
ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಕೊನೆಗೂ ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
15 ವರ್ಷಗಳ ಹಿಂದೆ ಸಕಲೇಶಪುರ ಜೈಲಿನಿಂದ ಪರಾರಿಯಾಗಿದ್ದ ಆರೋಪಿ ಗೋವಾದಲ್ಲಿ ಸೆರೆ!
ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಮತ್ತು ದರೋಡೆ ಪ್ರಕರಣಗಳ ಅಡಿ ಆರೋಪಿ ಚನ್ನಕೇಶವನನ್ನು ಬಂಧಿಸಿ ಸಕಲೇಶಪುರ ಜೈಲಿನಲ್ಲಿರಿಸಲಾಗಿತ್ತು. ಆದರೆ, 2011ರಲ್ಲಿ ಪೊಲೀಸರ ಕಣ್ತಪ್ಪಿಸಿ ಆತ ಜೈಲಿನಿಂದ ಪರಾರಿಯಾಗಿದ್ದ.
ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ಸುಮಾರು 15 ವರ್ಷಗಳ ಹಿಂದೆ ಸಕಲೇಶಪುರ ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಕೊನೆಗೂ ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಸಕಲೇಶಪುರ ತಾಲೂಕಿನ ನಲ್ಲುಲ್ಲಿ ಗ್ರಾಮದ ನಿವಾಸಿ ಚನ್ನಕೇಶವ ಎಂದು ಗುರುತಿಸಲಾಗಿದೆ.
ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಮತ್ತು ದರೋಡೆ ಪ್ರಕರಣಗಳ ಅಡಿ ಆರೋಪಿ ಚನ್ನಕೇಶವನನ್ನು ಬಂಧಿಸಿ ಸಕಲೇಶಪುರ ಜೈಲಿನಲ್ಲಿರಿಸಲಾಗಿತ್ತು. ಆದರೆ, 2011ರಲ್ಲಿ ಪೊಲೀಸರ ಕಣ್ತಪ್ಪಿಸಿ ಆತ ಜೈಲಿನಿಂದ ಪರಾರಿಯಾಗಿದ್ದ. ಅಂದಿನಿಂದ ಸುಮಾರು 15 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಈತನಿಗೆ ಪೊಲೀಸರು ಬಲೆಬೀಸಿದ್ದರು.
ಗೋವಾದಲ್ಲಿ ಬಂಧನ:
ಆರೋಪಿ ಚನ್ನಕೇಶವ ಗೋವಾದಲ್ಲಿ ಅಡಗಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸ್ ತಂಡ, ಕೂಡಲೇ ಗೋವಾಕ್ಕೆ ಧಾವಿಸಿದೆ. ಆತ ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಗೋವಾದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿಯನ್ನು ಆಧರಿಸಿ, ರೆಸ್ಟೋರೆಂಟ್ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು ಚನ್ನಕೇಶವನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿಯನ್ನು ಗೋವಾದಿಂದ ಹಾಸನಕ್ಕೆ ಕರೆತರಲಾಗಿದ್ದು, ಮತ್ತೆ ಜೈಲಿಗೆ ಕಳುಹಿಸಲಾಗಿದೆ. 15 ವರ್ಷಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿ ಕೊನೆಗೂ ಕಾನೂನಿನ ಕುಣಿಕೆಗೆ ಸಿಲುಕಿದ್ದಾನೆ.

