
ವಿಚಾರಣೆಯಲ್ಲಿ ಈ ಜಾಲದಿಂದ ಈಗಾಗಲೇ ಎರಡು ದೇಶೀ ಪಿಸ್ತೂಲ್‌ಗಳನ್ನು ಮಾರಾಟ ಮಾಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಆನೇಕಲ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಜಾಲ ಪತ್ತೆ: 7 ಮಂದಿ ಅರೆಸ್ಟ್
ಆನೇಕಲ್‌ಗೆ ಬಂದೂಕುಗಳನ್ನು ತಂದು ಅವುಗಳನ್ನು ಮತ್ತೊಬ್ಬರಿಗೆ ನೀಡಲು ಕಾಯುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ರಮೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಅಕ್ರಮವಾಗಿ ಬಂದೂಕುಗಳ ಮಾರಾಟ ಮತ್ತು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತರ ಪೈಕಿ ಆರು ಮಂದಿ ರೌಡಿ ಶೀಟರ್‌ಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಪ್ರದೀಪ್ ರಮೇಶ್, ಮನೋಜ್ ಅಲಿಯಾಸ್ ಜಾಕಿ, ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್, ನಂಜಪ್ಪ ಅಲಿಯಾಸ್ ಡೆಡ್ಲಿ ನಂಜ, ವೆಂಕಟರಾಜು ಅಲಿಯಾಸ್ ತುಕಡಿ, ಗೋಪಿ ಅಲಿಯಾಸ್ ಸುಣವಾರ ಗೋಪಿ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ.
ಅನುಮಾನಾಸ್ಪದವಾಗಿ ಸಿಕ್ಕಿಬಿದ್ದ ಆರೋಪಿಗಳು
ಆಗಸ್ಟ್ 14ರಂದು ಆನೇಕಲ್ ಸಮೀಪದ ಹಾಲ್ದೇನಹಳ್ಳಿ ರೈಲ್ವೆ ಹಾಲ್ಟ್ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಕೆಲವರು ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ನಿಂತಿರುವುದು ಗಮನಕ್ಕೆ ಬಂದಿದೆ. ಅವರನ್ನು ತಡೆದು ಪರಿಶೀಲಿಸಿದಾಗ ಮೂರು ದೇಶೀ ಪಿಸ್ತೂಲ್‌ಗಳು ಹಾಗೂ 10 ಗುಂಡುಗಳು ಪತ್ತೆಯಾಗಿದ್ದವು.
ನಂತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆ ಜಾಲದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಿಂದ ಬೆಂಗಳೂರಿಗೆ ಗನ್ ಪೂರೈಕೆ?
ತನಿಖೆಯ ವೇಳೆ ಮಧ್ಯಪ್ರದೇಶದ ಬೇಡ ಘಾಟ್ ಗ್ರಾಮದ ದಾವೂದ್ ಎಂಬಾತ ಈ ಜಾಲದ ಪ್ರಮುಖ ವ್ಯಕ್ತಿ ಎಂದು ಪೊಲೀಸರು ಶಂಕಿಸಿದ್ದಾರೆ. ದಾವೂದ್, ಪ್ರದೀಪ್ ರಮೇಶ್ ಮೂಲಕ ರೈಲಿನಲ್ಲಿ ಆನೇಕಲ್‌ಗೆ ಬಂದೂಕುಗಳನ್ನು ಕಳುಹಿಸಿದ್ದಾನೆ ಎನ್ನಲಾಗಿದೆ. ಆನೇಕಲ್‌ಗೆ ಬಂದೂಕುಗಳನ್ನು ತಂದು ಅವುಗಳನ್ನು ಮತ್ತೊಬ್ಬರಿಗೆ ತಲುಪಿಸಲು ಪ್ರದೀಪ್ ರಮೇಶ್ ಕಾಯುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರಿಗೆ ಪಿಸ್ತೂಲ್ ಮಾರಾಟದ ಮಾಹಿತಿ
ವಿಚಾರಣೆ ವೇಳೆ ಈ ಜಾಲದಿಂದ ಎರಡು ದೇಶೀ ಪಿಸ್ತೂಲ್‌ಗಳನ್ನು ಈಗಾಗಲೇ ಮಾರಾಟ ಮಾಡಿರುವ ಮಾಹಿತಿ ಕೂಡ ಪೊಲೀಸರಿಗೆ ಲಭಿಸಿದೆ. ಕೆ.ಜಿ. ಹಳ್ಳಿ ಮೂಲದ ರೌಡಿ ಶೀಟರ್ ಕುಳ್ಳ ರಿಜ್ವಾನ್ ಹಾಗೂ ಮನೋಜ್ ಅಲಿಯಾಸ್ ಜಾಕಿಗೆ ತಲಾ ಒಂದು ಪಿಸ್ತೂಲ್ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಾಹಿತಿ ಆಧರಿಸಿ ಇಬ್ಬರ ಬಳಿಯಿದ್ದ ಬಂದೂಕುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಶಸ್ತ್ರಾಸ್ತ್ರ ಪೂರೈಕೆದಾರರು ಹಾಗೂ ಜಾಲದಲ್ಲಿ ಭಾಗಿಯಾಗಿರುವ ಇತರರಿಗಾಗಿ ತನಿಖೆ ಮುಂದುವರಿದಿದೆ.
ಪ್ರಭಾವಿಗಳ ಸಂಪರ್ಕದ ಬಗ್ಗೆಯೂ ತನಿಖೆ
ಅಕ್ರಮ ಗನ್ ವ್ಯವಹಾರದ ಹಿಂದೆ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪರ್ಕ ಇರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಮುಂದಿನ ಹಂತದಲ್ಲಿ ಮತ್ತಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ.

