
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು ಏರ್‌ಪೋರ್ಟ್‌ನಲ್ಲಿ 70 ಲಕ್ಷ ಮೌಲ್ಯದ 'ಹೈಡ್ರೋಪೋನಿಕ್ ಗಾಂಜಾ ವಶಕ್ಕೆ
ಟರ್ಮಿನಲ್-2 ರಲ್ಲಿ ತಪಾಸಣೆ ವೇಳೆ ಈ ಅಕ್ರಮ ಪತ್ತೆಯಾಗಿದೆ. ಬ್ಯಾಂಕಾಕ್‌ನಿಂದ ಆಗಮಿಸಿದ ಪ್ರಯಾಣಿಕನ ಲಗೇಜ್ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಬ್ಯಾಗ್‌ನೊಳಗೆ ಹೈಟೆಕ್ ಮಾದರಿಯಲ್ಲಿ ಬೆಳೆದ ಗಾಂಜಾವನ್ನು ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೊಂದು ಭಾರೀ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ್ದಾರೆ. ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನೊಬ್ಬನ ಬ್ಯಾಗ್‌ನಲ್ಲಿದ್ದ ಬರೋಬ್ಬರಿ 2 ಕೆ.ಜಿ ತೂಕದ, ಸುಮಾರು 70 ಲಕ್ಷ ರೂ. ಮೌಲ್ಯದ 'ಹೈಡ್ರೋಪೋನಿಕ್ ಗಾಂಜಾ'ವನ್ನು ಜನವರಿ 31ರಂದು ವಶಪಡಿಸಿಕೊಳ್ಳಲಾಗಿದೆ.
ಟರ್ಮಿನಲ್-2 ರಲ್ಲಿ ತಪಾಸಣೆ ವೇಳೆ ಈ ಅಕ್ರಮ ಪತ್ತೆಯಾಗಿದೆ. ಬ್ಯಾಂಕಾಕ್‌ನಿಂದ ಆಗಮಿಸಿದ ಪ್ರಯಾಣಿಕನ ಲಗೇಜ್ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಬ್ಯಾಗ್‌ನೊಳಗೆ ಹೈಟೆಕ್ ಮಾದರಿಯಲ್ಲಿ ಬೆಳೆದ ಗಾಂಜಾವನ್ನು ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯನ್ನು ತಕ್ಷಣವೇ ಬಂಧಿಸಲಾಗಿದೆ.
ಎರಡು ವಾರದಲ್ಲಿ 5ನೇ ಪ್ರಕರಣ!
ಆತಂಕಕಾರಿ ವಿಷಯವೆಂದರೆ, ಕಳೆದ ಎರಡು ವಾರಗಳ ಅಂತರದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಹೈಡ್ರೋಪೋನಿಕ್ ಗಾಂಜಾ ಸಾಗಿಸಲು ಯತ್ನಿಸಿದ 5ನೇ ಪ್ರಕರಣ ಇದಾಗಿದೆ. ಈ ಹಿಂದೆ ನಡೆದ ಕಾರ್ಯಾಚರಣೆಗಳಲ್ಲಿ ಒಟ್ಟು 23 ಕೆ.ಜಿಗೂ ಅಧಿಕ ತೂಕದ, ಸುಮಾರು 7 ಕೋಟಿ ರೂ. ಮೌಲ್ಯದ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ವಿಮಾನ ಮಾರ್ಗದಲ್ಲಿ ಡ್ರಗ್ಸ್ ಸಾಗಾಟ ಹೆಚ್ಚಾಗುತ್ತಿರುವುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ.
ಏನಿದು ಹೈಡ್ರೋಪೋನಿಕ್ ಗಾಂಜಾ?
ಸಾಮಾನ್ಯ ಮಣ್ಣಿನಲ್ಲಿ ಬೆಳೆಯುವ ಗಾಂಜಾಗಿಂತ ಇದು ಭಿನ್ನ ಮತ್ತು ದುಬಾರಿ. ಇದನ್ನು ಮಣ್ಣಿನ ಬದಲಾಗಿ ಪೋಷಕಾಂಶಯುಕ್ತ ನೀರಿನಲ್ಲಿ ಪ್ರಯೋಗಾಲಯದ ಮಾದರಿಯಲ್ಲಿ ಬೆಳೆಸಲಾಗುತ್ತದೆ. ಸಾಮಾನ್ಯ ಗಾಂಜಾದಲ್ಲಿ ಶೇ. 5-10 ರಷ್ಟು ಟಿಎಚ್‌ಸಿ ಅಂಶವಿದ್ದರೆ, ಹೈಡ್ರೋಪೋನಿಕ್ ಗಾಂಜಾದಲ್ಲಿ ಶೇ. 20-30 ರಷ್ಟು ಟಿಎಚ್‌ಸಿ ಇರುತ್ತದೆ.
ಇದು ವಾಣಿಜ್ಯ ಪ್ರಮಾಣದಲ್ಲಿ ಸಿಕ್ಕಿಬಿದ್ದರೆ, ಎನ್‌ಡಿಪಿಎಸ್ ಕಾಯ್ದೆಯಡಿ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಸರಣಿ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಬ್ಯಾಂಕಾಕ್ ಮತ್ತು ಇತರ ಆಗ್ನೇಯ ಏಷ್ಯಾ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

