
ಚಲಿಸುವ ಬೈಕ್‌ನಲ್ಲೇ ಮದ್ಯಪಾನ, ಸಾರ್ವಜನಿಕರಿಗೆ ನಡುಕ: ಸಿಸಿಬಿ ಬಲೆಗೆ ಬಿದ್ದ ಕುಖ್ಯಾತ ರೌಡಿಶೀಟರ್!
ಬಂಧಿತರ ಪೈಕಿ ಓರ್ವ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ಮೇಲೆ ಬರೋಬ್ಬರಿ 13 ಅಪರಾಧ ಪ್ರಕರಣಗಳಿವೆ. ಇದರಲ್ಲಿ ಕೆಲವು ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಆತ ತಲೆಮರೆಸಿಕೊಂಡಿದ್ದ.
ಚಲಿಸುವ ದ್ವಿಚಕ್ರ ವಾಹನದಲ್ಲಿಯೇ ಮದ್ಯಪಾನ ಮಾಡಿಕೊಂಡು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಕುಖ್ಯಾತ ರೌಡಿಶೀಟರ್ ಹಾಗೂ ಆತನ ಸಹಚರನನ್ನು ಬೆಂಗಳೂರು ನಗರ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಮೇ 15ರ ರಾತ್ರಿ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಇಬ್ಬರು ವ್ಯಕ್ತಿಗಳು ತಾವರೆಕೆರೆ ಕಡೆಯಿಂದ ಬೆಂಗಳೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಬೈಕ್‌ನ ಹಿಂಬದಿ ಸವಾರ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಚಲಿಸುವ ವಾಹನದಲ್ಲೇ ಮದ್ಯಪಾನ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಜೋರಾಗಿ ಅರಚಾಡುತ್ತಾ, ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸಿಸಿಬಿ ಸಂಘಟಿತ ಅಪರಾಧ ದಳ (ಪಶ್ಚಿಮ ವಿಭಾಗ)ದ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರನ್ನೂ ವಾಹನ ಸಮೇತ ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.
13 ಕೇಸ್‌ಗಳಿದ್ದ ರೌಡಿಶೀಟರ್ ಅರೆಸ್ಟ್!
ವಶಕ್ಕೆ ಪಡೆದ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಅವರ ಅಪರಾಧ ಹಿನ್ನೆಲೆ ಬಯಲಾಗಿದೆ. ಬಂಧಿತರ ಪೈಕಿ ಓರ್ವ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ಮೇಲೆ ಬರೋಬ್ಬರಿ 13 ಅಪರಾಧ ಪ್ರಕರಣಗಳಿವೆ. ಇದರಲ್ಲಿ ಕೆಲವು ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಆತ ತಲೆಮರೆಸಿಕೊಂಡಿದ್ದ, ಹೀಗಾಗಿ ಈತನ ವಿರುದ್ಧ ಕೋರ್ಟ್ ವಾರಂಟ್‌ಗಳನ್ನು ಕೂಡ ಹೊರಡಿಸಿತ್ತು. ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಯ ಮೇಲೂ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲು
ಸಾರ್ವಜನಿಕವಾಗಿ ಪುಂಡಾಟ ಮೆರೆದ ಹಾಗೂ ನಿಯಮ ಉಲ್ಲಂಘಿಸಿದ ಈ ಇಬ್ಬರು ಆರೋಪಿಗಳ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ. ಸಿಸಿಬಿ ಸಂಘಟಿತ ಅಪರಾಧ ದಳದ (ಪಶ್ಚಿಮ ವಿಭಾಗ) ಅಧಿಕಾರಿಗಳು ಮತ್ತು ಸಿಬ್ಬಂದಿಯ ಈ ಕ್ಷಿಪ್ರ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರವಾಗಿ ಶ್ಲಾಘಿಸಿದ್ದಾರೆ.

