
ಆರೋಪಿಗಳನ್ನು ಕರೆತಂದ ಸಿಸಿಬಿ ಪೊಲೀಸರು.
ಡಿಜಿಟಲ್ ಅರೆಸ್ಟ್ ಭೀತಿ: ಬೆಂಗಳೂರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಲೂಟಿ, ಐವರ ಬಂಧನ!
ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದಾಗಿ ವೃದ್ಧೆ ತನ್ನಲ್ಲಿದ್ದ ಉಳಿದ ಚಿನ್ನಾಭರಣಗಳನ್ನು ಕಳೆದುಕೊಳ್ಳುವುದರಿಂದ ಪಾರಾಗಿದ್ದಲ್ಲದೆ, ಕಳೆದ ಐದು ತಿಂಗಳಿನಿಂದ ನಡೆಯುತ್ತಿದ್ದ ಈ ಮಹಾ ವಂಚನೆ ಜಾಲ ಕೊನೆಗೂ ಪತ್ತೆಯಾಗಿದೆ.
ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ 'ಡಿಜಿಟಲ್ ಅರೆಸ್ಟ್' ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಹೆಸರಿನಲ್ಲಿ ಹೆದರಿಸಿ, ಶಿವಾಜಿನಗರದ ವೃದ್ಧೆಯೋರ್ವರಿಂದ ಬರೋಬ್ಬರಿ 24 ಕೋಟಿ ರೂ. ದೋಚಿದ್ದ ಐದು ಮಂದಿ ಅಂತರರಾಜ್ಯ ವಂಚಕರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದಾಗಿ ವೃದ್ಧೆ ತನ್ನಲ್ಲಿದ್ದ ಉಳಿದ ಚಿನ್ನಾಭರಣಗಳನ್ನು ಕಳೆದುಕೊಳ್ಳುವುದರಿಂದ ಪಾರಾಗಿದ್ದಲ್ಲದೆ, ಕಳೆದ ಐದು ತಿಂಗಳಿನಿಂದ ನಡೆಯುತ್ತಿದ್ದ ಈ ಮಹಾ ವಂಚನೆ ಜಾಲ ಕೊನೆಗೂ ಪತ್ತೆಯಾಗಿದೆ. ಪೊಲೀಸರು ಮುಂಬೈ, ಅಲಹಾಬಾದ್ ಮತ್ತು ದೆಹಲಿ ಮೂಲದ ಗೌರವ್ ಕುಮಾರ್, ಓಂ ಪ್ರಕಾಶ್ ರಾಜ್‌ಪುತ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಸ್ತಿ ಮಾರಿದ ಹಣದ ಮೇಲಿತ್ತು ಖದೀಮರ ಕಣ್ಣು!
ಪೊಲೀಸ್ ಮೂಲಗಳ ಪ್ರಕಾರ, ಶಿವಾಜಿನಗರ ನಿವಾಸಿಯಾಗಿರುವ ಲಕ್ಷ್ಮೀ ಎಂಬ ವೃದ್ಧೆಗೆ ಇತ್ತೀಚೆಗೆ ಆಸ್ತಿ ಮಾರಾಟ ಮಾಡಿದ್ದರಿಂದ ಕೋಟ್ಯಂತರ ರೂಪಾಯಿ ಹಣ ಬಂದಿತ್ತು. ಈ ಬ್ಯಾಂಕ್ ವಹಿವಾಟಿನ ರಹಸ್ಯ ಮಾಹಿತಿ ಪಡೆದಿದ್ದ ವಂಚಕರು, ಕಳೆದ ಜನವರಿ ತಿಂಗಳಿನಿಂದಲೇ ಆಕೆಯನ್ನು ಟಾರ್ಗೆಟ್ ಮಾಡಿದ್ದರು. "ನಿಮ್ಮ ಖಾತೆಯ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿದೆ, ನೀವು ದೊಡ್ಡ ಅಪರಾಧ ಮಾಡಿದ್ದೀರಿ" ಎಂದು ಹೆದರಿಸಿ ತನಿಖೆಯ ಹೆಸರಲ್ಲಿ ವೃದ್ಧೆಯನ್ನು 'ಡಿಜಿಟಲ್ ಅರೆಸ್ಟ್' ಮಾಡಿದ್ದರು. ತೀವ್ರ ಭಯಭೀತರಾಗಿದ್ದ ವೃದ್ಧೆಯಿಂದ ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಹಂತಹಂತವಾಗಿ ಒಟ್ಟು 24 ಕೋಟಿ ರೂ. ಹಣವನ್ನು ವಸೂಲಿ ಮಾಡಿದ್ದರು.
