
ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮೂರು ವರ್ಷದ ಕಂದಮ್ಮನಿಗೆ ಔಷಧಿಯ ಬದಲು 'ಫಾರ್ಮಾಲಿನ್' ಎಂಬ ರಾಸಾಯನಿಕವನ್ನು ಇಂಜೆಕ್ಟ್ ಮಾಡಿದ ಪರಿಣಾಮ ಮಗು ದಾರುಣವಾಗಿ ಸಾವನ್ನಪ್ಪಿದೆ.
ಕ್ಯಾನ್ಸರ್ ಪೀಡಿತ ಮಗುವಿಗೆ ಫಾರ್ಮಾಲಿನ್ ಇಂಜೆಕ್ಷನ್ ನೀಡಿದ ನರ್ಸ್; ಮಗು ಬಲಿ
ಡಿಸೆಂಬರ್ 17ರ ಮುಂಜಾನೆ ಚಿಕಿತ್ಸೆಯ ವೇಳೆ ಮಗುವಿನ ರಕ್ತನಾಳದ (ಐವಿ) ಲೈನ್ ಬ್ಲಾಕ್ ಆಗಿತ್ತು. ಈ ಸಂದರ್ಭದಲ್ಲಿ ನರ್ಸಿಂಗ್ ಅಧಿಕಾರಿ ಮಧುಬಾಲಾ ಶರ್ಮಾ ಎಂಬುವವರು 'ಎಫ್' (F) ಎಂದು ಬರೆಯಲಾಗಿದ್ದ ಸಿರಿಂಜ್‌ನಲ್ಲಿದ್ದ ದ್ರವವನ್ನು ಸರಿಯಾಗಿ ಪರಿಶೀಲಿಸದೆ ನೇರವಾಗಿ ಮಗುವಿನ ದೇಹಕ್ಕೆ ಇಂಜೆಕ್ಟ್ ಮಾಡಿದ್ದಾರೆ.
ಭೋಪಾಲ್‌ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಅತ್ಯಂತ ಆಘಾತಕಾರಿ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮೂರು ವರ್ಷದ ಕಂದಮ್ಮನಿಗೆ ಔಷಧಿಯ ಬದಲು 'ಫಾರ್ಮಾಲಿನ್' ಎಂಬ ರಾಸಾಯನಿಕವನ್ನು ಇಂಜೆಕ್ಟ್ ಮಾಡಿದ ಪರಿಣಾಮ ಮಗು ದಾರುಣವಾಗಿ ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ಪೂರ್ಣಗೊಂಡಿದ್ದು, ಕರ್ತವ್ಯ ಲೋಪವೆಸಗಿದ ಇಬ್ಬರು ನರ್ಸಿಂಗ್ ಅಧಿಕಾರಿಗಳ ವಿರುದ್ಧ ಇದೀಗ ಎಫ್‌ಐಆರ್ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ನಿವಾಸಿಯಾದ ಸಾರ್ಥಕ್ ಯಾದವ್ ಎಂಬ ಮೂರು ವರ್ಷದ ಮಗು ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿತ್ತು. ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ 2025ರ ಡಿಸೆಂಬರ್ 15ರಂದು ಭೋಪಾಲ್ ಏಮ್ಸ್‌ನ ಮಕ್ಕಳ ವಾರ್ಡ್‌ಗೆ ಮಗುವನ್ನು ದಾಖಲಿಸಲಾಗಿತ್ತು.
ಡಿಸೆಂಬರ್ 17ರ ಮುಂಜಾನೆ ಚಿಕಿತ್ಸೆಯ ವೇಳೆ ಮಗುವಿನ ರಕ್ತನಾಳದ (ಐವಿ) ಲೈನ್ ಬ್ಲಾಕ್ ಆಗಿತ್ತು. ಈ ಸಂದರ್ಭದಲ್ಲಿ ನರ್ಸಿಂಗ್ ಅಧಿಕಾರಿ ಮಧುಬಾಲಾ ಶರ್ಮಾ ಎಂಬುವವರು 'ಎಫ್' (F) ಎಂದು ಬರೆಯಲಾಗಿದ್ದ ಸಿರಿಂಜ್‌ನಲ್ಲಿದ್ದ ದ್ರವವನ್ನು ಸರಿಯಾಗಿ ಪರಿಶೀಲಿಸದೆ ನೇರವಾಗಿ ಮಗುವಿನ ದೇಹಕ್ಕೆ ಇಂಜೆಕ್ಟ್ ಮಾಡಿದ್ದಾರೆ. ಸಿರಿಂಜ್‌ನಲ್ಲಿ ಸೂಚಿತ ಔಷಧಿ ಇಲ್ಲ ಎಂಬುದನ್ನು ಮಗುವಿನ ತಂದೆ ಪದೇ ಪದೇ ಎಚ್ಚರಿಸಿದರೂ, ಅದನ್ನು ಸಂಪೂರ್ಣವಾಗಿ ಕಡೆಗಣಿಸಿದ ಸಿಬ್ಬಂದಿ ಅವರಿಗೆ ಸುಮ್ಮನಿರುವಂತೆ ಗದರಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ರಾಸಾಯನಿಕದಿಂದ ಕ್ಷಣಾರ್ಧದಲ್ಲೇ ಪ್ರಾಣಪಕ್ಷಿ ಹಾರಿತು
