
ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ|9 ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ- ಕಾಮುಕ ಬಂಧನ
Physical abuse case| ಚಾಕೊಲೇಟ್ ನೀಡುವುದಾಗಿ ನಂಬಿಸಿ ಶಾಲಾ ಆವರಣ ಹಾಗೂ ಶೌಚಾಲಯದಲ್ಲಿ ಒಂಬತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯ ಹೊರವಲಯದ ಆನೇಕಲ್ನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ಚಾಕೊಲೇಟ್ ಆಮಿಷ ಒಡ್ಡಿ ಎಳೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕನೊಬ್ಬನನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ ಬಳಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಎಂದು ಗುರುತಿಸಲಾಗಿದೆ.
ಈತ ಶಾಲೆಯ ವಿದ್ಯಾರ್ಥಿಗಳಿಗೆ ಚಾಕೊಲೇಟ್ ನೀಡುವುದಾಗಿ ಆಸೆ ತೋರಿಸಿ ಅವರನ್ನು ಏಕಾಂತಕ್ಕೆ ಕರೆದೊಯ್ಯುತ್ತಿದ್ದನು. ಕೇವಲ ಒಬ್ಬಿಬ್ಬರಲ್ಲದೇ, ಸುಮಾರು 9 ಶಾಲಾ ಮಕ್ಕಳ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಕೃಷ್ಣಮೂರ್ತಿ ಶಾಲಾ ಆವರಣದಲ್ಲಿ ಹಾಗೂ ಶೌಚಾಲಯದ ಬಳಿ ಮಕ್ಕಳನ್ನು ಬಳಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದನು. ಶಾಲೆಯ ಆವರಣದಂತಹ ಸುರಕ್ಷಿತ ಜಾಗದಲ್ಲೇ ಇಂತಹ ಕೃತ್ಯ ನಡೆದಿದ್ದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಆರೋಪಿಯ ಈ ದುಷ್ಕೃತ್ಯದಿಂದ ನೊಂದ ಮಕ್ಕಳು, ಮನೆಯಲ್ಲಿ ಪೋಷಕರ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಮಕ್ಕಳ ಮಾತು ಕೇಳಿ ಬೆಚ್ಚಿಬಿದ್ದ ಪೋಷಕರು ತಕ್ಷಣವೇ ಆನೇಕಲ್ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ನಿನ್ನೆ ಮುಂಜಾನೆಯೇ ಕಾರ್ಯಾಚರಣೆ ನಡೆಸಿ ಆರೋಪಿ ಕೃಷ್ಣಮೂರ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ
ಬಂಧಿತ ಆರೋಪಿ ಕೃಷ್ಣಮೂರ್ತಿ ವಿರುದ್ಧ ಪೊಲೀಸರು ಪೋಕ್ಸೋ (POCSO - Protection of Children from Sexual Offences) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈತನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಅಥವಾ ಇನ್ನು ಹೆಚ್ಚಿನ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