ವಂಚನೆ ಬಯಲಾಗಿದ್ದು ಹೇಗೆ ?
24 ಕೋಟಿ ರೂ. ಲೂಟಿ ಮಾಡಿದರೂ ಖದೀಮರ ಹಣದ ದಾಹ ತೀರಿರಲಿಲ್ಲ. ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಿದ್ದಾಗ, ವೃದ್ಧೆ ಲಕ್ಷ್ಮೀ ಅವರು ತಮ್ಮ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನದ ಒಡವೆಗಳನ್ನು ಅಡಮಾನವಿಟ್ಟು ಹಣ ಪಡೆಯಲು ಬ್ಯಾಂಕ್‌ಗೆ ಧಾವಿಸಿದ್ದರು. ವೃದ್ಧೆಯ ವರ್ತನೆ ಹಾಗೂ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನ ಇಡಲು ಬಂದಿದ್ದರ ಹಿಂದೆ ಏನೋ ಗೊಂದಲ ಇರುವುದನ್ನು ಗಮನಿಸಿದ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಎಐ ಆಧಾರಿತ ಚಿತ್ರ
ಧೈರ್ಯ ನೀಡಿದ ಕೌನ್ಸಿಲಿಂಗ್
ಮಾಹಿತಿ ಸಿಗುತ್ತಿದ್ದಂತೆ ಬ್ಯಾಂಕ್‌ಗೆ ಧಾವಿಸಿದ ಸಿಸಿಬಿ ಸೈಬರ್ ಪೊಲೀಸರು ವೃದ್ಧೆಯನ್ನು ವಿಚಾರಣೆಗೆ ಒಳಪಡಿಸಿದರು. ಆರಂಭದಲ್ಲಿ ಹೆದರಿ ಏನನ್ನೂ ಬಾಯಿಬಿಡದ ವೃದ್ಧೆ, ಪೊಲೀಸರು ಕೌನ್ಸೆಲಿಂಗ್ ನಡೆಸಿ ತಮ್ಮದೇ ಶೈಲಿಯಲ್ಲಿ ಧೈರ್ಯ ತುಂಬಿದಾಗ 'ಡಿಜಿಟಲ್ ಅರೆಸ್ಟ್' ಆಗಿರುವ ಆಘಾತಕಾರಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ.
60 ಲಕ್ಷ ರೂ. ಸೀಜ್
ಸಂತ್ರಸ್ತ ವೃದ್ಧೆಯಿಂದ ತಕ್ಷಣವೇ ದೂರು ದಾಖಲಿಸಿಕೊಂಡ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಕಾರ್ಯಪ್ರವೃತ್ತರಾದ ಸಿಸಿಬಿ ತಂಡ ಉತ್ತರ ಭಾರತದ ವಿವಿಧೆಡೆ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ವೃದ್ಧೆಯಿಂದ ಸುಲಿಗೆ ಮಾಡಿದ್ದ ಹಣವನ್ನು ಒಟ್ಟು 22 ವಿಭಿನ್ನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ. ಸದ್ಯಕ್ಕೆ 60 ಲಕ್ಷ ರೂ. ನಗದು ಹೊಂದಿದ್ದ ಪ್ರಮುಖ ಖಾತೆಗಳನ್ನು ಪೊಲೀಸರು ಸೀಜ್ ಮಾಡಿದ್ದು, ಉಳಿದ ಹಣದ ಪತ್ತೆಗಾಗಿ ತೀವ್ರ ತನಿಖೆ ಮುಂದುವರಿಸಿದ್ದಾರೆ.

