
ಮಂಡ್ಯದ ಬಸರಾಳು ಬಳಿ ಆಟೋಮೊಬೈಲ್ ಪರೀಕ್ಷಾ ಕೇಂದ್ರ; 1000 ಕೋಟಿ ರೂ. ಹೂಡಿಕೆ
ಒಟ್ಟು ಸಾವಿರ ಕೋಟಿ ರೂ. ಹೂಡಿಕೆಯ ಈ ಯೋಜನೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ವಾಹನ ಉದ್ಯಮದ ವಿಕೇಂದ್ರೀಕರಣ ಹಾಗೂ ಸ್ಥಳೀಯ ಯುವಕರಿಗೆ ವಿಪುಲ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಹೆಚ್ಚಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರಕಾರದಿಂದ ನೀಡಲಾಗುವುದು ಎಂದು ಹೇಳಿರುವ ಪ್ರಸ್ತಾವಿತ ಜಾಗವನ್ನು ಆ ಸಂಸ್ಥೆಯ ಉನ್ನತಾಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಂಸ್ಥೆಯ ಹಿರಿಯ ಉಪ ನಿರ್ದೇಶಕರಾದ ವಿ.ಎ. ಪಂಖಾವಾಲ, ಡಾ. ಬಿ.ವಿ. ಶ್ಯಾಮಸುಂದರ ಹಾಗೂ ಹಿರಿಯ ಪ್ರಧಾನ ವ್ಯವಸ್ಥಾಪಕ ಗಿರೀಶ್ ತನವಾಡೆ ಅವರು ಮಂಡ್ಯದ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬಸರಾಳು ಸಮೀಪದಲ್ಲಿರುವ ಮದ್ದಿಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮಗಳ ಬಳಿಯ ಜಾಗವನ್ನು ಖುದ್ದು ವೀಕ್ಷಿಸಿದರು.
ಈ ಎರಡು ಗ್ರಾಮಗಳ ಬಳಿ ಸುಮಾರು 110 ಎಕರೆ ಸರಕಾರಿ ಭೂಮಿ ಲಭ್ಯವಿದೆ ಎಂದು ರಾಜ್ಯ ಸರಕಾರ ತಿಳಿಸಿದ್ದು, ಎಆರ್‌ಎಐ ತಂಡವು ಈ ಭೂಮಿಯನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿತು. ಅಲ್ಲದೆ, ಜಾಗಕ್ಕೆ ಸಂಬಂಧಿತ ಅಗತ್ಯ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಕಲೆ ಹಾಕಿತು. ಈ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಅನುಕೂಲವಾಗಿದೆಯೇ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಈ ತಂಡದ ವರದಿಯ ನಂತರ ತಾಂತ್ರಿಕ ನಿಪುಣರ ತಂಡವು ಈ ಭೂಮಿಗಳನ್ನು ಪರಿಶೀಲನೆ ನಡೆಸಲಿದೆ.
ಭೂಮಿಯ ಸ್ವರೂಪ, ರಸ್ತೆ ಸಂಪರ್ಕ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಸಂಯೋಜನೆ ಸುಲಭ ಸಾಧ್ಯವೇ ಎಂಬುದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಅಲ್ಲದೆ, ತ್ವರಿತವಾಗಿ ತಾಂತ್ರಿಕ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಸಾಧ್ಯತಾ ವರದಿಯನ್ನು ನೀಡಲಿದೆ ಎಂದು ಹೇಳಿತು.
ಜಿಲ್ಲಾಧಿಕಾರಿಗಳ ಜತೆ ಎಆರ್‌ಎಐ ತಂಡ
ಸದರಿ ಭೂಮಿಯನ್ನು ವೀಕ್ಷಿಸಿದ ನಂತರ ಎಆರ್‌ಎಐ ಅಧಿಕಾರಿಗಳ ತಂಡವು ಮಂಡ್ಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಅಗತ್ಯವಿರುವ ಭೂಮಿ ಹೇಗಿರಬೇಕು ಎಂಬ ಬಗ್ಗೆ ಪ್ರಾಥಮಿಕವಾಗಿ ಜಿಲ್ಲಾಧಿಕಾರಿಗಳೊಂದಿಗೆ ಅಧಿಕಾರಿಗಳು ಚರ್ಚಿಸಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ, ಎಆರ್‌ಎಐ ತಂಡವು ಬಸರಾಳು ಭೂಮಿಯನ್ನು ಪ್ರಾಥಮಿಕ ಪರಿಶೀಲನೆ ನಡೆಸಿದೆ. ಬಸರಾಳು ಹತ್ತಿರದ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಿದೆಯೇ ವಿನಾ ಅಲ್ಲಿಯೇ ಕಾರ್ಯ ಸಾಧ್ಯತೆ ಆಗುತ್ತದೆಯೇ ಎಂಬುದನ್ನು ಹೇಳಿಲ್ಲ. ಅಲ್ಲದೆ, ಈಗ ಬಂದಿರುವ ಮೂವರು ಅಧಿಕಾರಿಗಳ ತಂಡವು ಇಪ್ಪತ್ತು ದಿನಗಳಲ್ಲಿ ವರದಿ ನೀಡಲಿದ್ದು, ಆ ವರದಿಯ ಪರಿಶೀಲನೆ ನಂತರ ತಾಂತ್ರಿಕ ತಂಡ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಚಿವರ ಭರವಸೆ
ಮಂಡ್ಯದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯದ ಜನತೆಗೆ ಭರವಸೆ ನೀಡಿದ್ದರು. ಮಾರ್ಚ್ 14ರಂದು ಮಂಡ್ಯದ ವಿ.ಸಿ. ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಸಭೆಯಲ್ಲಿ ಮಾತನಾಡಿದ್ದ ಸಚಿವರು, ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯ ಪ್ರಕ್ರಿಯೆಗಳು ಆರಂಭವಾಗಿವೆ ಎಂದಿದ್ದರು. ಅದಾದ ಎರಡು ದಿನಗಳಲ್ಲಿಯೇ ಆ ಸಂಸ್ಥೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಯೋಜನೆಗೆ ಆರಂಭಿಕ ಹಂತದಲ್ಲಿ 500 ಕೋಟಿ ರೂ., ನಂತರದ ದಿನಗಳಲ್ಲಿ ಇನ್ನೂ 500 ಕೋಟಿ ರೂ. ಹೂಡಿಕೆ ಮಾಡಲಾಗುವುದು. ಇದರಿಂದ ಮಂಡ್ಯದ ಅಭಿವೃದ್ಧಿಗೆ ಬಲ ಬರುವುದು ಮಾತ್ರವಲ್ಲದೆ, ಕರ್ನಾಟಕದಲ್ಲಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಅನುಕೂಲ ಆಗಲಿದೆ ಎಂದಿದ್ದರು.
ಏನಿದು ಕೇಂದ್ರ?
ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಎನ್ನುವುದು ಭಾರತದ ಪ್ರಮುಖ ವಾಹನ ಸಂಶೋಧನೆ, ಅಭಿವೃದ್ಧಿ ಮತ್ತು ಪರೀಕ್ಷಾ ಸಂಸ್ಥೆಯಾಗಿದೆ. ಕೇಂದ್ರ ಭಾರಿ ಕೈಗಾರಿಕಾ ಸಚಿವಾಲಯದ (Ministry of Heavy Industries) ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆಯು ಮಹಾರಾಷ್ಟ್ರದ ಪುಣೆಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.
ಯಾವುದೇ ಹೊಸ ವಾಹನ ರಸ್ತೆಗೆ ಇಳಿಯುವ ಮುನ್ನ ಅದರ ಗುಣಮಟ್ಟ ಮತ್ತು ಸುರಕ್ಷತೆಯನ್ನು ದೃಢೀಕರಿಸುವುದು ಇದರ ಮುಖ್ಯ ಉದ್ದೇಶ. ಯಾವುದೇ ಹೊಸ ಕಾರು, ಬೈಕ್, ವಾಣಿಜ್ಯ ವಾಹನ ಅಥವಾ ಎಲೆಕ್ಟ್ರಿಕ್ ವಾಹನಗಳನ್ನು (EV) ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು, ಅವುಗಳನ್ನು ARAI ಕೇಂದ್ರದಲ್ಲಿ ಪರೀಕ್ಷೆಗೊಳಪಡಿಸುವುದು ಕಡ್ಡಾಯ.
ವಾಹನಗಳು ಅಪಘಾತವಾದಾಗ ಪ್ರಯಾಣಿಕರಿಗೆ ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಪರೀಕ್ಷಿಸಲು ಇಲ್ಲಿ 'ಕ್ರ್ಯಾಶ್ ಟೆಸ್ಟ್' (Crash test) ಮಾಡಲಾಗುತ್ತದೆ. ವಾಹನಗಳು ಸರ್ಕಾರದ ಬಿಎಸ್-6 (BS-VI) ನಂತಹ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಇವಿ ಬ್ಯಾಟರಿಗಳ ಸಾಮರ್ಥ್ಯ, ಅವುಗಳ ಸುರಕ್ಷತೆ ಮತ್ತು ಬೆಂಕಿ ಅವಘಡಗಳಾಗದಂತೆ ತಡೆಯುವ ತಂತ್ರಜ್ಞಾನವನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಈ ಎಲ್ಲಾ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣವಾದ ವಾಹನಗಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು 'ಅನುಮೋದನಾ ಪ್ರಮಾಣಪತ್ರ' (ಸರ್ಟಿಫಿಕೇಟ್) ನೀಡಲಾಗುತ್ತದೆ.
ಈ ಕೇಂದ್ರವು ಮಂಡ್ಯದಲ್ಲಿ ಸ್ಥಾಪನೆಯಾದರೆ, ಮಂಡ್ಯ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವಾಹನ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ವಾಹನ ಉದ್ಯಮಗಳನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ ವಿಕೇಂದ್ರೀಕರಣ ಮಾಡುವುದು ಮತ್ತು ಸ್ಥಳೀಯ ಯುವಕರಿಗೆ ಉನ್ನತ ಕೌಶಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಪ್ರಮುಖ ಗುರಿಯಾಗಿದೆ. ಎಲೆಕ್ಟ್ರಿಕ್ ವಾಹನಗಳು (EV) ಮತ್ತು ಸುಧಾರಿತ ಇಂಧನಗಳತ್ತ ವಾಹನ ಉದ್ಯಮ ವಾಲುತ್ತಿರುವ ಈ ಹೊತ್ತಿನಲ್ಲಿ, ಮಂಡ್ಯದ ಈ ಕೇಂದ್ರವು ಅಂತರರಾಷ್ಟ್ರೀಯ ಮಟ್ಟದ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆಯಿದೆ.

