Huge benami cash bust in Silicon City; Rs 2.98 crore seized!
x

ಸಾಂದರ್ಭಿಕ ಚಿತ್ರ

ಸಿಲಿಕಾನ್‌ ಸಿಟಿಯಲ್ಲಿ ಭಾರಿ ಬೇನಾಮಿ ನಗದು ಬೇಟೆ; ಬರೋಬ್ಬರಿ 2.98 ಕೋಟಿ ರೂ. ಸೀಜ್!

ಈ ಕುರಿತು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 98ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದುಕೊಂಡಿರುವ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ.


Click the Play button to hear this message in audio format

ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಭಾರಿ ಮೊತ್ತದ ಬೇನಾಮಿ ನಗದು ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ನಗರದ ಕುರುಬರಹಳ್ಳಿಯ ಸಿಮೆಂಟ್ ಶೀಟ್ ತಯಾರಿಕಾ ಫ್ಯಾಕ್ಟರಿಯ ಶೆಡ್‌ ಒಂದರ ಮೇಲೆ ದಾಳಿ ನಡೆಸಿರುವ ಪೊಲೀಸರು, ದಾಖಲೆ ಇಲ್ಲದ ಬರೋಬ್ಬರಿ 2. 98 ಕೋಟಿ ರೂ. ನಗದು ಹಣವನ್ನು ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.

ಮಧ್ಯರಾತ್ರಿ ಗಸ್ತಿನ ವೇಳೆ ಸಿಕ್ಕಿತು ಸುಳಿವು!

ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಕೇಶ್ ನೇತೃತ್ವದ ಪೊಲೀಸ್ ತಂಡವು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ಕುರುಬರಹಳ್ಳಿಯ ಶೆಡ್‌ ಒಂದರಲ್ಲಿ ದೊಡ್ಡ ಮೊತ್ತದ ನಗದು ಹಣ ಅಡಗಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಕುರುಬರಹಳ್ಳಿಯ 11ನೇ ಕ್ರಾಸ್‌ನಲ್ಲಿರುವ ಸಿಮೆಂಟ್ ಶೆಡ್‌ ಪರಿಶೀಲನೆ ನಡೆಸಿದ್ದರು.

4 ಬ್ಯಾಗ್‌ಗಳಲ್ಲಿ ಕಂತೆ ಕಂತೆ ನೋಟುಗಳು!

ಪೊಲೀಸರು ಶೆಡ್‌ನೊಳಗೆ ಪರಿಶೀಲನೆ ನಡೆಸಿದಾಗ ತಲಾ ನಾಲ್ಕು ದೊಡ್ಡ ಬ್ಯಾಗ್‌ಗಳಲ್ಲಿ ಕಂತೆ ಕಂತೆಯಾಗಿ ನೋಟುಗಳನ್ನು ತುಂಬಿಡಲಾಗಿತ್ತು. ಒಟ್ಟು ಎಣಿಕೆ ಮಾಡಿದಾಗ 2,98,00,900 ರೂ. ಪತ್ತೆಯಾಗಿದೆ. ಈ ಭಾರಿ ಮೊತ್ತದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ದಾಖಲೆಗಳು ಸ್ಥಳದಲ್ಲಿ ಇರಲಿಲ್ಲ. ಇದು ಪೊಲೀಸರ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.

ನಾಗರಾಜ್, ವೆಂಕಟೇಶ್ ಪೊಲೀಸ್ ವಶಕ್ಕೆ

ಸ್ಥಳದಲ್ಲೇ ಇದ್ದ ನಾಗರಾಜ್ ಮತ್ತು ವೆಂಕಟೇಶ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಹಣದ ಮೂಲದ ಬಗ್ಗೆ ಇಬ್ಬರೂ ಯಾವುದೇ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಐಟಿ ಇಲಾಖೆಗೆ ಮಾಹಿತಿ

ಈ ಕುರಿತು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 98ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದುಕೊಂಡಿರುವ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಇಷ್ಟು ದೊಡ್ಡ ಮೊತ್ತದ ಕಪ್ಪುಹಣ ಪತ್ತೆಯಾಗಿರುವುದರಿಂದ ಆದಾಯ ತೆರಿಗೆ ಇಲಾಖೆಗೂ ಅಧಿಕೃತ ಮಾಹಿತಿ ನೀಡಲಾಗಿದ್ದು, ಐಟಿ ಅಧಿಕಾರಿಗಳು ಕೂಡ ಪ್ರತ್ಯೇಕ ತನಿಖೆ ಆರಂಭಿಸುವ ಸಾಧ್ಯತೆ ಇದೆ.

ಅಕ್ರಮ ಚಟುವಟಿಕೆಯ ಶಂಕೆ?

ಬೆಂಗಳೂರಿನಂತಹ ಮಹಾನಗರದಲ್ಲಿ ಈ ಮಟ್ಟಿಗೆ ದಾಖಲೆಯಿಲ್ಲದ ಕೋಟ್ಯಂತರ ರೂ. ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಹವಾಲಾ ಹಣವೇ? ಅಥವಾ ಕಪ್ಪು ಹಣವೇ? ಇಲ್ಲವೇ ಇನ್ಯಾವುದಾದರೂ ಅಕ್ರಮ ಚಟುವಟಿಕೆಗಳಿಗೆ ಬಳಸಲು ತರಲಾಗುತ್ತಿತ್ತೇ? ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬಂಧಿತರ ಹಿನ್ನೆಲೆಯನ್ನೂ ಕೂಡ ಜಾಲಾಡಲಾಗುತ್ತಿದೆ. ಗಸ್ತು ತಿರುಗುವ ವೇಳೆ ಸಿಕ್ಕ ಈ ಭಾರಿ ಮೊತ್ತದ ನಗದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

Read More
Next Story