ಅಧಿಕೃತ ದಾಖಲೆಗಳ ಅನುಪಸ್ಥಿತಿಯಲ್ಲಿ, ಇದೊಂದು ಏಕಪಕ್ಷೀಯ ರಾಜಕೀಯ ಹೇಳಿಕೆಯಂತೆ ಕಾಣುತ್ತಿದೆ. ಎರಡೂ ಸರ್ಕಾರಗಳು ಅಧಿಕೃತ ಪಠ್ಯವನ್ನು ಬಿಡುಗಡೆ ಮಾಡುವವರೆಗೆ ಒಪ್ಪಂದದ ವ್ಯಾಪ್ತಿ ಅಸ್ಪಷ್ಟವಾಗಿಯೇ ಉಳಿಯಲಿದೆ.

Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದಾಗಿ ಸೋಮವಾರ (ಫೆ.2) ಘೋಷಿಸಿದ್ದು, ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಆದರೆ, ಘೋಷಣೆ ಹೊರಬಿದ್ದು 12 ಗಂಟೆಗಳು ಕಳೆದರೂ, ಉಭಯ ದೇಶಗಳಿಂದ ಯಾವುದೇ ಅಧಿಕೃತ ಜಂಟಿ ಹೇಳಿಕೆ ಅಥವಾ ಒಪ್ಪಂದದ ಪ್ರತಿ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಟ್ರಂಪ್ ಅವರ ಹೇಳಿಕೆ ಮತ್ತು ಅಮೆರಿಕದ ಅಧಿಕಾರಿಗಳ ಸ್ಪಷ್ಟನೆಗಳೇ ಮಾಹಿತಿಗೆ ಆಧಾರವಾಗಿವೆ.

ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿಯ 10 ಮುಖ್ಯಾಂಶಗಳು ಇಲ್ಲಿವೆ:

1. ಟ್ರಂಪ್ ಘೋಷಣೆ ಏನು

ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ 'ಟ್ರುತ್ ಸೋಷಿಯಲ್'ನಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗಿನ ಫೋನ್ ಕರೆಯ ನಂತರ, ಸುಂಕ ಕಡಿತ ಮತ್ತು ಅಮೆರಿಕದ ಸರಕುಗಳ ಬೃಹತ್ ಖರೀದಿಯನ್ನು ಒಳಗೊಂಡ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

2. ಸುಂಕ ಶೇ. 18ಕ್ಕೆ ಇಳಿಕೆ

ಅಮೆರಿಕವು ಭಾರತೀಯ ಸರಕುಗಳ ಮೇಲಿನ 'ಪರಸ್ಪರ ಸುಂಕ'ವನ್ನುತಕ್ಷಣವೇ ಶೇ. 18ಕ್ಕೆ ಇಳಿಸಲಿದೆ. ರಷ್ಯಾ ತೈಲ ಖರೀದಿಗೆ ಸಂಬಂಧಿಸಿದಂತೆ ಈ ಹಿಂದೆ ಶೇ. 50 ರಷ್ಟಿದ್ದ ಸುಂಕವನ್ನು ಈಗ ಶೇ. 18ಕ್ಕೆ ಇಳಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

3. ಯಾವ ಉತ್ಪನ್ನಗಳಿಗೆ ಅನ್ವಯ?

ಕಡಿಮೆಗೊಳಿಸಲಾದ ಈ ಸುಂಕವು ಯಾವೆಲ್ಲಾ ಭಾರತೀಯ ರಫ್ತು ಸರಕುಗಳಿಗೆ ಅನ್ವಯವಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

4. ಕೆಲವು ಸುಂಕಗಳು ಮುಂದುವರಿಕೆ

ಉಕ್ಕು, ಅಲ್ಯೂಮಿನಿಯಂ ಮತ್ತು ತಾಮ್ರದ ಮೇಲಿನ ಶೇ. 50 ಸುಂಕ ಹಾಗೂ ಕೆಲವು ಆಟೋ ಬಿಡಿಭಾಗಗಳ ಮೇಲಿನ ಶೇ. 25 ಸುಂಕ ಮುಂದುವರಿಯುವ ಸಾಧ್ಯತೆಯಿದೆ. ಔಷಧಗಳು ಮತ್ತು ವಿಮಾನ ಬಿಡಿಭಾಗಗಳಿಗೆ ಈಗಾಗಲೇ ಇರುವ ಶೂನ್ಯ ಸುಂಕದಲ್ಲಿ ಬದಲಾವಣೆ ಇಲ್ಲ.

5. ಭಾರತದ ಕಡೆಯಿಂದ ಶೂನ್ಯ ಸುಂಕ?

ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು 'ಶೂನ್ಯ'ಕ್ಕೆ (Zero) ಇಳಿಸಲು ಭಾರತ ಒಪ್ಪಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಕೃಷಿಯಂತಹ ಸೂಕ್ಷ್ಮ ವಲಯಗಳ ಬಗ್ಗೆ ಭಾರತದ ಕಡೆಯಿಂದ ಯಾವುದೇ ದೃಢೀಕರಣ ಬಂದಿಲ್ಲ.

6. 500 ಬಿಲಿಯನ್ ಡಾಲರ್​ ಖರೀದಿ ಡೀಲ್

ಇಂಧನ, ತಂತ್ರಜ್ಞಾನ, ಕೃಷಿ ಮತ್ತು ಕಲ್ಲಿದ್ದಲು ಸೇರಿದಂತೆ 500 ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಅಮೆರಿಕದ ಸರಕುಗಳನ್ನು ಭಾರತ ಖರೀದಿಸಲಿದೆ ಎಂಬುದು ಟ್ರಂಪ್ ಅವರ ಅತಿ ದೊಡ್ಡ ಹೇಳಿಕೆ. ಪ್ರಸ್ತುತ ಭಾರತದ ವಾರ್ಷಿಕ ಆಮದು 50 ಬಿಲಿಯನ್ ಡಾಲರ್‌ಗಿಂತ ಕಡಿಮೆಯಿದೆ. ಹೀಗಾಗಿ ಇದು ದೀರ್ಘಾವಧಿಯ ಗುರಿಯಾಗಿರಬಹುದು.

7. ರಷ್ಯಾ ತೈಲಕ್ಕೆ ಗುಡ್ ಬೈ?

ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ, ಅಮೆರಿಕ ಮತ್ತು ವೆನೆಜುವೆಲಾದಿಂದ ಖರೀದಿಸಲು ಒಪ್ಪಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದು ಭಾರತದ ಇಂಧನ ನೀತಿಯಲ್ಲಿನ ಮಹತ್ವದ ಬದಲಾವಣೆಯಾಗಲಿದ್ದು, ನವದೆಹಲಿಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ.

8. ಅಧಿಕೃತ ದಾಖಲೆಗಳಿಲ್ಲ

ಇಲ್ಲಿಯವರೆಗೆ ಯಾವುದೇ ಜಂಟಿ ಹೇಳಿಕೆ, ಕಾನೂನುಬದ್ಧ ಪಠ್ಯ ಅಥವಾ ಅನುಷ್ಠಾನದ ವೇಳಾಪಟ್ಟಿ ಬಿಡುಗಡೆಯಾಗಿಲ್ಲ. ವಿವಾದ ಪರಿಹಾರ ಪ್ರಕ್ರಿಯೆಗಳ ಬಗ್ಗೆಯೂ ಮಾಹಿತಿಯಿಲ್ಲ.

9. ರಾಜಕೀಯ ಹೇಳಿಕೆ ಮಾತ್ರವೇ?

ಅಧಿಕೃತ ದಾಖಲೆಗಳ ಅನುಪಸ್ಥಿತಿಯಲ್ಲಿ, ಇದೊಂದು ಏಕಪಕ್ಷೀಯ ರಾಜಕೀಯ ಹೇಳಿಕೆಯಂತೆ ಕಾಣುತ್ತಿದೆ. ಎರಡೂ ಸರ್ಕಾರಗಳು ಅಧಿಕೃತ ಪಠ್ಯವನ್ನು ಬಿಡುಗಡೆ ಮಾಡುವವರೆಗೆ ಒಪ್ಪಂದದ ವ್ಯಾಪ್ತಿ ಅಸ್ಪಷ್ಟವಾಗಿಯೇ ಉಳಿಯಲಿದೆ.

10. ಸಂಸದೀಯ ಪ್ರಕ್ರಿಯೆಯ ಸುಳಿವಿಲ್ಲ

ಸಾಮಾನ್ಯವಾಗಿ ಇಂತಹ ದೊಡ್ಡ ಒಪ್ಪಂದಗಳಿಗೆ ಅಮೆರಿಕದ ಕಾಂಗ್ರೆಸ್ ಮತ್ತು ಭಾರತದ ಸಂಸತ್ತಿನ ಅನುಮೋದನೆ ಅಗತ್ಯವಿರುತ್ತದೆ. ಆದರೆ, ಅಂತಹ ಯಾವುದೇ ಪ್ರಕ್ರಿಯೆ ಆರಂಭವಾಗಿರುವ ಲಕ್ಷಣಗಳಿಲ್ಲ. ಹೀಗಾಗಿ ಇದು ಔಪಚಾರಿಕ ಮಾತುಕತೆಗಳ ಆರಂಭವೇ ಹೊರತು ಅಂತಿಮ ಒಪ್ಪಂದವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

Next Story