ತಪ್ಪಾದ ಇಂಜೆಕ್ಷನ್ ನೀಡಿದ ಕೆಲವೇ ಕ್ಷಣಗಳಲ್ಲಿ ಮಗುವಿನ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ತಕ್ಷಣವೇ ಪ್ರಜ್ಞೆ ತಪ್ಪಿದ ಸಾರ್ಥಕ್‌ನನ್ನು ಮಕ್ಕಳ ತೀವ್ರ ನಿಗಾ ಘಟಕಕ್ಕೆ (PICU) ಸ್ಥಳಾಂತರಿಸಲಾಯಿತು. ವೈದ್ಯರು ಮಗುವನ್ನು ಬದುಕಿಸಿಕೊಳ್ಳಲು ಸುದೀರ್ಘ ಕಾಲ ಪ್ರಯತ್ನ ಪಟ್ಟರೂ, ವಿಪರೀತ ರಾಸಾಯನಿಕದ ಪ್ರಭಾವದಿಂದಾಗಿ ಬೆಳಿಗ್ಗೆ 8.45ರ ಸುಮಾರಿಗೆ ಮಗು ಕೊನೆಯುಸಿರೆಳೆದಿದೆ. ಆಸ್ಪತ್ರೆಯಲ್ಲಿ ಅಂಗಾಂಶಗಳನ್ನು ಹಾಗೂ ಬಯಾಪ್ಸಿ ಮಾದರಿಗಳನ್ನು ದೀರ್ಘಕಾಲ ಸಂರಕ್ಷಿಸಿಡಲು ಬಳಸುವ 'ಫಾರ್ಮಾಲಿನ್' ಎಂಬ ಅತ್ಯಂತ ವಿಷಕಾರಿ ರಾಸಾಯನಿಕವನ್ನು ಔಷಧಿಯೆಂದು ಭ್ರಮಿಸಿ ಮಗುವಿನ ದೇಹಕ್ಕೆ ಸೇರಿಸಿದ್ದೇ ಈ ದುರಂತಕ್ಕೆ ನೇರ ಕಾರಣ ಎಂದು ಆಸ್ಪತ್ರೆಯ ಆಂತರಿಕ ತನಿಖಾ ವರದಿಯಲ್ಲಿ ದೃಢಪಟ್ಟಿದೆ. ಮನುಷ್ಯರ ದೇಹಕ್ಕೆ ಈ ರಾಸಾಯನಿಕವನ್ನು ಚುಚ್ಚುಮದ್ದಿನ ಮೂಲಕ ನೀಡಲು ವೈದ್ಯಕೀಯದಲ್ಲಿ ಯಾವುದೇ ಅವಕಾಶವಿಲ್ಲ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ.
ಇಬ್ಬರು ನರ್ಸ್ಗಳ ವಿರುದ್ಧ ಎಫ್ಐಆರ್ ದಾಖಲು ಹಾಗೂ ತನಿಖೆ ಚುರುಕು
ಮತ್ತೋರ್ವ ನರ್ಸಿಂಗ್ ಸಿಬ್ಬಂದಿ ಅನುಕಾ ಗುಜರಾತಿ ಎಂಬುವವರು ಲ್ಯಾಬ್ ಬಳಕೆಗಾಗಿ ಫಾರ್ಮಾಲಿನ್ ಅನ್ನು ಸಿರಿಂಜ್‌ನಲ್ಲಿ ತುಂಬಿಸಿದ್ದರು. ಆದರೆ, ನಿಯಮಗಳ ಪ್ರಕಾರ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಡುವ ಬದಲು ರೋಗಿಯ ಹಾಸಿಗೆಯ ಬಳಿಯೇ ಅತ್ಯಂತ ನಿರ್ಲಕ್ಷ್ಯದಿಂದ ಬಿಟ್ಟಿದ್ದರು ಎಂಬ ಅಂಶವೂ ತನಿಖೆಯಿಂದ ಬಯಲಾಗಿದೆ. ಈ ಆಂತರಿಕ ವರದಿಯ ಆಧಾರದ ಮೇಲೆ ಜೂನ್ 11ರಂದು ಭೋಪಾಲ್‌ನ ಬಾಗಸೇವಾನಿಯಾ ಠಾಣೆಯ ಪೊಲೀಸರು ಇಬ್ಬರೂ ನರ್ಸಿಂಗ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧುಬಾಲಾ ಶರ್ಮಾ ವಿರುದ್ಧ ನಿರ್ಲಕ್ಷ್ಯದಿಂದ ಸಾವು ಉಂಟುಮಾಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 106(1) ರಡಿ ಹಾಗೂ ಅಪಾಯಕಾರಿ ರಾಸಾಯನಿಕವನ್ನು ಅಸುರಕ್ಷಿತವಾಗಿ ಇರಿಸಿದ ಆರೋಪದಡಿ ಅನುಕಾ ಗುಜರಾತಿ ವಿರುದ್ಧ ಸೆಕ್ಷನ್ 286 ರಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

