ಭಾರತದ ಅತಿದೊಡ್ಡ ಸಾಂಸ್ಥಿಕ ಜಾಲ ಹೊಂದಿರುವ ಅಂಚೆ ಇಲಾಖೆ ದೇಶದ ಮೂಲೆ ಮೂಲೆಗಳಲ್ಲಿ ಸುಮಾರು 1.5 ಲಕ್ಷ ಅಂಚೆ ಕಚೇರಿಗಳ ಮೂಲಕ ಬೃಹತ್ ಗ್ರಾಹಕರ ಸಂಪರ್ಕ ಹೊಂದಿದೆ.

Click the Play button to hear this message in audio format

ದೇಶದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳವರೆಗೆ ಮ್ಯೂಚುವಲ್ ಫಂಡ್ ಹೂಡಿಕೆಯ ಸೌಲಭ್ಯ ತಲುಪಿಸುವ ಯೋಜನೆ ಎಂಬಂತೆ ಅಂಚೆ ಇಲಾಖೆ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಐತಿಹಾಸಿಕ ಒಪ್ಪಂದ ಒಂದಕ್ಕೆ ಸಹಿ ಹಾಕಿದೆ. ಅದರನ್ವಯ ಇಂಡಿಯಾ ಪೋಸ್ಟ್‌ನ ಅಂಚೆ ಜಾಲದ ಮೂಲಕ ಸಾಮಾನ್ಯ ಜನರಿಗೂ ಮ್ಯೂಚುವಲ್ ಫಂಡ್ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿದೆ. ಇದು ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಮೈಲುಗಲ್ಲು ಎನಿಸಲಿದೆ.


1.5 ಲಕ್ಷ ಅಂಚೆ ಕಚೇರಿಗಳ ಶಕ್ತಿ

ಭಾರತದ ಅತಿದೊಡ್ಡ ಸಾಂಸ್ಥಿಕ ಜಾಲ ಹೊಂದಿರುವ ಅಂಚೆ ಇಲಾಖೆ ದೇಶದ ಮೂಲೆ ಮೂಲೆಗಳಲ್ಲಿ ಸುಮಾರು 1.5 ಲಕ್ಷ ಅಂಚೆ ಕಚೇರಿಗಳ ಮೂಲಕ ಬೃಹತ್ ಗ್ರಾಹಕರ ಸಂಪರ್ಕ ಹೊಂದಿದೆ. ಇದುವರೆಗೆ ಮುಖ್ಯವಾಗಿ ಉಳಿತಾಯ ಖಾತೆಗಳು, ಅಂಚೆ ಜೀವ ವಿಮೆ ಮತ್ತು ಸಣ್ಣ ಉಳಿತಾಯ ಯೋಜನೆಗಳನ್ನು ಒದಗಿಸುತ್ತಾ ಬಂದಿದೆ. ಈಗ ಈ ಎಂಒಯು ಮೂಲಕ, ಗ್ರಾಮೀಣ ಭಾರತದ ಕೋಟ್ಯಂತರ ಜನರಿಗೆ ಮ್ಯೂಚುವಲ್ ಫಂಡ್​ನಲ್ಲಿಯೂ ಹೂಡಿಕೆ ಮಾಡಲು ಸಾಧ್ಯವಿದೆ. ವಿಶೇಷವಾಗಿ ಇಂಡಿಯಾ ಪೋಸ್ಟ್‌ನ ಶೇ. 89ರಷ್ಟು ಶಾಖೆಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು, ಬ್ಯಾಂಕಿಂಗ್ ಸೇವೆ ತಲುಪದ ದೂರದ ಹಳ್ಳಿಗಳಲ್ಲಿಯೂ ಈ ಸೌಲಭ್ಯ ಸಿಗಲಿದೆ.

ಅಂಚೆ ಉದ್ಯೋಗಿಗಳಿಗೆ ತರಬೇತಿ

ಯೋಜನೆಯ ಅಡಿಯಲ್ಲಿ, ಅಂಚೆ ಇಲಾಖೆಯ ಆಯ್ದ ಉದ್ಯೋಗಿಗಳನ್ನು ಗುರುತಿಸಿ, ಅವರಿಗೆ ಸಮಗ್ರ ತರಬೇತಿ ನೀಡಲಿದೆ. ತರಬೇತಿ ಪೂರ್ಣಗೊಂಡ ನಂತರ, ಇವರನ್ನು ಪ್ರಮಾಣೀಕೃತ ಮ್ಯೂಚುವಲ್ ಫಂಡ್ ವಿತರಕರಾಗಿ ನೇಮಿಸಲಿದೆ. ಆದರೆ ಇದಕ್ಕೆ ಕಟ್ಟುನಿಟ್ಟಾದ ನಿಯಮಗಳಿವೆ. ಪ್ರತಿಯೊಬ್ಬ ಉದ್ಯೋಗಿಯೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ (NISM) ನಿಂದ ಕಡ್ಡಾಯ ಮಾನ್ಯತೆ ಪಡೆಯಬೇಕು. ಜೊತೆಗೆ, ಎಂಪ್ಲಾಯೀ ಯೂನಿಕ್ ಐಡೆಂಟಿಫಿಕೇಷನ್ ನಂಬರ್ (EUIN) ನೋಂದಣಿ ಕೂಡ ಪೂರೈಸಬೇಕಾಗುತ್ತದೆ. ಈ ನಿಯಮಾವಳಿಗಳನ್ನು ಅನುಸರಿಸಿದ ನಂತರವೇ ಅವರು ಎನ್​ಎಸ್​ಇ ಮ್ಯೂಚುವಲ್ ಫಂಡ್ ಪ್ಲಾಟ್‌ಫಾರ್ಮ್ ಮೂಲಕ ಉತ್ಪನ್ನಗಳನ್ನು ನೀಡಲು ಅರ್ಹರಾಗುತ್ತಾರೆ.

