
ರಾಜ್ಯ ರಾಜಧಾನಿಯಲ್ಲಿ ಭೀಕರ ಕೃತ್ಯ- ಪ್ರಿಯಕರನ ಜೊತೆ ಸೇರಿ ಗಂಡ-ಮಗನನ್ನೇ ಬರ್ಬರವಾಗಿ ಕೊಂದ ಪಾಪಿ
ಕೃತ್ಯದ ನಂತರ ರಕ್ತದ ಕಲೆಗಳನ್ನೆಲ್ಲ ತೊಳೆದು ಶುಚಿ ಮಾಡಿದ್ದ ಹರಿಣಿ, ತನ್ನ ಪತಿಯೇ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದಳು. ಘಟನೆ ಬಳಿಕ ಏನೂ ತಿಳಿಯದವಳಂತೆ ತವರಿಗೆ ಹೋಗಿ ಬಂದಿದ್ದಳು.
ಬೆಂಗಳೂರು ರಾಜಧಾನಿಯ ಚಿಕ್ಕಬಾಣಾವಾರದಲ್ಲಿ ಇತ್ತೀಚೆಗೆ ನಡೆದಿದ್ದ ತಂದೆ-ಮಗನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಪೊಲೀಸರ ತನಿಖೆಯಲ್ಲಿ ಭೀಕರ ಟ್ವಿಸ್ಟ್ ಸಿಕ್ಕಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಹಾಗೂ ಕೊಲೆಗೆ ಸಾಕ್ಷಿಯಾದ 4 ವರ್ಷದ ಹಸುಗೂಸನ್ನೇ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವುದು ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಭಿನಂದನ್ ಅವರ ಪತ್ನಿ ಹರಿಣಿಯನ್ನು ಚಿಕ್ಕಬಾಣಾವರ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ಸತ್ಯಾಂಶ ಹೊರಬಿದ್ದಿದೆ.
ಪೂರ್ವಯೋಜಿತವಾಗಿ ನಡೆದ ಕೃತ್ಯ
ಆರೋಪಿ ಹರಿಣಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡ ಅಭಿನಂದನ್ ಹಾಗೂ 4 ವರ್ಷದ ಮಗ ಯದುವೀರ್‌ರನ್ನು ಕೊಲ್ಲಲು ಪಕ್ಕಾ ಪ್ಲಾನ್ ಮಾಡಿದ್ದಳು. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಭಾನುವಾರವೇ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿಸಿದ್ದಳು. ನಂತರ ರಾತ್ರಿ 11 ಗಂಟೆಯ ಸುಮಾರಿಗೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು.
ಸೌಟ್‌ನಿಂದ ಹಲ್ಲೆ, ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ
ಮನೆಯಲ್ಲಿದ್ದ ಅಭಿನಂದನ್ ತಲೆಗೆ ಹರಿಣಿ ಸೌಟ್‌ನಿಂದ ಬಲವಾಗಿ ಹೊಡೆದಿದ್ದಾಳೆ. ಬಳಿಕ ಪ್ರಿಯಕರನ ಸಹಾಯದಿಂದ ದಿಂಬಿನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ತಾಯಿಯೇ ತಂದೆಯನ್ನು ಕೊಲ್ಲುತ್ತಿದ್ದ ಭೀಕರ ದೃಶ್ಯವನ್ನು 4 ವರ್ಷದ ಮಗ ಯದುವೀರ್ ನೋಡುತ್ತಾ ನಿಂತಿದ್ದ. ಈ ವಿಚಾರ ಮುಂದೆ ತಮಗೆ ತೊಂದರೆಯಾಗಬಹುದು ಎಂಬ ಭ್ರಮೆಯಿಂದ, ಹೆತ್ತ ಮಗನೆಂದೂ ನೋಡದೆ ಆ ಮಗುವನ್ನೂ ಇಬ್ಬರೂ ಸೇರಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.
ಕಥೆ ಕಟ್ಟಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ
ಕೃತ್ಯದ ನಂತರ ರಕ್ತದ ಕಲೆಗಳನ್ನೆಲ್ಲ ತೊಳೆದು ಶುಚಿ ಮಾಡಿದ್ದ ಹರಿಣಿ, ತಂದೆಯೇ ಮಗನನ್ನು ಕೊಂದು ತಾನೂ ಸತ್ತಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದಳು. ಘಟನೆ ಬಳಿಕ ಏನೂ ತಿಳಿಯದವಳಂತೆ ತವರಿಗೆ ಹೋಗಿ ಬಂದಿದ್ದಳು. ಪೊಲೀಸರಿಗೆ ಸಂಶಯ ಬಂದು ವಿಚಾರಿಸಿದಾಗ "ಬೆಳಿಗ್ಗೆ ಎದ್ದಾಗ ಗಂಡನ ಕಿವಿಯಲ್ಲಿ ರಕ್ತ ಬರ್ತಿತ್ತು, ಅರಿಶಿನ ಹಚ್ಚಿದೆ" ಎಂದು ನಾಟಕವಾಡಿದ್ದಳು.
ಆದರೆ, ಪೊಲೀಸರ ಖಾಕಿ ಡ್ರಿಲ್‌ಗೆ ಹೆದರಿದ ಹರಿಣಿ, ಕೊನೆಗೆ ಕೃತ್ಯವನ್ನು ಎಳೆಎಳೆಯಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಹರಿಣಿಯನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

