
ಮನೆಗೆ ನುಗ್ಗಿ ವಿವಾಹಿತ ಮಹಿಳೆಯ ಅಪಹರಣಕ್ಕೆ ಯತ್ನ; ರಾಜಸ್ಥಾನ ಮೂಲದ ಮೂವರಿಗೆ ಸಾರ್ವಜನಿಕರಿಂದ ಧರ್ಮದೇಟು
ರಾಜಸ್ಥಾನ ಮೂಲದ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅಪಹರಿಸಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಅಪಹರಣಕ್ಕೆ ಯತ್ನಿಸಿದ ಮೂವರು ಆರೋಪಿಗಳೂ ರಾಜಸ್ಥಾನ ಮೂಲದವರು ಎನ್ನಲಾಗಿದೆ.
ಮನೆಗೆ ನುಗ್ಗಿ ವಿವಾಹಿತ ಮಹಿಳೆಯನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ ರಾಜಸ್ಥಾನ ಮೂಲದ ಮೂವರನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯನ್ನು ಅಪಹರಿಸಿಕೊಂಡು ಹೋಗುವ ವೇಳೆ ಆರೋಪಿಗಳು ಕಾರನ್ನು ಅಡ್ಡಬಂದವರ ಮೇಲೆ ಹರಿಸಿದ್ದು, ಘಟನೆಯಲ್ಲಿ ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜಸ್ಥಾನ ಮೂಲದ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅಪಹರಿಸಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಅಪಹರಣಕ್ಕೆ ಯತ್ನಿಸಿದ ಮೂವರು ಆರೋಪಿಗಳೂ ರಾಜಸ್ಥಾನ ಮೂಲದವರು ಎನ್ನಲಾಗಿದೆ. ಮಹಿಳೆ ಇತ್ತೀಚೆಗೆ ಪ್ರೀತಿಸಿ ವಿವಾಹವಾಗಿದ್ದಳು. ಮದುವೆಯಾದ ಬಳಿಕ ಸುಮಾರು 15 ದಿನಗಳ ಹಿಂದೆ ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪತಿಯೊಂದಿಗೆ ವಾಸವಾಗಿದ್ದಳು.
ಬುಧವಾರ ಏಕಾಏಕಿ ಮೂವರು ಆರೋಪಿಗಳು ಮನೆಗೆ ನುಗ್ಗಿ ಮಹಿಳೆಯನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಪರಾರಿಯಾಗುವ ಸಂದರ್ಭದಲ್ಲಿ ಎದುರಿಗೆ ಬಂದ ಹಲವು ವಾಹನಗಳಿಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಮೇಲೆ ಕಾರು ಹರಿಸಿದ ಆರೋಪಿಗಳು
ವಿಜಯನಗರದ ಹೊಸಹಳ್ಳಿಯ ದಂಡಿ ಮಾರಮ್ಮ ದೇವಸ್ಥಾನದ ಬಳಿ ಕಾರನ್ನು ತಡೆದು ಆರೋಪಿಗಳನ್ನು ಪ್ರಶ್ನಿಸಲು ಕೆಲವರು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಅವರ ಮೇಲೂ ಕಾರು ಹರಿಸಿದ್ದಾರೆ ಎಂದು ತಿಳಿದುಬಂದಿದೆ. ಕಾರಿಗೆ ಅಡ್ಡಬಂದ ಹಲವರು ಗಾಯಗೊಂಡಿದ್ದಾರೆ.
ಆರೋಪಿಗಳ ಕಾರನ್ನು ಸಾರ್ವಜನಿಕರು 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಸುಮಾರು 9 ಕಿಲೋಮೀಟರ್‌ವರೆಗೆ ಬೆನ್ನಟ್ಟಿದ್ದಾರೆ. ಬಳಿಕ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ ಸಾರ್ವಜನಿಕರು ಕಲ್ಲು ತೂರಾಟ ನಡೆಸಿದ್ದಾರೆ. ಕಾರಿನಿಂದ ಇಳಿದು ಪರಾರಿಯಾಗಲು ಯತ್ನಿಸಿದ ಮೂವರನ್ನೂ ಹಿಡಿದು ಥಳಿಸಿದ್ದಾರೆ. ಘಟನೆಯಲ್ಲಿ ಓರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಮಹಿಳೆಯರ ಮೇಲೂ ಕಾರು ಹರಿದಿರುವುದಾಗಿ ತಿಳಿದುಬಂದಿದೆ. ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಸಾರ್ವಜನಿಕರು ಅಪಹರಣಕ್ಕೆ ಒಳಗಾಗಿದ್ದ ಮಹಿಳೆಯನ್ನು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಮಾಗಡಿ ರಸ್ತೆ ಸಂಚಾರ ಪೊಲೀಸರು ಹಾಗೂ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಹರಣಕ್ಕೆ ಯತ್ನಿಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