ಹೂಡಿಕೆದಾರರಿಗೆ ಸಿಗಲಿದೆ ಸಮಗ್ರ ಸೇವೆಗಳು

ಮ್ಯೂಚುವಲ್ ಫಂಡ್ ಮಾರಾಟ ಮಾಡುವುದಷ್ಟೇ ಅಲ್ಲದೆ, ಹೂಡಿಕೆಗೆ ಸಂಬಂಧಿಸಿದ ಸಮಗ್ರ ಸೇವೆಗಳನ್ನು ಒದಗಿಸುವ ಜವಾಬ್ದಾರಿಯೂ ಈ ಅಂಚೆ ಉದ್ಯೋಗಿಗಳಿಗಿರುತ್ತದೆ. ಹೂಡಿಕೆದಾರರ ಪ್ರಶ್ನೆಗಳಿಗೆ ಉತ್ತರಿಸುವುದು, ಪೋರ್ಟ್‌ಫೋಲಿಯೊ ಆಯ್ಕೆ ಕುರಿತು ಸಲಹೆ ನೀಡುವುದು, ವಹಿವಾಟುಗಳಲ್ಲಿ ಸಹಕರಿಸುವುದು ಮುಂತಾದ ಅಂಶಗಳನ್ನು ಎನ್​ಎಸ್​ಇ ಪ್ಲಾಟ್‌ಫಾರ್ಮ್ ಬೆಂಬಲದೊಂದಿಗೆ ನಿರ್ವಹಿಸಲಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಹೂಡಿಕೆದಾರರಿಗೆ, ತಮ್ಮ ಊರಿನಲ್ಲೇ ಇರುವ ಅಂಚೆ ಕಚೇರಿಯಲ್ಲಿ ಈ ಸೇವೆಗಳು ಲಭ್ಯವಾಗುವುದರಿಂದ, ಹಣಕಾಸು ಸಾಕ್ಷರತೆ ಮತ್ತು ಹೂಡಿಕೆ ಪ್ರವೃತ್ತಿ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಿದೆ.

ಹಣಕಾಸು ವ್ಯವಸ್ಥೆಗೆ ಹೊಸ ಸೇರ್ಪಡೆ

ಮ್ಯೂಚುವಲ್ ಫಂಡ್ ಹೂಡಿಕೆಯು ನಗರಗಳು ಮತ್ತು ಮಹಾನಗರಗಳ ಮಧ್ಯಮ ಮತ್ತು ಮೇಲ್ವರ್ಗಕ್ಕೆ ಸೀಮಿತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಜಾಗೃತಿ ಮತ್ತು ಲಭ್ಯತೆಯ ಕೊರತೆಯಿಂದಾಗಿ ದೊಡ್ಡ ಪ್ರಮಾಣದ ಜನಸಂಖ್ಯೆ ಈ ಹೂಡಿಕೆ ಅವಕಾಶಗಳಿಂದ ವಂಚಿತವಾಗಿದ್ದಾರೆ. ಇದೀಗ ಅಂಚೆ ಇಲಾಖೆ ಮತ್ತು ಎನ್​​ಎಸ್​ಇ ನಡುವಿನ ಈ ಒಪ್ಪಂದವು ಹಣಕಾಸು ಸೇರ್ಪಡೆಯ ದಿಕ್ಕಿನಲ್ಲಿ ಹೊಸ ಮಾರ್ಗ ಎನಿಸಲಿದೆ. ಸಣ್ಣ ಉಳಿತಾಯದಾರರಿಗೂ ಷೇರು ಮಾರುಕಟ್ಟೆಯ ಲಾಭ ಪಡೆಯುವ ದಾರಿ ತೆರೆಯಲಿದೆ. ಇದು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೂ ಪರೋಕ್ಷವಾಗಿ ನೆರವಾಗಲಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿಯಮಾನುಸಾರ ಜವಾಬ್ದಾರಿ

ಈ ಎಂಒಯುವಿನಲ್ಲಿ ನಿಯಮಾನುಸಾರ ಅನುಸರಣೆ (Regulatory Compliance) ಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ. ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ- ಸೆಬಿ ನಿಗದಿಪಡಿಸಿರುವ ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು. ಹೂಡಿಕೆದಾರರ ಹಿತಾಸಕ್ತಿ ರಕ್ಷಣೆ, ಪಾರದರ್ಶಕತೆ ಮತ್ತು ನೈತಿಕ ಮಾರಾಟ ತಂತ್ರಗಳನ್ನು ಖಚಿತಪಡಿಸಿಕೊಳ್ಳಲು ಅಂಚೆ ಉದ್ಯೋಗಿಗಳಿಗೆ ನಿರಂತರ ತರಬೇತಿ ಮತ್ತು ಮಾರ್ಗದರ್ಶನ ಒದಗಿಸಲಾಗುವುದು ಎಂದು ಎಂಒಯುವಿನಲ್ಲಿ ಸ್ಪಷ್ಟಪಡಿಸಲಾಗಿದೆ.

Next Story