ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸುವ ಮಾತನಾಡಿದ ಗವರ್ನರ್ ಸಂಜಯ್ ಮಲ್ಹೋತ್ರಾ, ಗ್ರಾಹಕರ ರಕ್ಷಣೆಗಾಗಿ ಮೂರು ಕರಡು ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಘೋಷಿಸಿದರು.

Click the Play button to hear this message in audio format

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕಲು ಮತ್ತು ಗ್ರಾಹಕರ ಹಿತರಕ್ಷಣೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಹತ್ವದ ಹೆಜ್ಜೆ ಇಟ್ಟಿದೆ. ಸಣ್ಣ ಮೌಲ್ಯದ ಆನ್‌ಲೈನ್ ವಂಚನೆಗಳಿಗೆ ಒಳಗಾಗುವ ಗ್ರಾಹಕರಿಗೆ ಗರಿಷ್ಠ 25,000 ರೂಪಾಯಿವರೆಗೆ ಪರಿಹಾರ ನೀಡುವ ಹೊಸ ಚೌಕಟ್ಟನ್ನು ಜಾರಿಗೆ ತರಲು ಆರ್‌ಬಿಐ ಪ್ರಸ್ತಾಪಿಸಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಶುಕ್ರವಾರ ಘೋಷಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸುವ ವೇಳೆ ಮಾತನಾಡಿದ ಅವರು, ಗ್ರಾಹಕರ ರಕ್ಷಣೆಗಾಗಿ ಮೂರು ಕರಡು ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ತಿಳಿಸಿದರು.

ವಂಚನೆಗೆ ತಕ್ಷಣದ ಪರಿಹಾರ ಮತ್ತು ಹೊಸ ಸುರಕ್ಷತಾ ಕ್ರಮಗಳು

ಸಣ್ಣ ಮೊತ್ತದ ವ್ಯವಹಾರಗಳಲ್ಲಿ ನಡೆಯುವ ವಂಚನೆಗಳಿಂದ ಗ್ರಾಹಕರು ಅನುಭವಿಸುವ ನಷ್ಟವನ್ನು ಭರಿಸಲು 25,000 ರೂಪಾಯಿ ಪರಿಹಾರದ ಚೌಕಟ್ಟನ್ನು ರೂಪಿಸಲು ನಿರ್ಧರಿಸಲಾಗಿದೆ. 2017ರಲ್ಲಿ ಜಾರಿಗೆ ತಂದಿದ್ದ ಡಿಜಿಟಲ್ ವಹಿವಾಟು ಸುರಕ್ಷತಾ ನಿಯಮಗಳನ್ನು ಮರುಪರಿಶೀಲಿಸಿ, ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ನವೀಕರಿಸಲಾಗುತ್ತಿದೆ.

ಡಿಜಿಟಲ್ ಪಾವತಿಗಳ ಸುರಕ್ಷತೆಯನ್ನು ಹೆಚ್ಚಿಸಲು, ನಿರ್ದಿಷ್ಟ ವರ್ಗದ ಬಳಕೆದಾರರಿಗೆ ಹೆಚ್ಚುವರಿ ದೃಢೀಕರಣ ಮತ್ತು ಹಣ ವರ್ಗಾವಣೆಯಲ್ಲಿ ವಿಳಂಬಿತ ಕ್ರೆಡಿಟ್ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆಯೂ ಚರ್ಚಿಸಲಾಗುತ್ತಿದೆ.

ಏನಿದು ನಿಯಮ?

- ವಂಚನೆಗೊಳಗಾದ ಗ್ರಾಹಕರಿಗೆ ಗರಿಷ್ಠ 25,000 ರೂ. ಪರಿಹಾರ

- ವಂಚನೆಯ ಮೊತ್ತದ ಶೇ.85ರಷ್ಟು ಅಥವಾ ಗರಿಷ್ಠ 25000 ರೂ.ಗಳನ್ನು (ಯಾವುದು ಕಡಿಮೆಯೋ ಅದು) ಆರ್‌ಬಿಐ ಪಾವತಿಸಲಿದೆ

- ಉದಾಹರಣೆಗೆ: ನೀವು 50,000 ರೂ.ಗಳನ್ನು ಕಳೆದುಕೊಂಡರೆ ಅದರ ಶೇ.85ರಷ್ಟು ಅಂದರೆ 42,500 ರೂ. ಆಗುತ್ತದೆ. ಆದರೆ, ಆರ್‌ಬಿಐ ನಿಮಗೆ ಕೊಡುವುದು 25,000 ರೂ. ಮಾತ್ರ

- ಒಂದು ವೇಳೆ ನೀವು 20,000 ರೂ. ಕಳೆದುಕೊಂಡರೆ, ಅದರ ಶೇ.85 ಅಂದರೆ 17,000 ರೂ. ಆಗುತ್ತದೆ. ಆಗ ನಿಮಗೆ ಸಿಗುವ ಪರಿಹಾರ 17,000 ರೂ.

