ಕರಾವಳಿಯಲ್ಲಿ ಯುವತಿಯ ಭೀಕರ ಹತ್ಯೆ: ಕೃತ್ಯದ ಹಿನ್ನೆಲೆ ವಿವರಿಸಿದ ಎಸ್‌ಪಿ
x

ಕರಾವಳಿಯಲ್ಲಿ ಯುವತಿಯ ಭೀಕರ ಹತ್ಯೆ: ಕೃತ್ಯದ ಹಿನ್ನೆಲೆ ವಿವರಿಸಿದ ಎಸ್‌ಪಿ

ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಗೆ ಅಸಲಿ ಕಾರಣವೇನು ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಬಹಿರಂಗಪಡಿಸಿದ್ದಾರೆ.


ಬಂಟ್ವಾಳ ತಾಲೂಕಿನ ಜನತೆಯನ್ನೇ ಬೆಚ್ಚಿಬೀಳಿಸಿದ್ದ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕುಮಾರ್ ಅವರು ಅಸಲಿ ಕಾರಣವನ್ನು ಬಯಲು ಮಾಡಿದ್ದಾರೆ. ಕೊಲೆಯಾದ ಕೇವಲ 24 ಗಂಟೆಗಳ ಒಳಗೆ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸ್ ನಿಲ್ದಾಣದಲ್ಲೇ ನಡೆದಿದ್ದ ಭೀಕರ ಕೃತ್ಯ

ದಿನನಿತ್ಯದಂತೆ ತನ್ನ ಕೆಲಸ ಮುಗಿಸಿ ಮನೆಗೆ ಮರಳಲು ಬಸ್ ಹತ್ತಿದ್ದ ಲಾವಣ್ಯ, ಬಿ.ಸಿ. ರೋಡ್‌ನ ಸಾರಿಗೆ ಬಸ್ ನಿಲ್ದಾಣದಲ್ಲೇ ಕ್ರೂರ ಹಂತಕನ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ನೂರಾರು ಜನರ ಸಮ್ಮುಖದಲ್ಲೇ ಹಂತಕ ಚೇತನ್ ತಲ್ವಾರ್‌ನಿಂದ ಲಾವಣ್ಯ ಮೇಲೆ ಬರ್ಬರವಾಗಿ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದನು. ಈ ಭೀಕರ ಕೃತ್ಯ ಇಡೀ ಜಿಲ್ಲೆಯನ್ನೇ ನಡುಗಿಸಿತ್ತು.

ಕೊಲೆಗೆ ಅಸಲಿ ಕಾರಣವೇನು? 'ಒನ್ ಸೈಡ್ ಲವ್'

ಲಾವಣ್ಯ ಮತ್ತು ಚೇತನ್ ಪ್ರೀತಿಸುತ್ತಿದ್ದರು, ನಂತರ ಬ್ರೇಕ್ ಅಪ್ ಆಗಿದ್ದರಿಂದ ಈ ಕೊಲೆ ನಡೆದಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇದು ಯಾವುದೇ ಬ್ರೇಕ್ ಅಪ್ ಕೊಲೆಯಲ್ಲ, ಬದಲಿಗೆ 'ಒನ್ ಸೈಡ್ ಲವ್' ಎಂದು ತಿಳಿಸಿದ್ದಾರೆ.

ಆರೋಪಿ ಚೇತನ್ ಮೃತ ಲಾವಣ್ಯಳಿಗೆ ದೂರದ ಸಂಬಂಧಿಯಾಗಿದ್ದನು. ಆದರೆ ಆತನ ಪ್ರೀತಿಯ ಪ್ರಸ್ತಾಪವನ್ನು ಲಾವಣ್ಯ ಸಂಪೂರ್ಣವಾಗಿ ನಿರಾಕರಿಸಿದ್ದಳು. ಇದೇ ದ್ವೇಷದಿಂದ ಆಕೆಯನ್ನು ಹತ್ಯೆ ಮಾಡಲು ಚೇತನ್ ಸಂಚು ರೂಪಿಸಿದ್ದನು.

ಇಲಿ ಪಾಷಣ ತಿಂದಿದ್ದ ಆರೋಪಿ ಬಂಧನ

ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಚೇತನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆದರೆ, ಬಂಧನದ ಬಳಿಕ ವಿಚಾರಣೆ ನಡೆಸುವಾಗ ತಾನು ಇಲಿ ಪಾಷಣ (ವಿಷ) ಸೇವಿಸಿರುವುದಾಗಿ ಆರೋಪಿ ಬಾಯಿಬಿಟ್ಟಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ಚಿಕಿತ್ಸೆಯ ನಂತರ ತನಿಖೆಯನ್ನು ತೀವ್ರಗೊಳಿಸಿ ಸಂಪೂರ್ಣ ಸತ್ಯವನ್ನು ಹೊರಗೆಳೆಯಲಾಗುವುದು ಎಂದು ಎಸ್‌ಪಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

Read More
Next Story