
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು ಏರ್‌ಪೋರ್ಟ್ ಹೊಸ ದಾಖಲೆ: 40 ಕೋಟಿ ಪ್ರಯಾಣಿಕರ ಸಂಚಾರ, ಕೃಷಿ ರಫ್ತಿನಲ್ಲಿ ಸತತ 5ನೇ ವರ್ಷವೂ ನಂ.1
2025-26ನೇ ಹಣಕಾಸು ವರ್ಷದಲ್ಲಿ ಒಟ್ಟು 44.47 ಮಿಲಿಯನ್ ಪ್ರಯಾಣಿಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 6.2ರಷ್ಟು ಪ್ರಗತಿಯನ್ನು ತೋರಿಸುತ್ತದೆ.
ಸಿಲಿಕಾನ್ ಸಿಟಿಯ ಹೆಮ್ಮೆಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಕಾರ್ಯಾಚರಣೆ ಆರಂಭಿಸಿದ ದಿನದಿಂದ ಈವರೆಗೆ ಬರೋಬ್ಬರಿ 40 ಕೋಟಿ (400 ಮಿಲಿಯನ್) ಪ್ರಯಾಣಿಕರಿಗೆ ಸೇವೆ ಒದಗಿಸಿದ ಮಹತ್ವದ ಮೈಲಿಗಲ್ಲನ್ನು ದಾಟುವ ಮೂಲಕ ಜಾಗತಿಕ ವಿಮಾನಯಾನ ಭೂಪಟದಲ್ಲಿ ತನ್ನ ಛಾಪನ್ನು ಮತ್ತಷ್ಟು ಬಲಪಡಿಸಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮಂಡಳಿಯ 134ನೇ ಸಭೆಯಲ್ಲಿ ಈ ಸಾಧನೆಯನ್ನು ಹೆಮ್ಮೆಯಿಂದ ಪ್ರಕಟಿಸಲಾಯಿತು. 2025-26ನೇ ಹಣಕಾಸು ವರ್ಷದ ಕಾರ್ಯಾಚರಣೆ ಹಾಗೂ ಪ್ರಗತಿಯನ್ನು ಪರಾಮರ್ಶಿಸಿದ ಮಂಡಳಿಯು, ಜಾಗತಿಕ ವಾಯುಯಾನ ವಲಯದಲ್ಲಿದ್ದ ಸವಾಲುಗಳ ನಡುವೆಯೂ ಈ ಅತ್ಯುತ್ತಮ ಸಾಧನೆ ಮಾಡಿದ ಆಡಳಿತ ಮಂಡಳಿ, ಸಿಇಒ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿತು. ಏಪ್ರಿಲ್ 2026ರ ವೇಳೆಗೆ ಈ 40 ಕೋಟಿ ಪ್ರಯಾಣಿಕರ ಮೈಲಿಗಲ್ಲನ್ನು ವಿಮಾನ ನಿಲ್ದಾಣವು ಯಶಸ್ವಿಯಾಗಿ ತಲುಪಿದೆ.
ಪ್ರಯಾಣಿಕರ ಸಂಚಾರದಲ್ಲಿ ಭಾರಿ ಏರಿಕೆ
2025-26ನೇ ಹಣಕಾಸು ವರ್ಷದಲ್ಲಿ ಒಟ್ಟು 44.47 ಮಿಲಿಯನ್ ಪ್ರಯಾಣಿಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 6.2ರಷ್ಟು ಪ್ರಗತಿಯನ್ನು ತೋರಿಸುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರಯಾಣಿಕರ ಓಡಾಟ ಗಣನೀಯವಾಗಿ ಹೆಚ್ಚಿದ್ದು, 7.23 ಮಿಲಿಯನ್ ಅಂತರರಾಷ್ಟ್ರೀಯ ಪ್ರಯಾಣಿಕರು ಸಂಚರಿಸುವ ಮೂಲಕ ಶೇಕಡಾ 23.9ರಷ್ಟು ಭಾರಿ ಬೆಳವಣಿಗೆಯಾಗಿದೆ. ಅದೇ ರೀತಿ, ದೇಶೀಯ ವಲಯದಲ್ಲಿ 37.24 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದು, ಶೇಕಡಾ 3.3ರಷ್ಟು ಏರಿಕೆ ಕಂಡಿದೆ. ಒಂದೇ ದಿನದಲ್ಲಿ ಗರಿಷ್ಠ 139,111 ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ವಿಮಾನ ನಿಲ್ದಾಣವು ಹೊಸ ದಾಖಲೆ ಬರೆದಿದ್ದು, ಪ್ರಸ್ತುತ 78 ದೇಶೀಯ ಹಾಗೂ 34 ಅಂತರರಾಷ್ಟ್ರೀಯ ತಾಣಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿದೆ.
ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಅಗ್ರಸ್ಥಾನ
ಪ್ರಯಾಣಿಕರ ನಿರ್ವಹಣೆಯ ಜೊತೆಗೆ ಸರಕು ಸಾಗಣೆಯಲ್ಲೂ ವಿಮಾನ ನಿಲ್ದಾಣವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಈ ವರ್ಷ 532,000 ಮೆಟ್ರಿಕ್ ಟನ್ ಸರಕು ನಿರ್ವಹಣೆ ಮಾಡುವ ಮೂಲಕ ಶೇಕಡಾ 6ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಹದಿನೈದು ಕಾರ್ಗೋ ವಿಮಾನಯಾನ ಸಂಸ್ಥೆಗಳ ಮೂಲಕ ಚಿಕಾಗೊ, ಸಿಂಗಾಪುರ, ಲಂಡನ್ ಮತ್ತು ಫ್ರಾಂಕ್‌ಫರ್ಟ್ ಸೇರಿದಂತೆ 38 ಜಾಗತಿಕ ಹಬ್‌ಗಳಿಗೆ ಸರಕು ರವಾನೆಯಾಗುತ್ತಿದೆ. ವಿಶೇಷವಾಗಿ, ಬೇಗ ಹಾಳಾಗುವ ಕೃಷಿ ಉತ್ಪನ್ನಗಳ (Perishables) ರಫ್ತಿನಲ್ಲಿ ಬೆಂಗಳೂರು ಸತತ ಐದನೇ ವರ್ಷವೂ ದೇಶದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿರುವುದು ಮಹತ್ವದ ಸಾಧನೆಯಾಗಿದೆ. ಈ ಅವಧಿಯಲ್ಲಿ ಸುಮಾರು 60 ಮಿಲಿಯನ್ ಗುಲಾಬಿ ಹೂವಿನ ಕಡ್ಡಿಗಳನ್ನು ರಫ್ತು ಮಾಡಲಾಗಿದ್ದು, ಇದರಲ್ಲಿ ಶೇಕಡಾ 38ರಷ್ಟು ಭಾರಿ ಹೆಚ್ಚಳವಾಗಿದೆ. ಹಾಗೆಯೇ ಮಾವಿನ ಹಣ್ಣಿನ ರಫ್ತಿನಲ್ಲಿ ಶೇಕಡಾ 12 ಹಾಗೂ ಕೊತ್ತಂಬರಿ ಸೊಪ್ಪಿನ ರಫ್ತಿನಲ್ಲಿ ಶೇಕಡಾ 13ರಷ್ಟು ಹೆಚ್ಚಳ ದಾಖಲಾಗಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರಕು ಸಾಗಾಟ ಮಾಡುತ್ತಿರುವುದು.
ಜಾಗತಿಕ ಪ್ರಶಸ್ತಿಗಳ ಗರಿ
ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ, ತಂತ್ರಜ್ಞಾನ ಅಳವಡಿಕೆ ಹಾಗೂ ಸುರಕ್ಷತೆಗೆ ನೀಡಿದ ಆದ್ಯತೆಗಾಗಿ ಬಿಐಎಎಲ್ ಹಲವು ಜಾಗತಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸ್ಕೈಟ್ರಾಕ್ಸ್ ಪ್ರಶಸ್ತಿಯಡಿ ಸತತ ಮೂರನೇ ವರ್ಷ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ವಿಶ್ವದ ಟಾಪ್ 100 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಜಿಗಿದಿದೆ. ವಿಮಾನ ನಿಲ್ದಾಣದ ಒಳಾಂಗಣ ವಿನ್ಯಾಸ ಮತ್ತು ಕಲಾಕೃತಿಗಳಿಗಾಗಿ, ವಿಶ್ವದ ಅತ್ಯುತ್ತಮ ಕಲೆ ಹೊಂದಿರುವ ಟಾಪ್ 5 ವಿಮಾನ ನಿಲ್ದಾಣಗಳ ಪೈಕಿ ಒಂದಾಗಿ ಆಯ್ಕೆಯಾಗಿದೆ.
ಅತ್ಯುತ್ತಮ ಆಗಮನ ಮತ್ತು ಸುರಕ್ಷತಾ ಮಾನ್ಯತೆ
ಎಸಿಐ ಎಎಸ್‌ಕ್ಯೂ ಪ್ರಶಸ್ತಿಯಡಿ ಜಾಗತಿಕವಾಗಿ ಸತತ ನಾಲ್ಕನೇ ವರ್ಷ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ (Best Airport at Arrivals) ಎಂಬ ಕೀರ್ತಿಗೆ ವಿಮಾನ ನಿಲ್ದಾಣ ಭಾಜನವಾಗಿದೆ. ಎಸಿಐ ಜಾಗತಿಕ ಸುರಕ್ಷತಾ ಪ್ರಶಸ್ತಿಗಳಲ್ಲಿ ಡೈಮಂಡ್ ಪ್ರಶಸ್ತಿ ಹಾಗೂ ಸುಲಭ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಲೆವೆಲ್ 3 ಮಾನ್ಯತೆ ಲಭಿಸಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದ ಸಾಮರ್ಥ್ಯ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಮುಂದುವರಿಸಲು ಮಂಡಳಿಯು ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

