
4 ವರ್ಷಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ; ಇಂದಿನಿಂದಲೇ ಹೊಸ ದರ ಜಾರಿ!
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 106.17 ರೂ. ಹಾಗೂ ದೆಹಲಿ, ಮುಂಬೈ, ಚೆನ್ನೈನಲ್ಲಿ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬಂದಿವೆ.
ಕಳೆದ ಹಲವು ದಿನಗಳ ನಿರೀಕ್ಷೆ ಮತ್ತು ಆತಂಕ ಕೊನೆಗೂ ನಿಜವಾಗಿದೆ. ಕೇಂದ್ರ ಸರ್ಕಾರವು ದೇಶದ ನಾಲ್ಕು ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರವನ್ನು ಏರಿಕೆ ಮಾಡಿದೆ. ಈ ಪರಿಷ್ಕೃತ ದರಗಳು ಇಂದು ಅಂದರೆ ಮೇ 15, ಶುಕ್ರವಾರದಿಂದಲೇ ಜಾರಿಗೆ ಬರಲಿವೆ. ವಿಶೇಷವೆಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಚಿಲ್ಲರೆ ಇಂಧನ ಬೆಲೆ ಏರಿಕೆಯಾಗಿರುವುದು ಇದೇ ಮೊದಲು.
ಬೆಂಗಳೂರಿನಲ್ಲಿ ದರ ಎಷ್ಟು ಏರಿಕೆ?
ಇನ್ನು ರಾಜ್ಯ ರಾಜಧನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರದಲ್ಲಿ ಭಾರೀ ಏರಿಕೆ ಕಂಡಿದೆ. ಪ್ರತಿ ಲೀಟರ್‌ಗೆ 3.21 ರೂ ಏರಿಕೆ ಆಗಿದ್ದು, ಪ್ರಸ್ತುತ ದರ 106.17ರೂ. ಇದೆ. ಮತ್ತೊಂದೆಡೆ ಡಿಸೇಲ್ ದರದಲ್ಲಿ ಪ್ರತಿ ಲೀಟರ್‌ಗೆ 3.11 ರೂ. ಏರಿಕೆ ಆಗಿದ್ದು, ಪ್ರಸ್ತುತ 94.10ರೂ. ಇದೆ.
ಇತರೆ ನಗರಗಳಲ್ಲಿ ಪೆಟ್ರೋಲ್ ದರ
ಕೇಂದ್ರ ಸರ್ಕಾರವು ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದು, ಪರಿಷ್ಕೃತ ದರದಂತೆ ದೇಶದ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ರೂ. 3.00 ಏರಿಕೆಯೊಂದಿಗೆ ರೂ. 97.77 ತಲುಪಿದ್ದರೆ, ಕೋಲ್ಕತ್ತಾದಲ್ಲಿ ರೂ. 3.29 ರಷ್ಟು ಗರಿಷ್ಠ ಏರಿಕೆಯಾಗಿ ರೂ. 108.74 ಕ್ಕೆ ಮಾರಾಟವಾಗುತ್ತಿದೆ; ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ರೂ. 3.14 ಹೆಚ್ಚಳದೊಂದಿಗೆ ಲೀಟರ್ ಬೆಲೆ ರೂ. 106.68 ಕ್ಕೆ ಏರಿದ್ದರೆ, ಚೆನ್ನೈನಲ್ಲಿ ರೂ. 2.83 ಏರಿಕೆಯಾಗಿ ಹೊಸ ದರ ರೂ. 103.67 ರಷ್ಟಿದೆ.
ಹೊಸ ಡೀಸೆಲ್ ದರ ಹೀಗಿದೆ:
ಪೆಟ್ರೋಲ್ ಬೆಲೆಯ ಬೆನ್ನಲ್ಲೇ ಡೀಸೆಲ್ ದರದಲ್ಲೂ ಏರಿಕೆ ಕಂಡುಬಂದಿದ್ದು, ಪರಿಷ್ಕೃತ ದರದಂತೆ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ರೂ. 3.00 ಏರಿಕೆಯೊಂದಿಗೆ ರೂ. 90.67 ಕ್ಕೆ ತಲುಪಿದೆ; ಇನ್ನುಳಿದಂತೆ ಕೋಲ್ಕತ್ತಾದಲ್ಲಿ ರೂ. 3.11 ರಷ್ಟು ಹೆಚ್ಚಳವಾಗಿ ರೂ. 95.13 ಕ್ಕೆ ಮಾರಾಟವಾಗುತ್ತಿದ್ದರೆ, ಮುಂಬೈನಲ್ಲಿ ರೂ. 3.11 ಏರಿಕೆಯೊಂದಿಗೆ ಹೊಸ ದರ ರೂ. 93.14 ರಷ್ಟಿದೆ ಮತ್ತು ಚೆನ್ನೈನಲ್ಲಿ ರೂ. 2.86 ರಷ್ಟು ಬೆಲೆ ಏರಿಕೆಯಾಗಿ ಲೀಟರ್‌ಗೆ ರೂ. 95.25 ನಿಗದಿಯಾಗಿದೆ.
ತೈಲ ಕಂಪನಿಗಳ ನಷ್ಟ ಮತ್ತು ಸರ್ಕಾರದ ನಿರ್ಧಾರ:
ಮೂಲಗಳ ಪ್ರಕಾರ, ಕಚ್ಚಾ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದರೂ, ಅದನ್ನು ಚಿಲ್ಲರೆ ಗ್ರಾಹಕರಿಗೆ ವರ್ಗಾಯಿಸದ ಕಾರಣ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOCL, BPCL ಮತ್ತು HPCL ಪ್ರತಿದಿನ ಸುಮಾರು 16,000 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದವು. ಈ ಬಗ್ಗೆ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.
ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ ತಡೆಯಲು ಮೋದಿ ಸರ್ಕಾರ ಇಲ್ಲಿಯವರೆಗೆ ಬೆಲೆ ಏರಿಕೆಯನ್ನು ತಡೆಹಿಡಿದಿತ್ತು. ಆದರೆ ಈಗ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಮಾತ್ರ ಏರಿಕೆ ಮಾಡಲಾಗಿತ್ತು, ಆದರೆ ಈಗ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆಯಾಗಿದೆ.

