
ಪೊಂಗಲ್ ಹಬ್ಬದಲ್ಲಿ ಖರ್ಜೂರ ತಿಂತಾರಾ?: 'ಲೆನ್ಸ್‌ಕಾರ್ಟ್'ನ ಹಳೇ ಜಾಹೀರಾತಿನ ವಿರುದ್ಧ ನೆಟ್ಟಿಗರ ಆಕ್ರೋಶ
ಜನವರಿ 2025ರಲ್ಲಿ ಲೆನ್ಸ್‌ಕಾರ್ಟ್ ಬಿಡುಗಡೆ ಮಾಡಿದ್ದ ಪೊಂಗಲ್ ಜಾಹೀರಾತಿನಲ್ಲಿರುವ ತಪ್ಪುಗಳನ್ನು ಚೆನ್ನೈ ಮೂಲದ ಕೃತಿಕಾ ಶಿವಸ್ವಾಮಿ ಎಂಬುವವರು ಎತ್ತಿ ತೋರಿಸಿದ್ದಾರೆ.
ಕಚೇರಿ ಸಿಬ್ಬಂದಿಗೆ ಬಿಂದಿ, ತಿಲಕ ನಿಷೇಧಿಸಿ ವಿವಾದಕ್ಕೀಡಾಗಿದ್ದ ಪ್ರಸಿದ್ಧ ಐವೇರ್ (ಕನ್ನಡಕ) ಬ್ರ್ಯಾಂಡ್ 'ಲೆನ್ಸ್‌ಕಾರ್ಟ್' (Lenskart), ಇದೀಗ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದೆ. ತಮಿಳುನಾಡಿನ ಸುಗ್ಗಿ ಹಬ್ಬವಾದ ಪೊಂಗಲ್ (ಮಕರ ಸಂಕ್ರಾಂತಿ) ಕುರಿತಾಗಿ ಲೆನ್ಸ್‌ಕಾರ್ಟ್ ಈ ಹಿಂದೆ ಬಿಡುಗಡೆ ಮಾಡಿದ್ದ ಹಳೆಯ ಜಾಹೀರಾತೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಸ್ಥೆಯ ಸಾಂಸ್ಕೃತಿಕ ಅರಿವಿನ ಕೊರತೆಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನವರಿ 2025ರಲ್ಲಿ ಲೆನ್ಸ್‌ಕಾರ್ಟ್ ಬಿಡುಗಡೆ ಮಾಡಿದ್ದ ಪೊಂಗಲ್ ಜಾಹೀರಾತಿನಲ್ಲಿರುವ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಚೆನ್ನೈ ಮೂಲದ ಕೃತಿಕಾ ಶಿವಸ್ವಾಮಿ ಎಂಬುವವರು ಎಕ್ಸ್ (ಟ್ವಿಟರ್) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. "ಪೊಂಗಲ್ ಹಬ್ಬದಲ್ಲಿ ಯಾರಾದರೂ ಖರ್ಜೂರ ತಿನ್ನುತ್ತಾರೆಯೇ? ಜೊತೆಗೆ ಈ ವಿಲಕ್ಷಣ ವೇಷಭೂಷಣ ಮತ್ತು ವಸ್ತುಗಳ ಅರ್ಥವೇನು?" ಎಂದು ಅವರು ಪ್ರಶ್ನಿಸಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಆನ್‌ಲೈನ್ ಸಮುದಾಯ ಲೆನ್ಸ್‌ಕಾರ್ಟ್ ವಿರುದ್ಧ ತಿರುಗಿಬಿದ್ದಿದೆ.
ಸಾಂಪ್ರದಾಯಿಕವಾಗಿ ಕಬ್ಬು ಮತ್ತು ಪೊಂಗಲ್ (ಅಕ್ಕಿಯ ಖಾದ್ಯ) ಈ ಹಬ್ಬದ ಪ್ರಮುಖ ಆಕರ್ಷಣೆ. ಆದರೆ ಜಾಹೀರಾತಿನಲ್ಲಿ ಪೊಂಗಲ್ ತಟ್ಟೆಯಲ್ಲಿ 'ಖರ್ಜೂರ'ವನ್ನು ತೋರಿಸಲಾಗಿದೆ. "ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಆಹಾರ ಧಾನ್ಯಗಳು, ಡೈರಿ ಉತ್ಪನ್ನಗಳು ಮತ್ತು ಮಸಾಲೆಗಳ ಸಮೃದ್ಧಿಯಿದೆ. ಹಿಂದೂಗಳು ಯಾವುದೇ ಹಬ್ಬದಲ್ಲಿ ಖರ್ಜೂರವನ್ನು ತಿನ್ನುವುದಿಲ್ಲ. ಲೆನ್ಸ್‌ಕಾರ್ಟ್ ಅವರು ರಂಜಾನ್ ಹಾಗೂ ಪೊಂಗಲ್ ಹಬ್ಬದ ನಡುವೆ ಗೊಂದಲಕ್ಕೊಳಗಾದಂತಿದೆ" ಎಂದು ಅನೇಕ ಬಳಕೆದಾರರು ಟೀಕಿಸಿದ್ದಾರೆ.
