ಮದ್ಯಪ್ರಿಯರಿಗೆ ಶಾಕ್‌: ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವ್ಯವಸ್ಥೆ ಜಾರಿ; ಎಣ್ಣೆ ರೇಟ್​ ಭಾರಿ ಏರಿಕೆ
x
ಮದ್ಯ ಮಾರಾಟಕ್ಕೆ ಹೊಸ ನೀತಿ

ಮದ್ಯಪ್ರಿಯರಿಗೆ ಶಾಕ್‌: ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವ್ಯವಸ್ಥೆ ಜಾರಿ; ಎಣ್ಣೆ ರೇಟ್​ ಭಾರಿ ಏರಿಕೆ

ಪ್ರಸ್ತುತ, ಮದ್ಯದ ಬಾಟಲಿಯ ಬೆಲೆ ಅಥವಾ ಸ್ಲ್ಯಾಬ್‌ಗಳ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಹೊಸ ಅಬಕಾರಿ ನೀತಿಗೆ ತಂದಿರುವ ತಿದ್ದುಪಡಿಯಲ್ಲಿ ಎಐಬಿ (ಆಲ್ಕೋಹಾಲ್-ಇನ್-ಬೇವರೇಜ್) ಆಧರಿತ ತೆರಿಗೆ ವಿಧಿಸಲು ನಿರ್ಧರಿಸಿದೆ.


ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಹೊಸ ಶಾಕ್‌ ನೀಡಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ಹೊಸ ವ್ಯವಸ್ಥೆ ಜಾರಿಗಾಗಿ ಸರ್ಕಾರವು ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಇದರಿಂದಾಗಿ ವಿಸ್ಕಿ, ರಮ್, ಜಿನ್ ಹಾಗೂ ಬ್ರಾಂಡಿಗಳ ಎಂಆರ್‌ಪಿ ಬೆಲೆಯು ಕನಿಷ್ಠ ಶೇ. 20ರಷ್ಟು ಹೆಚ್ಚಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಲ್ಕೋಹಾಲ್‌ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಘೋಷಿಸಿದ್ದು, ಅದು ಈಗ ಅನುಷ್ಠಾನಕ್ಕೆ ಬರುತ್ತಿದೆ.

ಪ್ರಸ್ತುತ ಮದ್ಯದ ಬಾಟಲಿಯ ಬೆಲೆ ಅಥವಾ ಸ್ಲ್ಯಾಬ್‌ಗಳ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಹೊಸ ಅಬಕಾರಿ ನೀತಿಗೆ ತಂದಿರುವ ತಿದ್ದುಪಡಿಯಲ್ಲಿ 'ಎಐಬಿ' (ಆಲ್ಕೋಹಾಲ್-ಇನ್-ಬ್ರೇವರೇಜ್) ಆಧಾರಿತ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಎಷ್ಟು ಹೆಚ್ಚಿರುತ್ತದೆಯೋ, ಅಷ್ಟೇ ಹೆಚ್ಚಿನ ತೆರಿಗೆ ವಿಧಿಸುವ ವ್ಯವಸ್ಥೆಯನ್ನು ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ದೇಶಿಯವಾಗಿ ತಯಾರಾಗುವ (ಐಎಂಎಲ್) ಮದ್ಯದ ಬೆಲೆಗಳು ಗಣನೀಯವಾಗಿ ಏರಿಕೆಯಾಗಲಿವೆ.

ಹೊಸ ನೀತಿಯಲ್ಲಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು 16ರಿಂದ 8ಕ್ಕೆ ಇಳಿಸಲಾಗಿದೆ. ಬಡ ಹಾಗೂ ಮಧ್ಯಮ ವರ್ಗದವರು ಆಲ್ಕೋಹಾಲ್‌ ಪ್ರಮಾಣ ಶೇ. 42.8ರಷ್ಟು ಇರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯವನ್ನೇ ಹೆಚ್ಚಾಗಿ ಖರೀದಿಸುತ್ತಾರೆ. ಈ ಸ್ಲ್ಯಾಬ್‌ಗಳಲ್ಲಿ ಲಭ್ಯವಿರುವ 180 ಮಿಲಿ ಮದ್ಯದ ಬೆಲೆಯು 105 ರಿಂದ 110 ರೂ. ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ವರ್ಷವಷ್ಟೇ ಮೊದಲ ನಾಲ್ಕು ಸ್ಲ್ಯಾಬ್‌ಗಳ (180 ಮಿಲಿ) ಬೆಲೆಯನ್ನು 80 ರಿಂದ 95 ರೂ.ಗಳಿಗೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆಯಾದರೆ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯವೇನೋ ಬರಲಿದೆ, ಆದರೆ ಬಡ ಮತ್ತು ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬೀಳಲಿದೆ.

