
ಸಾಂದರ್ಭಿಕ ಚಿತ್ರ
LPG Price Hike |ಅಂತಾರಾಷ್ಟ್ರೀಯ ನೆಪ, ಸಬ್ಸಿಡಿ ಮಾಯ, ಒಂದು ಸಿಲಿಂಡರ್ಗೆ 944 ರೂ!
ಕಳೆದ ಒಂದು ವರ್ಷದ ಅವಧಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಬೆಲೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಕೇವಲ ಕಳೆದ ನಾಲ್ಕು ತಿಂಗಳಲ್ಲೇ ಬರೋಬ್ಬರಿ 89 ರೂ. ಬೆಲೆ ಹೆಚ್ಚಳವಾಗಿದೆ.
ದೇಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಎಲ್‌ಪಿಜಿ ಗ್ಯಾಸ್ ಬೆಲೆ ಜನಸಾಮಾನ್ಯರ ಮಾಸಿಕ ಬಜೆಟ್ ಅನ್ನೇ ಏರುಪೇರು ಮಾಡಿದೆ. ಜಾಗತಿಕ ವಿದ್ಯಮಾನಗಳು, ಶೇಕಡಾ 90ಕ್ಕೂ ಅಧಿಕ ಆಮದು ಅವಲಂಬನೆ ಹಾಗೂ ದೇಶೀಯ ರಾಜಕೀಯದ ಚರ್ಚಾ ವಿಷಯವಾಗಿರುವ ಗ್ಯಾಸ್ ಬೆಲೆ ಏರಿಕೆಯು ಇದೀಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದ ಮೂರೇ ತಿಂಗಳಲ್ಲಿ ಎರಡನೇ ಬಾರಿಗೆ ದರ ಏರಿಕೆಯಾಗಿದ್ದು, ಇಡೀ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
'ಬೆಲೆ ಏರಿಕೆಯ' ರಾಕೆಟ್ ವೇಗ!
ಕಳೆದ ಒಂದು ವರ್ಷದ ಅವಧಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಬೆಲೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಕೇವಲ ಕಳೆದ ನಾಲ್ಕು ತಿಂಗಳಲ್ಲೇ ಬರೋಬ್ಬರಿ 89 ರೂ. ಬೆಲೆ ಹೆಚ್ಚಳವಾಗಿದೆ. ಏಪ್ರಿಲ್‌ನಲ್ಲಿ 50 ರೂ. ಹೆಚ್ಚಳವಾಗಿತ್ತು. ಮಾರ್ಚ್‌ನಲ್ಲಿ ಒಂದೇ ಬಾರಿಗೆ 60 ರೂ. ಏರಿಕೆಯಾಗಿದ್ದು, ಜೂನ್‌ನಲ್ಲಿ ಮತ್ತೊಮ್ಮೆ 29 ರೂ. ಏರಿಕೆಯಾಗಿದೆ. ಇದರ ನೇರ ಪರಿಣಾಮವಾಗಿ ದೆಹಲಿಯಲ್ಲಿ 14.2 ಕೆ.ಜಿ. ಗೃಹಬಳಕೆ ಸಿಲಿಂಡರ್ ಬೆಲೆ 913 ರಿಂದ 942 ರೂ. ಗೆ ತಲುಪಿದೆ. ಬೆಂಗಳೂರಿನಲ್ಲಿ ಇದು 944 ರೂ. ಗಡಿ ತಲುಪಿದೆ.
ಗ್ಯಾಸ್ ದರ ಗಗನಕ್ಕೇರಲು ಪ್ರಮುಖ ಕಾರಣಗಳೇನು?