ಜೊತೆಗೆ, ಜಾಹೀರಾತಿನಲ್ಲಿದ್ದ ಮಹಿಳಾ ರೂಪದರ್ಶಿಗಳು ಹಣೆಬೊಟ್ಟು (ಬಿಂದಿ) ಇಟ್ಟುಕೊಳ್ಳದಿರುವುದು ನೆಟ್ಟಿಗರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ. "ಹಣೆಬೊಟ್ಟು ಇಲ್ಲದಿದ್ದರೆ, ವ್ಯಾಪಾರವೂ ಇಲ್ಲ" (No Bindi, No Business) ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಲಾಗಿದೆ.
ಬಾಯ್ಕಾಟ್ ಲೆನ್ಸ್‌ಕಾರ್ಟ್ ಅಭಿಯಾನ
ಇತ್ತೀಚೆಗಷ್ಟೇ ಲೆನ್ಸ್‌ಕಾರ್ಟ್‌ನ "ಸಿಬ್ಬಂದಿ ಸಮವಸ್ತ್ರ ಮತ್ತು ಗ್ರೂಮಿಂಗ್ ಗೈಡ್" ಎಂಬ ಆಂತರಿಕ ನೀತಿಯ ದಾಖಲೆಯೊಂದು ಸೋರಿಕೆಯಾಗಿತ್ತು. ಅದರಲ್ಲಿ ಹಿಂದೂ ಉದ್ಯೋಗಿಗಳು ತಿಲಕ ಅಥವಾ ಬಿಂದಿ ಧರಿಸುವುದನ್ನು ನಿರ್ಬಂಧಿಸಲಾಗಿತ್ತು. ಆದರೆ ಹಿಜಾಬ್ ಮತ್ತು ಟರ್ಬನ್‌ಗಳಿಗೆ ಅವಕಾಶ ನೀಡಲಾಗಿತ್ತು. ಆ ವಿವಾದ ತಣ್ಣಗಾಗುವ ಮುನ್ನವೇ ಈ ಹಳೆಯ ಜಾಹೀರಾತು ವೈರಲ್ ಆಗಿದ್ದು, ಲೆನ್ಸ್‌ಕಾರ್ಟ್‌ನ ಸಾಂಸ್ಕೃತಿಕ ನಿಲುವುಗಳ ಬಗ್ಗೆ ಪ್ರಶ್ನೆಗಳನ್ನೆಬ್ಬಿಸಿದೆ. "ಇದು ಕೇವಲ ತಪ್ಪುಗ್ರಹಿಕೆಯಲ್ಲ, ಬದಲಾಗಿ ಹಿಂದೂ ಸಂಪ್ರದಾಯಗಳ ಬಗ್ಗೆ ಕಂಪನಿಗೆ ಇರುವ ಅಗೌರವವನ್ನು ತೋರಿಸುತ್ತದೆ. ಪ್ರತಿಯೊಬ್ಬ ಸ್ವಾಭಿಮಾನಿ ಹಿಂದೂಗಳು ಲೆನ್ಸ್‌ಕಾರ್ಟ್ ಅನ್ನು ಬಹಿಷ್ಕರಿಸಬೇಕು" (#BoycottLenskart) ಎಂಬ ಕರೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಸಿಇಒ ಪಿಯೂಷ್ ಬನ್ಸಾಲ್ ಸ್ಪಷ್ಟನೆ ಏನು?
ಈ ವಿವಾದಗಳ ಕುರಿತು ಪ್ರತಿಕ್ರಿಯಿಸಿರುವ ಲೆನ್ಸ್‌ಕಾರ್ಟ್ ಸಂಸ್ಥಾಪಕ ಮತ್ತು ಸಿಇಒ ಪಿಯೂಷ್ ಬನ್ಸಾಲ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಂತರಿಕ ನೀತಿಯ ದಾಖಲೆಯು "ಹಳೆಯದು" ಎಂದಿದ್ದಾರೆ. "ನಮ್ಮ ಪ್ರಸ್ತುತ ನೀತಿಯಲ್ಲಿ ಬಿಂದಿ, ತಿಲಕ ಸೇರಿದಂತೆ ಯಾವುದೇ ಧಾರ್ಮಿಕ ಅಭಿವ್ಯಕ್ತಿಯ ಮೇಲೆ ನಿರ್ಬಂಧಗಳಿಲ್ಲ. ಗೊಂದಲಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ" ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಪೊಂಗಲ್ ಜಾಹೀರಾತಿನ ವಿವಾದವು ಅವರ ಈ ಸಮರ್ಥನೆಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ.

