ಮೈಕ್ರೋಸಾಫ್ಟ್ ಗೇಮಿಂಗ್ Xbox ಮುಖ್ಯಸ್ಥೆಯಾಗಿ ಭಾರತೀಯ ಮೂಲದ ಆಶಾ ಶರ್ಮಾ
x

ವಿಶ್ವದ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್, ತನ್ನ ಗೇಮಿಂಗ್ ವಿಭಾಗದ ನೇತೃತ್ವವನ್ನು ಭಾರತೀಯ ಮೂಲದ ಉನ್ನತ ಅಧಿಕಾರಿ ಆಶಾ ಶರ್ಮಾ ಅವರಿಗೆ ವಹಿಸಿದೆ. 

ಮೈಕ್ರೋಸಾಫ್ಟ್ ಗೇಮಿಂಗ್ Xbox ಮುಖ್ಯಸ್ಥೆಯಾಗಿ ಭಾರತೀಯ ಮೂಲದ ಆಶಾ ಶರ್ಮಾ

ಆಶಾ ಶರ್ಮಾ ಅವರು ನೇರವಾಗಿ ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ.


Click the Play button to hear this message in audio format

ವಿಶ್ವದ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್, ತನ್ನ ಗೇಮಿಂಗ್ ವಿಭಾಗದ ನೇತೃತ್ವವನ್ನು ಭಾರತೀಯ ಮೂಲದ ಉನ್ನತ ಅಧಿಕಾರಿ ಆಶಾ ಶರ್ಮಾ ಅವರಿಗೆ ವಹಿಸಿದೆ. ಫೆಬ್ರವರಿ 20, 2026ರಂದು ಅಧಿಕೃತವಾಗಿ ಘೋಷಿಸಲಾದ ಈ ನೇಮಕಾತಿ, Xbox ಬ್ರ್ಯಾಂಡ್‌ನ ಇತಿಹಾಸದಲ್ಲಿ ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಫಿಲ್ ಸ್ಪೆನ್ಸರ್ ನಿವೃತ್ತಿಯ ಬಳಿಕ ಆಶಾಗೆ ಆ ಸ್ಥಾನ ದೊರಕಿದೆ.

ಆಶಾ ಶರ್ಮಾ ಅವರನ್ನು ಮೈಕ್ರೋಸಾಫ್ಟ್ ಗೇಮಿಂಗ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (EVP & CEO) ಆಗಿ ನೇಮಿಸಲಾಗಿದ್ದು, ಅವರು ನೇರವಾಗಿ ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ. ಫಿಲ್ ಸ್ಪೆನ್ಸರ್ ಈ ಬೇಸಿಗೆಯ ತನಕ ಸಲಹೆಗಾರ ಪಾತ್ರದಲ್ಲಿ ಮುಂದುವರಿದ ನಂತರ ಸಂಪೂರ್ಣ ನಿವೃತ್ತಿ ಪಡೆಯಲಿದ್ದಾರೆ. ಜೊತೆಗೆ, ಮ್ಯಾಟ್ ಬೂಟಿ ಅವರನ್ನು ಗೇಮ್ ಕಂಟೆಂಟ್ ಮತ್ತು ಸ್ಟುಡಿಯೋಸ್ ಅಧ್ಯಕ್ಷರಾಗಿ ನೇಮಿಸಲಾಗಿದ್ದು, 'ಕಾಲ್ ಆಫ್ ಡ್ಯೂಟಿ' ಮತ್ತು 'ಹೆಲೋ' ಸೇರಿದಂತೆ 40ಕ್ಕೂ ಹೆಚ್ಚು ಸ್ಟುಡಿಯೋಗಳ ಸೃಜನಶೀಲ ನಿರ್ದೇಶನ ಅವರ ಹೊಣೆಗಾರಿಕೆಯಾಗಲಿದೆ.

ಯಾರೀ ಆಶಾ ಶರ್ಮಾ?

