
Petrol price hike |ಮತ್ತೆ ಬೆಲೆ ಏರಿಕೆ ಶಾಕ್: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ
ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ 100 ಡಾಲರ್ ದಾಟಿದ್ದೇ ಇದಕ್ಕೆ ಕಾರಣ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶದ ಜನತೆಗೆ ಇಂಧನ ದರ ಏರಿಕೆಯ ಬಿಸಿ ತಟ್ಟಿದೆ. ಮೇ 19 ರ ಮಂಗಳವಾರದಂದು ದೇಶದ ಪ್ರಮುಖ ಬೆಂಗಳೂರು ಸೇರಿದಂತೆ ಮಹಾನಗರಗಳು ಸೇರಿದಂತೆ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ಕಳೆದ ಶುಕ್ರವಾರವಷ್ಟೇ ಇಂಧನ ದರದಲ್ಲಿ ಭಾರಿ ಪ್ರಮಾಣದ (ಪ್ರತಿ ಲೀಟರ್‌ಗೆ 3 ರೂ.) ಏರಿಕೆಯಾಗಿತ್ತು. ಈಗ ಆ ಘಟನೆ ನಡೆದು ವಾರ ಕಳೆಯುವ ಮುನ್ನವೇ ತೈಲ ಕಂಪನಿಗಳು ಎರಡನೇ ಬಾರಿಗೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿವೆ.
ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ದರ:
ಬೆಂಳೂರಿನಲ್ಲಿ ಪ್ರತಿ ಲೀಟರ್‌ಗೆ 95ಪೈಸೆ ಏರಿಕೆಯಾಗಿ 107.12 ರೂ. ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 87 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 98.64 ರೂ. ತಲುಪಿದೆ. ಇನ್ನುಳಿದಂತೆ ಕೋಲ್ಕತ್ತಾದಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ (96 ಪೈಸೆ) ಏರಿಕೆ ಕಂಡಿದ್ದು, ಲೀಟರ್ ಪೆಟ್ರೋಲ್ ಬೆಲೆ ಬರೋಬ್ಬರಿ 109.70 ರೂ. ಗೆ ತಲುಪಿದೆ. ಮುಂಬೈನಲ್ಲಿ 91 ಪೈಸೆ ಏರಿಕೆಯೊಂದಿಗೆ 107.59 ರೂ. ಹಾಗೂ ಚೆನ್ನೈನಲ್ಲಿ 82 ಪೈಸೆ ಹೆಚ್ಚಳದೊಂದಿಗೆ 104.49 ರೂ. ಆಗಿದೆ.
ಡೀಸೆಲ್ ದರದಲ್ಲೂ ಭಾರಿ ಜಿಗಿತ:
ಪೆಟ್ರೋಲ್ ಮಾತ್ರವಲ್ಲದೆ ಡೀಸೆಲ್ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ಬೆಂಳೂರಿನಲ್ಲಿ ಪ್ರತಿ ಲೀಟರ್‌ಗೆ 94ಪೈಸೆ ಏರಿಕೆಯಾಗಿ 95.05ರೂ. ತಲುಪಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ 91 ಪೈಸೆ ಏರಿಕೆಯಾಗಿ 91.58 ರೂ. ಆಗಿದೆ. ಕೋಲ್ಕತ್ತಾ ಮತ್ತು ಮುಂಬೈನಲ್ಲಿ ತಲಾ 94 ಪೈಸೆ ಹೆಚ್ಚಳವಾಗಿದ್ದು, ಕ್ರಮವಾಗಿ 96.07 ರೂ. ಮತ್ತು 94.08 ರೂ. ಗೆ ಮುಟ್ಟಿದೆ. ಚೆನ್ನೈನಲ್ಲಿ 86 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ ಡೀಸೆಲ್ ದರ 96.11 ರೂ. ಆಗಿದೆ.
ಸಿಎನ್‌ಜಿ (CNG) ದರವೂ ದುಬಾರಿ:
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆ ದೆಹಲಿ-ಎನ್‌ಸಿಆರ್ (Delhi-NCR) ವಲಯದಲ್ಲಿ ಸಿಎನ್‌ಜಿ (CNG) ದರವನ್ನು ಕೂಡ ರವಿವಾರದಿಂದ ಜಾರಿಗೆ ಬರುವಂತೆ ಪ್ರತಿ ಕೆಜಿಗೆ 1 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಎರಡು ದಿನಗಳಲ್ಲಿ ಆದ ಎರಡನೇ ಏರಿಕೆ ಇದಾಗಿದೆ. ಸದ್ಯ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 80.09 ರೂ. ಆಗಿದ್ದರೆ, ನೋಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ 88.70 ರೂ. ಆಗಿದೆ.
ಬೆಲೆ ಏರಿಕೆಗೆ ಜಾಗತಿಕ ಸಂಘರ್ಷವೇ ಕಾರಣ:
ಪಶ್ಚಿಮ ಏಷ್ಯಾದಲ್ಲಿ (ಮುಖ್ಯವಾಗಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ) ಉಂಟಾಗಿರುವ ತೀವ್ರ ಯುದ್ಧದ ವಾತಾವರಣದಿಂದಾಗಿ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ (Brent Crude) ಬೆಲೆ ಪ್ರತಿ ಬ್ಯಾರೆಲ್‌ಗೆ 100 ಯುಎಸ್ ಡಾಲರ್ ಗಡಿಯನ್ನು ದಾಟಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕವೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಕಿರಣ್ ರಿಜಿಜು:
ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, "ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ವಿಶ್ವದ ಹಲವು ದೇಶಗಳಲ್ಲಿ ತೈಲ ಬೆಲೆ ಶೇ. 20 ರಿಂದ ಶೇ. 100 ರಷ್ಟು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಭಾರತವು ಜಾಗತಿಕ ಬಿಕ್ಕಟ್ಟಿನ ನಡುವೆಯೂ ಗ್ರಾಹಕರ ಮೇಲಿನ ಹೊರೆಯನ್ನು ಸೀಮಿತಗೊಳಿಸಿದೆ. ನಮ್ಮ ದೇಶದಲ್ಲಿ ಪೆಟ್ರೋಲ್ ದರ ಕೇವಲ ಶೇ. 3.2 ಮತ್ತು ಡೀಸೆಲ್ ದರ ಶೇ. 3.4 ರಷ್ಟು ಮಾತ್ರ ಹೆಚ್ಚಾಗಿದೆ" ಎಂದು ಹೇಳಿದ್ದಾರೆ. ಜಾಗತಿಕ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲೂ ಆರ್ಥಿಕ ಸ್ಥಿರತೆ ಕಾಯ್ದುಕೊಂಡು ಸಾರ್ವಜನಿಕ ಕಲ್ಯಾಣವನ್ನು ಸಮತೋಲನಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಿಜಿಜು ಧನ್ಯವಾದ ತಿಳಿಸಿದ್ದಾರೆ.

