
ಸಾಂದರ್ಭಿಕ ಚಿತ್ರ
Quantum | ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಬಿಡುಗಡೆ; ಮುಂದಿನ ಹತ್ತು ವರ್ಷ ʼಡೀಪ್ ಟೆಕ್ ದಶಕʼ ಘೋಷಣೆ
ಕ್ವಾಂಟಮ್ ನಾವೀನ್ಯತೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಐಐಎಸ್‌ಸಿ ಸಿದ್ಧಪಡಿಸಿರುವ ಈ ನಕ್ಷೆಯು ರಾಜ್ಯದ ತಾಂತ್ರಿಕ ಪ್ರಗತಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸಲಿದೆ ಎಂದು ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ತಂತ್ರಜ್ಞಾನದ ಹಬ್ ಎಂದೇ ಖ್ಯಾತಿಯಾಗಿರುವ ಕರ್ನಾಟಕ, ಈಗ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲೂ ಹೊಸ ಇತಿಹಾಸ ಬರೆದಿದೆ. ವಿಶ್ವ ಕ್ವಾಂಟಮ್ ದಿನಾಚರಣೆ ಅಂಗವಾಗಿ ಕರ್ನಾಟಕದ ಸಮಗ್ರ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ (Quantum Ecosystem Map) ಅನ್ನು ಅನಾವರಣಗೊಳಿಸುವ ಮೂಲಕ ಇಂತಹ ಸಮಗ್ರ ಮಾಹಿತಿ ಹೊರತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಬುಧವಾರ (ಏ.7) ಜವಾಹರಲಾಲ್ ನೆಹರು ತಾರಾಲಯದ ಯು.ಆರ್. ರಾವ್ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ನಕ್ಷೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, "ಕ್ವಾಂಟಮ್ ನಾವೀನ್ಯತೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಐಐಎಸ್‌ಸಿ ಸಿದ್ಧಪಡಿಸಿರುವ ಈ ನಕ್ಷೆಯು ರಾಜ್ಯದ ತಾಂತ್ರಿಕ ಪ್ರಗತಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸಲಿದೆ. ಪ್ರಸ್ತುತ ಬೇರೆ ಯಾವುದೇ ರಾಜ್ಯವು ಹೊಂದಿರದ ಅತ್ಯುತ್ತಮ ಕ್ವಾಂಟಮ್ ಪರಿಸರ ವ್ಯವಸ್ಥೆ ನಮ್ಮಲ್ಲಿದೆ" ಎಂದರು.
ಬರಲಿದೆ ಕ್ವಾಂಟಮ್ ಹಬ್ ‘ಕ್ಯೂ-ಸಿಟಿ’
ರಾಜ್ಯದಲ್ಲಿ ಸಂಶೋಧನೆ ಮತ್ತು ಉದ್ಯಮಗಳನ್ನು ಒಂದೇ ಸೂರಿನಡಿ ತರಲು ಕ್ಯೂ-ಸಿಟಿ ಎಂಬ ಬೃಹತ್ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದು ಶಿಕ್ಷಣ ತಜ್ಞರು, ಸ್ಟಾರ್ಟ್-ಅಪ್‌ಗಳು ಮತ್ತು ಕೈಗಾರಿಕೆಗಳಿಗೆ ಒಂದು ಸಮಗ್ರ ವೇದಿಕೆಯಾಗಲಿದೆ. ರಾಜ್ಯ ಕ್ವಾಂಟಮ್ ಟಾಸ್ಕ್ ಫೋರ್ಸ್ ಉಸ್ತುವಾರಿಯಲ್ಲಿ ಈ ಯೋಜನೆ ಸಮಯಕ್ಕೆ ಸರಿಯಾಗಿ ಜಾರಿಯಾಗಲಿದೆ. ಕ್ವಾಂಟಮ್ ವಲಯದ ಕೌಶಲ್ಯಾಭಿವೃದ್ಧಿ ಮತ್ತು ಸ್ಟಾರ್ಟ್-ಅಪ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಕೋಟಿ ರೂ. ಅನುದಾನ ಘೋಷಿಸಿದ್ದಾರೆ ಎಂದು ತಿಳಿಸಿದರು.
ಡೀಪ್ ಟೆಕ್ ದಶಕಕ್ಕೆ 400 ಕೋಟಿ ರೂ. ನಿಧಿ
ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಮುಂಬರುವ ಹತ್ತು ವರ್ಷಗಳನ್ನು ‘Deep Tech Decade’ ಎಂದು ಘೋಷಿಸಿದ್ದು, ಇದಕ್ಕಾಗಿ 400 ಕೋಟಿ ರೂ. ಮೀಸಲು ನಿಧಿ ಸ್ಥಾಪಿಸಲಾಗಿದೆ. ದಾಖಲೆ ಪ್ರಮಾಣದಲ್ಲಿ ಸ್ಟಾರ್ಟ್-ಅಪ್‌ಗಳಿಗೆ ನೆರವು ನೀಡುವ ಮೂಲಕ ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ಕೇಂದ್ರವಾಗಿ ರೂಪಿಸಲು ನಾವು ಬದ್ಧರಾಗಿದ್ದೇವೆ," ಎಂದು ಮಾಹಿತಿ ನೀಡಿದರು.
ಕ್ವಾಂಟಮ್ ಟಾಸ್ಕ್ ಫೋರ್ಸ್‌ಗೆ ಹೊಸ ಸಾರಥಿ
ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಐಐಎಸ್‌ಸಿ ಪ್ರೊಫೆಸರ್ ಅರಿಂದಮ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಇವರ ನೇತೃತ್ವದಲ್ಲಿ ರಾಜ್ಯದ ಕ್ವಾಂಟಮ್ ಕ್ಷೇತ್ರವು ಮತ್ತಷ್ಟು ವೇಗವಾಗಿ ಅಭಿವೃದ್ಧಿಗೊಳ್ಳಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

