ಅಂತರ್ಜಾತಿ ವಿವಾಹಕ್ಕೆ ವಿರೋಧ: ಪ್ರಿಯತಮ ನಾಪತ್ತೆ, ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನ
x

ಬೆಂಗಳೂರಿನಲ್ಲಿ ಅಂತರ್ಜಾತಿ ವಿವಾಹಕ್ಕೆ ಕುಟುಂಬದ ವಿರೋಧದ ನಡುವೆ ಪ್ರಿಯಕರ ಸೂರ್ಯ ನಾಪತ್ತೆಯಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಅಂತರ್ಜಾತಿ ವಿವಾಹಕ್ಕೆ ವಿರೋಧ: ಪ್ರಿಯತಮ ನಾಪತ್ತೆ, ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನ

ಸೂರ್ಯನ ಸ್ನೇಹಿತ ಪ್ರವೀಣ್ ತಮ್ಮ ಬಗ್ಗೆ ಸೂರ್ಯನ ಪೋಷಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಮದುವೆಗೆ ಒಪ್ಪಿದ್ದ ಕುಟುಂಬದವರು ಬಳಿಕ ನಿರ್ಧಾರ ಬದಲಿಸಿಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.


Click the Play button to hear this message in audio format

ಅಂತರ್ಜಾತಿ ವಿವಾಹಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರಿಯಕರ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿರುವ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿ ಇದೀಗ ತನ್ನನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ (26) ಹಾಗೂ ಕಾಸರಗೋಡು ಮೂಲದ ಯುವತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಐದು ತಿಂಗಳಿನಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ತಮ್ಮ ಸಂಬಂಧದ ವಿಚಾರವನ್ನು ಸೂರ್ಯ ಮನೆಯವರಿಗೂ ತಿಳಿಸಿದ್ದರು. ಆರಂಭದಲ್ಲಿ ಸೂರ್ಯನ ಪೋಷಕರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂದು ವರದಿಯಾಗಿದೆ. ಆದರೆ ಯುವತಿಯ ತಾಯಿ ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ, ಮಗಳೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು ಎನ್ನಲಾಗಿದೆ.

ಸ್ನೇಹಿತನ ವಿರುದ್ಧ ಯುವತಿಯ ಆರೋಪ

ಸೂರ್ಯನ ಸ್ನೇಹಿತ ಪ್ರವೀಣ್ ತಮ್ಮ ಬಗ್ಗೆ ಸೂರ್ಯನ ಪೋಷಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಮದುವೆಗೆ ಒಪ್ಪಿದ್ದ ಕುಟುಂಬದವರು ಬಳಿಕ ನಿರ್ಧಾರ ಬದಲಿಸಿಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಸೆಪ್ಟೆಂಬರ್ 24ರಂದು ಸೂರ್ಯ ತನ್ನ ಮೊಬೈಲ್ ಫೋನ್ ಬಿಟ್ಟು ನಾಪತ್ತೆಯಾಗಿದ್ದಾನೆ ಎಂದು ಯುವತಿ ತಿಳಿಸಿದ್ದಾರೆ. ಈ ಬಗ್ಗೆ ಆತನ ಪೋಷಕರನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪದೇಪದೇ ಕರೆ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದೂ ಯುವತಿ ದೂರಿದ್ದಾರೆ.

ಇದಲ್ಲದೆ, ತಮ್ಮ ವಿರುದ್ಧವೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಯುವತಿ ಹೇಳಿದ್ದಾರೆ. ಈ ಬೆಳವಣಿಗೆಗಳಿಂದ ತೀವ್ರವಾಗಿ ಮನನೊಂದ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ

ಸೂರ್ಯ ಗುರುವಾರದೊಳಗೆ ಬಂದು ತಮ್ಮನ್ನು ಮದುವೆಯಾಗಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ವಿಡಿಯೋವೊಂದರಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ತಮ್ಮ ಸಾವಿಗೆ ಸೂರ್ಯ, ಆತನ ಪೋಷಕರು ಹಾಗೂ ಪ್ರವೀಣ್ ಹೊಣೆಗಾರರಾಗುತ್ತಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಕಳೆದ 15 ದಿನಗಳಿಂದ ಸರಿಯಾಗಿ ಊಟ ಮಾಡಲಾಗದೆ, ನಿದ್ರೆಯೂ ಇಲ್ಲದೆ ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

Read More
Next Story