
160 ಕೋಟಿ ರೂ. ಬಿಡಿಎ ಆಸ್ತಿ ಕಬಳಿಕೆ ಯತ್ನ: ಐವರ ವಿರುದ್ಧ ಎಫ್ಐಆರ್
ಬಿಡಿಎ ಜಾಗೃತ ದಳದ ಡಿವೈಎಸ್ಪಿ ಹನುಮಂತರಾಯ ಅವರು ನೀಡಿದ ದೂರಿನ ಆಧಾರದ ಮೇಲೆ ಅಕ್ರಮ ಭೂ ಕಬಳಿಕೆ ಪ್ರಕರಣ ದಾಖಲಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಗುಳುಂ ಮಾಡಲು ಯತ್ನಿಸಿದ ಭೂಗಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬೃಹತ್ ಭೂ ಹಗರಣ ಬಯಲಿಗೆ ಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸುಮಾರು 160 ಕೋಟಿ ರೂ. ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಐವರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬೆಂಗಳೂರು ದಕ್ಷಿಣದ ಕೊತ್ತನೂರಿನಲ್ಲಿ ಬೆಲೆಬಾಳುವ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸಿದ ಲಕ್ಷ್ಮೀನಾರಾಯಣ, ಮಾರುತಿ ಕುಮಾರ್ ಸೇರಿದಂತೆ ಐವರ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ.
ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ
ಬಿಡಿಎ ಜಾಗೃತ ದಳದ ಡಿವೈಎಸ್ಪಿ ಹನುಮಂತರಾಯ ಅವರು ನೀಡಿದ ದೂರಿನ ಆಧಾರದ ಮೇಲೆ ಅಕ್ರಮ ಭೂ ಕಬಳಿಕೆ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಗುಳುಂ ಮಾಡಲು ಯತ್ನಿಸಿದ ಭೂಗಳ್ಳರ ವಿರುದ್ಧ ಈಗ ಕಾನೂನು ಕ್ರಮ ಜರುಗಿಸಲಾಗಿದೆ.
ಬೆಂಗಳೂರು ದಕ್ಷಿಣದ ಕೊತ್ತನೂರಿನ ಸರ್ವೆ ನಂಬರ್ 177/1 ಮತ್ತು 176/1 ರಲ್ಲಿ ಬರುವ ಒಟ್ಟು 10 ಗುಂಟೆ ಆಸ್ತಿ ಇದಾಗಿದ್ದು, ಮಾರುಕಟ್ಟೆ ಮೌಲ್ಯದ ಪ್ರಕಾರ ಇದರ ಬೆಲೆ ಸುಮಾರು 160 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಜಮೀನನ್ನು ಬಿಡಿಎ 1994ರ ಅಕ್ಟೋಬರ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿತ್ತು. 1995ರ ಡಿಸೆಂಬರ್‌ನಲ್ಲಿ ಇದಕ್ಕೆ ಸಂಬಂಧಿಸಿದ ಪರಿಹಾರದ ತೀರ್ಪು ಅನುಮೋದನೆಗೊಂಡಿತ್ತು. 1999ರಲ್ಲಿ ಈ ಜಮೀನನ್ನು ಬಿಡಿಎ ಎಂಜಿನಿಯರ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಈ ಜಮೀನು ಬಿಡಿಎಗೆ ಸೇರಿದೆ ಎಂದು ಹೈಕೋರ್ಟ್ ಕೂಡ ಈ ಹಿಂದೆ ಆದೇಶ ನೀಡಿತ್ತು.
ಪರಿಹಾರ ಪಡೆದರೂ ವಂಚನೆ
ಈ ಜಮೀನಿಗೆ ಸಂಬಂಧಿಸಿದಂತೆ ಮೂಲ ವಾರಸುದಾರರಾದ ಮಾರಿಯಮ್ಮ ಎಂಬುವರಿಗೆ ಬಿಡಿಎ ಕಡೆಯಿಂದ 1996ರಲ್ಲೇ ಸೂಕ್ತ ಪರಿಹಾರ ನೀಡಲಾಗಿತ್ತು. ಆದಾಗ್ಯೂ, ಈ ಸತ್ಯ ಮುಚ್ಚಿಟ್ಟು ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಈ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಸಂಚು ರೂಪಿಸಿದ್ದರು.
ಇತ್ತೀಚೆಗೆ ಹರ್ಷವರ್ಧನ್ ಎಂಬುವರು ಬೃಹತ್ ಅಕ್ರಮದ ಬಗ್ಗೆ ಬಿಡಿಎ ಆಯುಕ್ತರಿಗೆ ಅಧಿಕೃತವಾಗಿ ದೂರು ನೀಡಿದ್ದರು. ಈ ದೂರಿನ ಗಂಭೀರತೆ ಪರಿಗಣಿಸಿ ಬಿಡಿಎ ಜಾಗೃತ ದಳದ ಡಿವೈಎಸ್ಪಿ ಹನುಮಂತರಾಯ ಅವರು ಪ್ರಾಥಮಿಕ ತನಿಖೆ ನಡೆಸಿದ್ದರು. ತನಿಖೆಯ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಈ ಪ್ರಕರಣದಲ್ಲಿ ಎರಡು ಪ್ರತ್ಯೇಕ ಸರ್ವೆ ನಂಬರ್‌ಗಳಿರುವುದರಿಂದ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ಲಕ್ಷ್ಮೀನಾರಾಯಣ, ಮಾರುತಿ ಕುಮಾರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಪ್ರಕರಣ ದಾಖಲಾಗಿದೆ.