ಕರ್ನಾಟಕದಲ್ಲಿ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಮಾರಾಟ ಪ್ರಮಾಣವೇ ಶೇ. 80ರಷ್ಟಿರುವುದರಿಂದ ರಾಜ್ಯದ ಅಬಕಾರಿ ಆದಾಯ ವೃದ್ಧಿಸಲಿದೆ. ಇದೇ ಉದ್ದೇಶದಿಂದ ಸರ್ಕಾರವು ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗ್ಯಾರೆಂಟಿ ಯೋಜನೆಗಳಿಂದಾಗಿ ಬೊಕ್ಕಸ ಖಾಲಿಯಾಗಿದ್ದು, ಅಬಕಾರಿ ಮೂಲಕ ಅದನ್ನು ತುಂಬಿಸುವ ಪ್ರಯತ್ನಕ್ಕೆ ಸರ್ಕಾರ ಕೈಹಾಕಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.

ದೇಶದಲ್ಲೇ ಮೊದಲ ಪ್ರಯೋಗ

ರಾಜ್ಯ ಸರ್ಕಾರವು ಆರು ದಶಕಗಳ ಹಳೆಯ ಮದ್ಯ ತೆರಿಗೆ ನೀತಿಗೆ ತಿದ್ದುಪಡಿ ತಂದಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ 'ಆಲ್ಕೋಹಾಲ್ ಆಧಾರಿತ ತೆರಿಗೆ' ಪದ್ಧತಿಯನ್ನು ಭಾರತದಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಈ ಮೂಲಕ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

ಈ ಮಧ್ಯೆ, ಸರ್ಕಾರದ ನಿರ್ಧಾರಕ್ಕೆ ಮದ್ಯ ತಯಾರಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರಸಾ ಪ್ರತಿಕ್ರಿಯಿಸಿ, "ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯವನ್ನು ಜನಸಾಮಾನ್ಯರು ಬಳಸುತ್ತಾರೆ. ಈಗಾಗಲೇ ಬೆಲೆ ಏರಿಕೆಯಿಂದ ಮದ್ಯಪ್ರಿಯರು ತತ್ತರಿಸಿದ್ದಾರೆ. ಬೆಲೆ ಮತ್ತಷ್ಟು ಹೆಚ್ಚಾದರೆ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸ ತೆರಿಗೆ ವ್ಯವಸ್ಥೆಯ ಜಾರಿ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಅಂತಿಮ ಅಧಿಸೂಚನೆ ಹೊರಬೀಳುವ ಮುನ್ನ ಸರ್ಕಾರವು ಮದ್ಯ ತಯಾರಕರ ಅಹವಾಲುಗಳನ್ನು ಆಲಿಸಲಿದೆ ಎಂಬ ಭರವಸೆಯಿದೆ ಎಂದು ಅವರು ತಿಳಿಸಿದ್ದಾರೆ.

ಅಬಕಾರಿ ನೀತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರವು ಇತ್ತೀಚೆಗೆ ಕರಡು ಅಧಿಸೂಚನೆಯನ್ನು ಪ್ರಕಟಿಸಿತ್ತು. 2026-27ನೇ ಸಾಲಿನ ಬಜೆಟ್ ಘೋಷಣೆಯಂತೆ, ಮದ್ಯದ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ತರುವುದು ಮತ್ತು ತೆರಿಗೆ ಸೋರಿಕೆ ತಡೆಯುವುದು ಈ ಹೊಸ ನೀತಿಯ ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ.