ಆಶಾ ಶರ್ಮಾ ಭಾರತೀಯ ಮೂಲದ ಉನ್ನತ ತಂತ್ರಜ್ಞಾನ ಕಾರ್ಯನಿರ್ವಾಹಕರಾಗಿ ಮೈಕ್ರೋಸಾಫ್ಟ್‌ಗೆ 2024ರಲ್ಲಿ ಸೇರ್ಪಡೆಯಾಗಿದ್ದರು. ಸೇರ್ಪಡೆ ಮೊದಲು ಅವರು ಕೃತಕ ಬುದ್ಧಿಮತ್ತೆ ಪ್ಲಾಟ್‌ಫಾರ್ಮ್ ವಿಭಾಗದ ಕಾರ್ಪೊರೇಟ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮೊದಲು ಅಮೆರಿಕದ ಪ್ರಮುಖ ಗ್ರಾಸರಿ ಡೆಲಿವರಿ ಕಂಪನಿ ಇನ್‌ಸ್ಟಾಕಾರ್ಟ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಆಗಿ ಸೇವೆ ಸಲ್ಲಿಸಿದ್ದ ಅವರು, ಮೆಟಾ (ಫೇಸ್‌ಬುಕ್) ಕಂಪನಿಯಲ್ಲಿ ಉಪಾಧ್ಯಕ್ಷರಾಗಿ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಡೈರೆಕ್ಟ್ ಸೇವೆಗಳ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಾಂಪ್ರದಾಯಿಕ ಗೇಮಿಂಗ್ ಉದ್ಯಮದ ಹಿನ್ನೆಲೆ ಹೊಂದಿಲ್ಲ. ಆದರೆ ಕೋಟ್ಯಂತರ ಬಳಕೆದಾರರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ವಹಿಸಿ ಬೆಳೆಸಿದ ಅನುಭವ ಅವರ ಸಾಮರ್ಥ್ಯ ಅವರಿಗಿದೆ.

ಎಐ ಸಂಯೋಜನೆಯೇ ಆದ್ಯತೆ

ಸತ್ಯ ನಾದೆಲ್ಲಾ ಅವರು ಶರ್ಮಾ ಅವರ "ಪ್ಲಾಟ್‌ಫಾರ್ಮ್ ನಿರ್ಮಾಣ ಸಾಮರ್ಥ್ಯ" ಮತ್ತು ಬಳಕೆದಾರರ ಬಗ್ಗೆ ಇರುವ "ನೈಜ ಕುತೂಹಲ"ವನ್ನು ಅವರ ನೇಮಕಾತಿಗೆ ಮುಖ್ಯ ಕಾರಣ ಎಂದು ಹೇಳಿದ್ದಾರೆ. ತಂತ್ರಜ್ಞಾನ ಉದ್ಯಮ ತಜ್ಞರ ಪ್ರಕಾರ, ಮೈಕ್ರೋಸಾಫ್ಟ್‌ನ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು Xbox ವ್ಯವಸ್ಥೆಯಲ್ಲಿ ಅಳವಡಿಸುವುದು ಶರ್ಮಾ ಅವರ ಮೊದಲ ಆದ್ಯತೆಯಾಗಲಿದೆ. ಗೇಮ್ ಅಭಿವೃದ್ಧಿ ವೆಚ್ಚ ತಗ್ಗಿಸುವಲ್ಲಿ ಮತ್ತು ಆಟಗಾರರ ಅನುಭವವನ್ನು ಕಸ್ಟಮೈಸ್ಡ್​​ ಮಾಡುವಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ. ತಮ್ಮ ಮೊದಲ ಹೇಳಿಕೆಯಲ್ಲಿ ಶರ್ಮಾ, "ಆಟಗಾರರು ಮತ್ತು ಡೆವಲಪರ್‌ಗಳ ವಿಶ್ವಾಸ ಗಳಿಸುವ ಹಕ್ಕನ್ನು ಪ್ರಯತ್ನದ ಮೂಲಕ ಸಾಧಿಸಬೇಕು" ಎಂದು ಹೇಳಿದ್ದಾರೆ.

ತಂತ್ರಜ್ಞಾನ ರಂಗದಲ್ಲಿ ಭಾರತೀಯ ಪ್ರತಿಭೆಗಳು

ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧೀಕಾರಿ ಸತ್ಯ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಅಡೋಬ್ ಸಿಇಒ ಶಂತನು ನಾರಾಯಣ್ ಸೇರಿದಂತೆ ಅಮೆರಿಕದ ಬಹು ಪ್ರಮುಖ ತಂತ್ರಜ್ಞಾನ ಕಂಪನಿಗಳ ನೇತೃತ್ವ ಭಾರತೀಯ ಮೂಲದ ಉದ್ಯೋಗಿಗಳ ಕೈಯಲ್ಲಿ ಇರುವ ಬೆನ್ನಲ್ಲೇ, ಆಶಾ ಶರ್ಮಾ ಅವರ ನೇಮ ಮತ್ತೊಮ್ಮೆ ಭಾರತೀಯ ಪ್ರತಿಭೆಯ ಜಾಗತಿಕ ಪ್ರಾಬಲ್ಯವನ್ನು ಸಾರುತ್ತಿದೆ. 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ Xbox ಪರಿಸರ ವ್ಯವಸ್ಥೆ ಈಗ ಒಬ್ಬ ಭಾರತೀಯ ಮೂಲದ ಮಹಿಳಾ ನಾಯಕಿಯ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಮುಂದಡಿ ಇಡಲಿದೆ.

Read More
Next Story