
Darshan Bail Plea | ನಟ ದರ್ಶನ್‌ಗೆ ಸಿಗುತ್ತಾ ರಿಲೀಫ್? ಇಂದು ಸುಪ್ರೀಂಕೋರ್ಟ್‌ನಲ್ಲಿ ಹೊಸ ಜಾಮೀನು ಅರ್ಜಿ ವಿಚಾರಣೆ!
ನಟ ದರ್ಶನ್ ಸಲ್ಲಿಸಿರುವ ಹೊಸ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. 273 ಸಾಕ್ಷಿಗಳ ಪೈಕಿ ಕೇವಲ 15 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜಾಮೀನಿಗಾಗಿ ಮನವಿ ಮಾಡಲಾಗಿದೆ.
ಸ್ಯಾಂಡಲ್‌ವುಡ್ ನಟ ದರ್ಶನ್ ಅವರಿಗೆ ಇಂದು ಅತ್ಯಂತ ನಿರ್ಣಾಯಕ ದಿನ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಸಲ್ಲಿಸಿರುವ ಹೊಸ ಜಾಮೀನು ಅರ್ಜಿಯು ಇಂದು (ಸೋಮವಾರ) ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ದರ್ಶನ್ ಪರ ವಕೀಲರು ಸುಪ್ರೀಂನಲ್ಲಿ ಬಲವಾದ ವಾದ ಮಂಡಿಸುವ ಸಾಧ್ಯತೆ ಇದೆ.
ಹೊಸ ರಿಟ್ ಅರ್ಜಿ ಸಲ್ಲಿಸಲು ಕಾರಣವೇನು?
2025ರ ಆಗಸ್ಟ್ 14ರಂದು ನಡೆದಿದ್ದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ಅಂದು ಜಾಮೀನು ರದ್ದುಗೊಳಿಸುವಾಗ ಪ್ರಕರಣದ ಗಂಭೀರತೆಯನ್ನು ಕೋರ್ಟ್ ಪರಿಗಣಿಸಿತ್ತು. ಆದರೆ, ಆ ಆದೇಶ ಹೊರಬಂದು ಎಂಟು ತಿಂಗಳು ಕಳೆದರೂ ಸಾಕ್ಷಿಗಳ ವಿಚಾರಣೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂಬುದು ದರ್ಶನ್ ಪರ ವಕೀಲರ ಪ್ರಮುಖ ವಾದವಾಗಿದೆ.
ವಿಳಂಬವಾಗುತ್ತಿರುವ ಸಾಕ್ಷಿಗಳ ವಿಚಾರಣೆ
ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಹೊಸ ರಿಟ್ ಅರ್ಜಿಯಲ್ಲಿ ಪ್ರಮುಖ ಆಂಶಗಳನ್ನು ಉಲ್ಲೇಖಿಸಿದ್ದು, ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದರೂ ಕಳೆದ ಎಂಟು ತಿಂಗಳಲ್ಲಿ ಕೇವಲ 15 ಸಾಕ್ಷಿಗಳ ವಿಚಾರಣೆಯಷ್ಟೇ ಪೂರ್ಣಗೊಂಡಿದೆ ಎಂದು ಆಕ್ಷೇಪಿಸಿದ್ದಾರೆ; ಇದೇ ವೇಗದಲ್ಲಿ ವಿಚಾರಣೆ ಮುಂದುವರಿದರೆ ಪ್ರಕರಣ ಮುಕ್ತಾಯಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು ಹಾಗೂ ವಿಚಾರಣೆಯ ಹೆಸರಿನಲ್ಲಿ ಆರೋಪಿಯನ್ನು ಅನಿರ್ದಿಷ್ಟ ಕಾಲ ಜೈಲಿನಲ್ಲಿಡುವುದು ಸರಿಯಲ್ಲ ಎಂಬ ಬಲವಾದ ವಾದವನ್ನು ಅರ್ಜಿಯಲ್ಲಿ ಮಂಡಿಸಲಾಗಿದೆ.
ನ್ಯಾಯಮೂರ್ತಿ ಪರ್ದೀವಾಲ ಪೀಠದಲ್ಲಿ ವಿಚಾರಣೆ
ಇಂದು ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದೆ. ಸಾಕ್ಷಿಗಳ ವಿಚಾರಣೆ ಇಷ್ಟು ವಿಳಂಬವಾಗಲು ಕಾರಣವೇನು? ಮತ್ತು ಈ ವಿಳಂಬದ ಆಧಾರದ ಮೇಲೆ ದರ್ಶನ್‌ಗೆ ಜಾಮೀನು ನೀಡಬಹುದೇ? ಎಂಬ ಬಗ್ಗೆ ಸುಪ್ರೀಂಕೋರ್ಟ್ ಯಾವ ನಿಲುವು ತಳೆಯಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಒಂದು ವೇಳೆ ಸುಪ್ರೀಂಕೋರ್ಟ್ ಈ ವಾದವನ್ನು ಒಪ್ಪಿಕೊಂಡರೆ, ಸುಮಾರು ಎಂಟು ತಿಂಗಳ ನಂತರ ದರ್ಶನ್ ಅವರಿಗೆ ಮತ್ತೆ ಜಾಮೀನು ಸಿಗುವ ಭರವಸೆ ಮೂಡಲಿದೆ.