- ಈ ಪರಿಹಾರವು ಒಬ್ಬ ವ್ಯಕ್ತಿಗೆ ಜೀವನದಲ್ಲಿ ಒಂದು ಬಾರಿ ಮಾತ್ರವೇ ಸಿಗಲಿದೆ

ಗ್ರಾಹಕರಿಗೆ ಅನಗತ್ಯ ಪ್ರಾಡಕ್ಟ್ ಮಾರಾಟಕ್ಕೆ ಕಡಿವಾಣ

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಅಗತ್ಯಕ್ಕೆ ತಕ್ಕುದಲ್ಲದ ಅಥವಾ ಅವರಿಗೆ ಅಪಾಯ ತಂದೊಡ್ಡುವ ಥರ್ಡ್-ಪಾರ್ಟಿ ಪ್ರಾಡಕ್ಟ್‌ಗಳನ್ನು (ವಿಮೆ, ಹೂಡಿಕೆ ಯೋಜನೆಗಳು) ಮಾರಾಟ ಮಾಡುವುದನ್ನು ತಡೆಯಲು ಆರ್‌ಬಿಐ ಕಠಿಣ ನಿಯಮಗಳನ್ನು ತರಲಿದೆ. ಜಾಹೀರಾತು, ಮಾರ್ಕೆಟಿಂಗ್ ಮತ್ತು ಹಣಕಾಸು ಉತ್ಪನ್ನಗಳ ಮಾರಾಟದ ಬಗ್ಗೆ ಸಮಗ್ರ ಕರಡು ಸೂಚನೆಗಳನ್ನು ಶೀಘ್ರದಲ್ಲೇ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಲಾಗುವುದು ಎಂದು ಮಲ್ಹೋತ್ರಾ ತಿಳಿಸಿದರು.

ಸಾಲ ವಸೂಲಾತಿ ಏಜೆಂಟ್‌ಗಳ ಮೇಲೆ ನಿಗಾ

ಸಾಲ ವಸೂಲಾತಿ ವೇಳೆ ಗ್ರಾಹಕರೊಂದಿಗೆ ಅಸಭ್ಯವಾಗಿ ವರ್ತಿಸುವುದು ಮತ್ತು ಕಿರುಕುಳ ನೀಡುವುದನ್ನು ತಡೆಯಲು, ಸಾಲ ವಸೂಲಾತಿ ಏಜೆಂಟ್‌ಗಳ ನೇಮಕಾತಿ ಮತ್ತು ಅವರ ನಡವಳಿಕೆಗೆ ಸಂಬಂಧಿಸಿದಂತೆ ಏಕರೂಪದ ನಿಯಮಗಳನ್ನು ಜಾರಿಗೆ ತರಲು ಆರ್‌ಬಿಐ ನಿರ್ಧರಿಸಿದೆ.

ನಗರ ಸಹಕಾರಿ ಬ್ಯಾಂಕ್‌ಗಳಿಗಾಗಿ 'ಮಿಷನ್ ಸಕ್ಷಮ್'

ನಗರ ಸಹಕಾರಿ ಬ್ಯಾಂಕ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು 'ಮಿಷನ್ ಸಕ್ಷಮ್' (ಸಹಕಾರಿ ಬ್ಯಾಂಕ್ ಕ್ಷಮತಾ ನಿರ್ಮಾಣ್) ಯೋಜನೆಯನ್ನು ಆರ್‌ಬಿಐ ಘೋಷಿಸಿದೆ. ಇದು ಹಣಕಾಸು ಸೇರ್ಪಡೆಗೆ ಉತ್ತೇಜನ ನೀಡಲಿದ್ದು, ಸುಮಾರು 1.40 ಲಕ್ಷ ಉದ್ಯೋಗಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಸಾಧ್ಯವಾದಷ್ಟು ಮಟ್ಟಿಗೆ ಪ್ರಾದೇಶಿಕ ಭಾಷೆಗಳಲ್ಲಿಯೇ ಈ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಗವರ್ನರ್ ತಿಳಿಸಿದ್ದಾರೆ.

Next Story