
ಬಾಲಕ ಕಾರಿಗೆ ಅಡ್ಡಬಂದು ಮೃತಪಟ್ಟಿದ್ದಾನೆ ಎಂದು ಆರೋಪಿ ಆರಂಭದಲ್ಲಿ ಹೇಳಿದ್ದಾನೆ ಎನ್ನಲಾಗಿದೆ.
ಬೆಂಗಳೂರು| ಪಟಾಕಿ ಕೊಡಿಸುವ ನೆಪದಲ್ಲಿ ಬಾಲಕನ ಕಿಡ್ನ್ಯಾಪ್, ಕೊಲೆ; ಆರೋಪಿ ಅರೆಸ್ಟ್
ಹತ್ಯೆಯ ಬಳಿಕ ಬಾಲಕನ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಆರೋಪಿಗಳು ಆಂಧ್ರಪ್ರದೇಶದತ್ತ ತೆರಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಚಿಕ್ಕಜಾಲ ಸರ್ವೀಸ್ ರಸ್ತೆಯಲ್ಲಿ ಕಾರು ಅಪಘಾತಕ್ಕೀಡಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ವಾಹನವನ್ನು ಪರಿಶೀಲಿಸಿದಾಗ ಡಿಕ್ಕಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಬೆಂಗಳೂರಿನ ಯಲಹಂಕದ ವಿನಾಯಕನಗರದಲ್ಲಿ 13 ವರ್ಷದ ಬಾಲಕನ ಅಪಹರಣ ಹಾಗೂ ಹತ್ಯೆ ಪ್ರಕರಣ ನಡೆದಿದೆ. ನೆರೆಮನೆಯ ವ್ಯಕ್ತಿಯೊಬ್ಬ ಪಟಾಕಿ ಕೊಡಿಸುವುದಾಗಿ ಬಾಲಕನನ್ನು ಕಾರಿನಲ್ಲಿ ಕರೆದೊಯ್ದು, ಬಳಿಕ ಆತನ ಪೋಷಕರಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ್ ರೆಡ್ಡಿ ಎಂಬಾತನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಏಡುಕುಂಡಲ ರೆಡ್ಡಿಗಾಗಿ ಶೋಧ ನಡೆಸಲಾಗುತ್ತಿದೆ.
ಸೆಪ್ಟೆಂಬರ್ 16ರ ಸಂಜೆ ಪಟಾಕಿ ತರಲು ಹೋಗೋಣ ಎಂದು ಹೇಳಿ ಭಾಸ್ಕರ್ ರೆಡ್ಡಿ ಬಾಲಕ ಪ್ರಜ್ವಲ್‌ನನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಬಳಿಕ ಬಾಲಕನಿಂದ ವಿಡಿಯೋ ಮಾಡಿಸಿ, ಪೋಷಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದರು.
ಇಬ್ಬರು ಸೇರಿ ಬಾಲಕನ ಮೇಲೆ ಹಲ್ಲೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾಸ್ಕರ್ ರೆಡ್ಡಿಯೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಕಾರಿನಲ್ಲಿದ್ದ. ಬಾಲಕನ ಕೈಕಾಲು ಮತ್ತು ಬಾಯಿಗೆ ಟೇಪ್ ಹಾಕಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕನ ಮೇಲೆ ಮತ್ತೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮೃತದೇಹ ಕಾರಿನ ಡಿಕ್ಕಿಯಲ್ಲಿ ಇಟ್ಟು ಪರಾರಿಗೆ ಯತ್ನ
ಹತ್ಯೆಯ ಬಳಿಕ ಬಾಲಕನ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಆರೋಪಿಗಳು ಆಂಧ್ರಪ್ರದೇಶದತ್ತ ತೆರಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಚಿಕ್ಕಜಾಲ ಸರ್ವೀಸ್ ರಸ್ತೆಯಲ್ಲಿ ಕಾರು ಅಪಘಾತಕ್ಕೀಡಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ವಾಹನವನ್ನು ಪರಿಶೀಲಿಸಿದಾಗ ಡಿಕ್ಕಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಅಪಘಾತದ ಕಥೆ ಕಟ್ಟಲು ಯತ್ನ
ಬಾಲಕ ಕಾರಿಗೆ ಅಡ್ಡಬಂದು ಮೃತಪಟ್ಟಿದ್ದಾನೆ ಎಂದು ಆರೋಪಿ ಆರಂಭದಲ್ಲಿ ಹೇಳಿದ್ದಾನೆ ಎನ್ನಲಾಗಿದೆ. ಆದರೆ ಪೊಲೀಸರ ವಿಚಾರಣೆ ಮತ್ತು ಪ್ರಾಥಮಿಕ ತನಿಖೆಯಲ್ಲಿ ಇದು ಅಪಘಾತವಲ್ಲ, ಉದ್ದೇಶಪೂರ್ವಕವಾಗಿ ನಡೆದ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಭಾಸ್ಕರ್ ರೆಡ್ಡಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.