ಪ್ರೀಮಿಯಂ ಮದ್ಯ ಮಾರಾಟ ಹೆಚ್ಚಳಕ್ಕೆ ಒತ್ತು

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಮದ್ಯದ ಮಾರಾಟ ಪ್ರಮಾಣ ಶೇ. 90ರಷ್ಟಿದ್ದರೆ, ದುಬಾರಿ ಬೆಲೆಯ ಪ್ರೀಮಿಯಂ ಬ್ರಾಂಡ್ ಲಿಕ್ಕರ್ ಪ್ರಮಾಣ ಕೇವಲ ಶೇ. 10ರಷ್ಟಿದೆ. ಮದ್ಯ ಮಾರಾಟ ತೆರಿಗೆ ಹಾಗೂ ಹೆಚ್ಚುವರಿ ತೆರಿಗೆಗಳನ್ನು ಈಗಾಗಲೇ ಗರಿಷ್ಠ ಮಟ್ಟದಲ್ಲಿ ವಿಧಿಸಲಾಗಿದೆ. ಇನ್ನು ಮುಂದೆ ತೆರಿಗೆ ಏರಿಸುವುದು ಕಷ್ಟಕರ ಎಂದು ಅರಿತ ಸರ್ಕಾರ, 'ಎಐಬಿ' ಮೂಲಕ ಗ್ರಾಹಕರನ್ನು ಪ್ರೀಮಿಯಂ ಬ್ರಾಂಡ್ ಮದ್ಯ ಸೇವನೆಯತ್ತ ಪ್ರೋತ್ಸಾಹಿಸಲು ತೀರ್ಮಾನಿಸಿದೆ. ಶೇ. 10ರಷ್ಟಿರುವ ಪ್ರೀಮಿಯಂ ಲಿಕ್ಕರ್ ಮಾರಾಟವನ್ನು ಶೇ. 90ಕ್ಕೆ ಹೆಚ್ಚಿಸಿ, ಆ ಮೂಲಕ ಆದಾಯ ಗಳಿಸುವುದು ಸರ್ಕಾರದ ಗುರಿಯಾಗಿದೆ.

ಏನಿದು ಎಐಬಿ ವ್ಯವಸ್ಥೆ?

ಮದ್ಯದಲ್ಲಿರುವ ಆಲ್ಕೋಹಾಲ್‌ ಪ್ರಮಾಣಕ್ಕೆ ಅನುಗುಣವಾಗಿ ಅಬಕಾರಿ ಸುಂಕ ವಿಧಿಸುವ ವಿಧಾನವೇ 'ಎಐಬಿ' (ಆಲ್ಕೋಹಾಲ್‌ ಇನ್‌ ಬ್ರೇವರೇಜಸ್). ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿರುವ ಈ ವ್ಯವಸ್ಥೆಯನ್ನು ಭಾರತದಲ್ಲಿ ಅಳವಡಿಸಿಕೊಳ್ಳಲು ಕರ್ನಾಟಕ ಮುಂದಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ನೇತೃತ್ವದ ಸಂಪನ್ಮೂಲ ಕ್ರೋಡೀಕರಣ ಸಮಿತಿ (ಆರ್‌ಎಂಸಿ) ನೀಡಿದ ಮಧ್ಯಂತರ ವರದಿಯ ಶಿಫಾರಸಿನ ಆಧಾರದ ಮೇಲೆ ರಾಜ್ಯ ಸರ್ಕಾರವು ಈ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಪ್ರಸ್ತಾವನೆಯನ್ನು ಘೋಷಿಸಿದ್ದರೂ, ಇಲಾಖೆಯಲ್ಲಾಗಲಿ ಅಥವಾ ಪಾಲುದಾರರ ಜೊತೆಗಾಗಲಿ ಈವರೆಗೆ ಅಧಿಕೃತ ಮಾತುಕತೆ ನಡೆಸಿಲ್ಲ. ಹೀಗಾಗಿ ಮದ್ಯ ತಯಾರಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂಬುದು ಉದ್ಯಮ ವಲಯದ ಪ್ರಮುಖ ಆಗ್ರಹವಾಗಿದೆ.

Read More
Next Story