
ಬೆಂಗಳೂರಿನ ಕೆಆರ್ ರಸ್ತೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಘರ್ಷಣೆ ನಡೆದಿದ್ದು, ಐವರನ್ನು ಬಂಧಿಸಲಾಗಿದೆ.
ಈದ್ ಮಿಲಾದ್ ಮೆರವಣಿಗೆ ವೇಳೆ ಘರ್ಷಣೆ; ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ
ಗಲಭೆ ನಂತರ ಪುನೀತ್ ಕೆರೆಹಳ್ಳಿ ಹಾಗೂ ಅವರ ಸಹಚರರು ರಸ್ತೆಯಲ್ಲೇ ಕುಳಿತು ಘೋಷಣೆಗಳನ್ನು ಕೂಗಿ ಸಾರ್ವಜನಿಕ ಸಂಚಾರ ಮತ್ತು ಮೆರವಣಿಗೆಗೆ ಅಡ್ಡಿಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರದ ಕೆಆರ್ ರಸ್ತೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಆಗಸ್ಟ್ 26ರಂದು ಈದ್ ಮಿಲಾದ್ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಜಯನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಎರಡು ಮೆರವಣಿಗೆಗಳು ನಡೆದ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಕುಮಾರಸ್ವಾಮಿ ಲೇಔಟ್‌ನಿಂದ ಹೊರಟ ಮೆರವಣಿಗೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಬಸವನಗುಡಿ ಮೂಲಕ ಲಾಲ್‌ಬಾಗ್ ವೆಸ್ಟ್ ಗೇಟ್ ಹಾಗೂ ಜೆಸಿ ರಸ್ತೆಯ ಮಾರ್ಗವಾಗಿ ವೈಎಂಸಿಎ ಮೈದಾನದತ್ತ ಸಾಗುತ್ತಿತ್ತು.
ಕೆಆರ್ ರಸ್ತೆಯ ಗರಡಿ ಅಪಾರ್ಟ್‌ಮೆಂಟ್ ಬಳಿ, ಬನಶಂಕರಿ ಮತ್ತು ಬಸವನಗುಡಿ ಪೊಲೀಸ್ ಠಾಣೆಗಳ ಗಡಿಯಲ್ಲಿದ್ದಾಗ ಕೆಲವರು ಕೇಸರಿ ಧ್ವಜ ಹಿಡಿದು ‘ಜೈ ಶ್ರೀರಾಮ್’ ಘೋಷಣೆ ಕೂಗಿ ಮೆರವಣಿಗೆಯನ್ನು ಪ್ರಚೋದಿಸಲು ಹಾಗೂ ತಡೆಯಲು ಯತ್ನಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ವ್ಯಕ್ತಿಗಳ ಮೇಲೆ ಹಲ್ಲೆ ಆರೋಪ
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮುಂದಾದ ವೇಳೆ, ಮುಸ್ಲಿಂ ಸಮುದಾಯದ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯ ನಂತರ ಪುನೀತ್ ಕೆರೆಹಳ್ಳಿ ಹಾಗೂ ಅವರ ಸಹಚರರು ರಸ್ತೆಯಲ್ಲೇ ಕುಳಿತು ಘೋಷಣೆಗಳನ್ನು ಕೂಗಿ ಸಾರ್ವಜನಿಕ ಸಂಚಾರ ಮತ್ತು ಮೆರವಣಿಗೆಗೆ ಅಡ್ಡಿಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪುನೀತ್ ಕೆರೆಹಳ್ಳಿ ಆಂಬ್ಯುಲೆನ್ಸ್ ಏರಲು ನಿರಾಕರಿಸಿ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಮೂರು ಎಫ್‌ಐಆರ್ ದಾಖಲು
ಅಬ್ದುಲ್ ರಜಾಕ್ ಖಾನ್ ನೀಡಿದ ದೂರಿನ ಆಧಾರದ ಮೇಲೆ ಪುನೀತ್ ಕೆರೆಹಳ್ಳಿ, ಗೋಪಿಗೌಡ ಮತ್ತು ವಿನೋದ್ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ನೀಡಿದ ಪ್ರತಿದೂರಿನ ಆಧಾರದ ಮೇಲೆ ಅಖಿಲ್ ಪಾಷಾ, ಅಬೂಬಕರ್ ಸಿದ್ದೀಕ್ ಮತ್ತು ಸೈಯದ್ ಅನಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರತಿದೂರು ಆಧರಿಸಿ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಜೊತೆಗೆ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಇತರರ ವಿರುದ್ಧ ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲೂ ಬಿಎನ್‌ಎಸ್ ಸೆಕ್ಷನ್ 385ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

