Indian Economy 2026 |ಭಾರತದ ಆರ್ಥಿಕತೆಗೆ ವಿಶ್ವಸಂಸ್ಥೆ ಮೆಚ್ಚುಗೆ: 2026ರಲ್ಲಿ ಶೇ. 6.4ರಷ್ಟು ಬೆಳವಣಿಗೆಯ ಮುನ್ಸೂಚನೆ!
x
ಭಾರತದ ಆರ್ಥಿಕತೆ (ಸಂಗ್ರಹ ಚಿತ್ರ)

Indian Economy 2026 |ಭಾರತದ ಆರ್ಥಿಕತೆಗೆ ವಿಶ್ವಸಂಸ್ಥೆ ಮೆಚ್ಚುಗೆ: 2026ರಲ್ಲಿ ಶೇ. 6.4ರಷ್ಟು ಬೆಳವಣಿಗೆಯ ಮುನ್ಸೂಚನೆ!

ವಿಶ್ವಸಂಸ್ಥೆಯ ESCAP ವರದಿಯಂತೆ ಭಾರತದ ಆರ್ಥಿಕತೆಯು 2026ರಲ್ಲಿ ಶೇ. 6.4ರಷ್ಟು ಬೆಳೆಯಲಿದೆ. ಅಮೆರಿಕದ ಸುಂಕಗಳು ಮತ್ತು ತೆರಿಗೆಗಳ ನಡುವೆಯೂ ಭಾರತದ ಸೇವಾ ವಲಯ ಮತ್ತು ಪಿಎಲ್‌ಐ ಯೋಜನೆಗಳು ಹೇಗೆ ಆರ್ಥಿಕತೆಗೆ ಬಲ ನೀಡುತ್ತಿವೆ


ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ಭಾರತದ ಆರ್ಥಿಕತೆಯು ಪ್ರಸಕ್ತ ವರ್ಷದಲ್ಲಿ (2026) ಶೇಕಡಾ 6.4 ರಷ್ಟು ಮತ್ತು ಮುಂದಿನ ವರ್ಷ (2027) ಶೇಕಡಾ 6.6 ರಷ್ಟು ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ಸೋಮವಾರ ಬಿಡುಗಡೆ ಮಾಡಿದ 'ಏಷ್ಯಾ ಮತ್ತು ಪೆಸಿಫಿಕ್ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ 2026' ವರದಿಯಲ್ಲಿ ಈ ಮಹತ್ವದ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಬೆಳವಣಿಗೆಯ ವೇಗ

2024ರಲ್ಲಿ ಶೇ. 5.2ರಷ್ಟಿದ್ದ ದಕ್ಷಿಣ ಮತ್ತು ನೈಋತ್ಯ ಏಷ್ಯಾದ ಆರ್ಥಿಕ ಬೆಳವಣಿಗೆಯು 2025ರಲ್ಲಿ ಶೇ. 5.4ಕ್ಕೆ ಏರಿಕೆಯಾಗಿದೆ. ಇದಕ್ಕೆ ಭಾರತದ ಬಲವಾದ ಆರ್ಥಿಕ ಪ್ರಗತಿಯೇ ಮುಖ್ಯ ಕಾರಣವಾಗಿದೆ. 2025ರಲ್ಲಿ ಭಾರತದ ಬೆಳವಣಿಗೆಯು ಶೇ. 7.4ರಷ್ಟಿತ್ತು ಎಂದು ವರದಿ ತಿಳಿಸಿದೆ.

ರಫ್ತು ಮತ್ತು ಗ್ರಾಹಕ ಮಾರುಕಟ್ಟೆ

ಗ್ರಾಮೀಣ ಆರ್ಥಿಕತೆಯ ಸದೃಢ ಬಳಕೆ, ಜಿಎಸ್‌ಟಿ (GST) ದರ ಕಡಿತ ಮತ್ತು ರಫ್ತು ಚಟುವಟಿಕೆಗಳು ಭಾರತದ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿವೆ. ಆದರೆ, ಆಗಸ್ಟ್ 2025ರಲ್ಲಿ ಅಮೆರಿಕ ವಿಧಿಸಿದ ಶೇ. 50ರಷ್ಟು ಸುಂಕದ ಪರಿಣಾಮವಾಗಿ, ಅಮೆರಿಕಕ್ಕೆ ಭಾರತದ ರಫ್ತು ಶೇ. 25ರಷ್ಟು ಕುಸಿದಿದೆ. ಆದರೂ ಸೇವಾ ವಲಯವು ಪ್ರಗತಿಯ ಪ್ರಮುಖ ಚಾಲಕಶಕ್ತಿಯಾಗಿ ಮುಂದುವರಿದಿದೆ.

ವಿದೇಶಿ ಹೂಡಿಕೆ (FDI)

ಜಾಗತಿಕವಾಗಿ ಅನಿಶ್ಚಿತತೆ ಇದ್ದರೂ, ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಹಸಿರು ಹೂಡಿಕೆ ಆಕರ್ಷಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಕಳೆದ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಭಾರತವು ಸುಮಾರು 50 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ.

ವಿದೇಶಿ ಹಣ ವರ್ಗಾವಣೆ

ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿ ಹಣ ಪಡೆಯುವ ದೇಶವಾಗಿ ಭಾರತ ಹೊರಹೊಮ್ಮಿದ್ದು, 2024ರಲ್ಲಿ 137 ಬಿಲಿಯನ್ ಡಾಲರ್ ಹಣ ಹರಿದುಬಂದಿದೆ. ಆದರೆ, ಅಮೆರಿಕವು ಜನವರಿ 2026ರಿಂದ ಎಲ್ಲಾ ಹಣ ವರ್ಗಾವಣೆಗಳ ಮೇಲೆ ಶೇ. 1ರಷ್ಟು ತೆರಿಗೆ ವಿಧಿಸಿರುವುದರಿಂದ ಭಾರತಕ್ಕೆ ಅಲ್ಪ ಪ್ರಮಾಣದ ನಷ್ಟವಾಗುವ ಸಾಧ್ಯತೆಯಿದೆ.

ವಿಶ್ವದ 16.6 ಮಿಲಿಯನ್ ಗ್ರೀನ್‌ ಜಾಬ್‌ಗಳಲ್ಲಿ, ಚೀನಾದಲ್ಲಿ 7.3 ಮಿಲಿಯನ್ ಮತ್ತು ಭಾರತದಲ್ಲಿ 1.3 ಮಿಲಿಯನ್ ಉದ್ಯೋಗಗಳಿವೆ. ಭಾರತ ಸರ್ಕಾರದ 'ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್' (PLI) ಯೋಜನೆಯನ್ನು ವಿಶ್ವಸಂಸ್ಥೆ ಮುಕ್ತಕಂಠದಿಂದ ಶ್ಲಾಘಿಸಿದೆ. ಸೋಲಾರ್ ಪ್ಯಾನಲ್, ಬ್ಯಾಟರಿ ಮತ್ತು ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವು ಆಮದು ಅವಲಂಬನೆಯನ್ನು ಕಡಿಮೆ ಮಾಡಿ ಹೊಸ ಕೈಗಾರಿಕಾ ಕ್ರಾಂತಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

Read More
Next Story