದು ಕಾನೂನುಬಾಹಿರ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಮತ್ತು ಬಾಲಕನಿಗೆ ಮದ್ಯ ಒದಗಿಸಿದ ಆರೋಪದ ಮೇಲೆ ಸಂಬಂಧಪಟ್ಟ ಕಂಪನಿಯ ಮಾಲೀಕರು ಮತ್ತು ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. ಬಾಲಾಪರಾಧಿ ನ್ಯಾಯ ಕಾಯ್ದೆ (JJ Act) ಮತ್ತು ಕರ್ನಾಟಕ ಅಬಕಾರಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಪ್ರಸ್ತುತ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವ ಇತರರ ಮೇಲೂ ನಿಗಾ ಇರಿಸಿದ್ದಾರೆ.

