
ಬೆಂಗಳೂರು ಭೋಗನಹಳ್ಳಿಯಲ್ಲಿ ನಿರ್ಮಾಣ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಬಳಸಿದ ಆರೋಪ ಕೇಳಿಬಂದಿದೆ.
ರಾಜ್ಯ ರಾಜಧಾನಿಯಲ್ಲಿ 800 ಕೆ.ಜಿ ಜಿಲೆಟಿನ್ ವಶಕ್ಕೆ
ಬೆಂಗಳೂರು ಭೋಗನಹಳ್ಳಿಯಲ್ಲಿ ನಿರ್ಮಾಣ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಬಳಸಿದ ಆರೋಪ ಕೇಳಿಬಂದಿದ್ದು, ಬೆಳ್ಳಂದೂರು ಪೊಲೀಸರು 800 ಕೆ.ಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯಲ್ಲಿ ಅನುಮತಿ ಇಲ್ಲದೆ ಜಿಲೆಟಿನ್ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಳ್ಳಂದೂರು ಠಾಣೆ ಪೊಲೀಸರು 800 ಕೆ.ಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.
ಭೋಗನಹಳ್ಳಿಯಲ್ಲಿ ಆದರ್ಶ ಡೆವಲಪರ್ಸ್‌ಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ಬಂಡೆಗಳು ಪತ್ತೆಯಾಗಿದ್ದು, ಅವುಗಳನ್ನು ತೆರವುಗೊಳಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಲೆ ಸಮೀಪ ರಾತ್ರಿ ಬ್ಲಾಸ್ಟಿಂಗ್ ಆರೋಪ
ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಸಮೀಪದಲ್ಲೇ ಶಾಲೆಯೊಂದು ಇರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ 12 ಗಂಟೆಯ ಬಳಿಕ ಬಂಡೆಗಳನ್ನು ಸ್ಫೋಟಿಸಿ ತೆರವುಗೊಳಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಶಾಲೆಯ ಸಮೀಪ ಸ್ಫೋಟಕ ವಸ್ತುಗಳ ಬಳಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆಯೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಕಾನೂನುಬಾಹಿರ ಸ್ಫೋಟಕ ಬಳಕೆಗೆ ಒತ್ತಡ ಆರೋಪ
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸತೀಶ್ ನಾಯಕ್ ಎಂಬವರು ಭೂ ಕಾಮಗಾರಿ ನಡೆಸುತ್ತಿದ್ದರು. 2025ರ ಡಿಸೆಂಬರ್‌ನಲ್ಲಿ ಶ್ರೀನಿವಾಸ ಅರ್ಥ್ ಮೂವರ್ಸ್‌ನ ಮಾಲೀಕ ಅರುಣ್ ಕುಮಾರ್ ಅವರು ಭೋಗನಹಳ್ಳಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಅರ್ಥ್‌ವರ್ಕ್ ನಡೆಸಲು ತಮ್ಮನ್ನು ಸಂಪರ್ಕಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಕಾಮಗಾರಿ ಸಂದರ್ಭದಲ್ಲಿ ದೊಡ್ಡ ಕಲ್ಲುಬಂಡೆಗಳು ಎದುರಾದ ಬಳಿಕ ಅವುಗಳನ್ನು ತೆರವುಗೊಳಿಸಲು ಸ್ಫೋಟಕಗಳನ್ನು ಬಳಸುವಂತೆ ಒತ್ತಡ ಹೇರಲಾಗಿತ್ತು ಎಂದು ಸತೀಶ್ ನಾಯಕ್ ಆರೋಪಿಸಿದ್ದಾರೆ. ತಾವು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಳಿಕ ಕೆಲಸದಿಂದ ದೂರವಿಡಲಾಗಿದ್ದು, ಹಣ ನೀಡದೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲವರ ವಿರುದ್ಧ ಆರೋಪ
ಶ್ರೀನಿವಾಸ ಅರ್ಥ್ ಮೂವರ್ಸ್‌ನ ಮಾಲೀಕರು, ಸೈಟ್ ಇನ್‌ಚಾರ್ಜ್, ಸೈಟ್ ಎಂಜಿನಿಯರ್, ಆದರ್ಶ ಡೆವಲಪರ್ಸ್‌ನ ಮಾಲೀಕರು ಅಥವಾ ನಿರ್ದೇಶಕರು ಹಾಗೂ ಗುತ್ತಿಗೆದಾರರು ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಸಂಗ್ರಹಿಸಿ ಬಳಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಆರೋಪಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿರ್ಮಾಣ ಸ್ಥಳದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸುವ ಮತ್ತು ಬಳಸುವ ಕುರಿತು ತನಿಖೆ ನಡೆಸುತ್ತಿದ್ದಾರೆ.
ಜಿಲೆಟಿನ್ ಸಂಗ್ರಹದ ಬಗ್ಗೆ ತನಿಖೆ
ಪೊಲೀಸರ ಕಾರ್ಯಾಚರಣೆಯಲ್ಲಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಕ್ಕೆ ಪಡೆಯಲಾಗಿದೆ. ಸ್ಫೋಟಕಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗಿತ್ತು, ಅವುಗಳನ್ನು ಬಳಸಲು ಅಗತ್ಯ ಅನುಮತಿಗಳು ಇದ್ದವೆಯೇ ಹಾಗೂ ನಿರ್ಮಾಣ ಸ್ಥಳದಲ್ಲಿ ನಿಜವಾಗಿಯೂ ಬ್ಲಾಸ್ಟಿಂಗ್ ನಡೆಸಲಾಗುತ್ತಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