ಬೆಲೆ ಏರಿಕೆಯ ಹಿಂದೆ ಕೇವಲ ಸ್ಥಳೀಯ ಕಾರಣಗಳಿಲ್ಲ, ಬದಲಾಗಿ ಜಾಗತಿಕ ಮಟ್ಟದ ಹಲವು ವಿದ್ಯಮಾನಗಳು ಪ್ರಭಾವ ಬೀರಿವೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ವಾತಾವರಣ ಮತ್ತು ಹಾರ್ಮೂಜ್ ಜಲಸಂಧಿಯಲ್ಲಿನ ಆತಂಕ ಜಾಗತಿಕ ಇಂಧನ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿದೆ. ಹಾರ್ಮೂಜ್ ಜಲಸಂಧಿ ಮಾರ್ಗದಲ್ಲಿ ಟ್ಯಾಂಕರ್ ಸಂಚಾರ ವಿಳಂಬವಾಗುತ್ತಿರುವುದರಿಂದ ಸರಕು ಸಾಗಣೆ ಮತ್ತು ವಿಮಾ ವೆಚ್ಚ ಏರಿಕೆಯಾಗಿದೆ. ಇದರಿಂದಾಗಿ ಕತಾರ್ ಹಾಗೂ ಸೌದಿ ಅರೇಬಿಯಾದಿಂದ ಬರುತ್ತಿದ್ದ ಎಲ್‌ಪಿಜಿ ಪೂರೈಕೆಯಲ್ಲಿ ವಾರಕ್ಕೆ ಸುಮಾರು ಶೇ. 30 ರಷ್ಟು ಕುಸಿತ ಉಂಟಾಗಿದೆ.
ತೈಲ ಕಂಪನಿಗಳ ನಷ್ಟ
ಸಾರ್ವಜನಿಕ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (OMCs) 2024-25ರಲ್ಲಿ ಸಬ್ಸಿಡಿ ದರದಲ್ಲಿ ಗ್ಯಾಸ್ ಮಾರಾಟ ಮಾಡಿ ಸುಮಾರು 28,000 ಕೋಟಿ ರೂ. ನಷ್ಟ ಅನುಭವಿಸಿದ್ದವು. ಇದನ್ನು ಸರಿದೂಗಿಸಲು ಕೇಂದ್ರ ಸರ್ಕಾರ 22,000 ಕೋಟಿ ರೂ. ಒನ್-ಟೈಮ್ ಪರಿಹಾರವನ್ನು ಘೋಷಿಸಿತ್ತಾದರೂ ಕಂಪನಿಗಳ ಮೇಲಿನ ಒತ್ತಡ ಕಡಿಮೆಯಾಗಿಲ್ಲ
ಬೆಲೆ ನಿಯಂತ್ರಣದ ಸುತ್ತ 'ರಾಜಕೀಯ ಜಿದ್ದಾಜಿದ್ದಿ'
ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ಎಲ್‌ಪಿಜಿ ಬೆಲೆ ಈಗಲೂ ಅತ್ಯಂತ ಕಡಿಮೆಯಿದೆ.• 2024 ರಿಂದ 2026ರ ನಡುವಿನ ಕೇವಲ ಎರಡು ವರ್ಷಗಳಲ್ಲಿ ದೆಹಲಿಯಲ್ಲಿ 803 ರೂ. ಇದ್ದ ಗ್ಯಾಸ್ ಬೆಲೆ 942 ರೂ. ಗೆ ತಲುಪಿದ್ದು, ಗ್ರಾಹಕರಿಗೆ ಭಾರಿ ಹೊರೆಯಾಗಿದೆ. 'ಉಜ್ವಲ ಯೋಜನೆ'ಯ ಫಲಾನುಭವಿಗಳಿಗೆ ಅಂತರರಾಷ್ಟ್ರೀಯ ಬೆಲೆಗಿಂತ ಸುಮಾರು ಶೇ. 60 ರಷ್ಟು ಕಡಿಮೆ ದರದಲ್ಲಿ ಗ್ಯಾಸ್ ಒದಗಿಸಲಾಗುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಕೇವಲ ಎರಡು ವರ್ಷಗಳಲ್ಲಿ ಶೇ. 13.7 ರಷ್ಟು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಭಾರತದ ಎಲ್‌ಪಿಜಿ ಬೇಡಿಕೆ ಎಷ್ಟು ?
ಭಾರತವು 2024-25ರ ಆರ್ಥಿಕ ವರ್ಷದಲ್ಲಿ ಒಟ್ಟು 31.3 ದಶಲಕ್ಷ ಟನ್ ಎಲ್‌ಪಿಜಿ ಬಳಸಿದೆ. ಆದರೆ ಇದರಲ್ಲಿ ದೇಶೀಯವಾಗಿ ಉತ್ಪಾದನೆಯಾಗಿದ್ದು ಕೇವಲ 12.8 ದಶಲಕ್ಷ ಟನ್ ಮಾತ್ರ ಉಳಿದದ್ದನ್ನು ಆಮದು ಮಾಡಿಕೊಳ್ಳಲಾಗಿದೆ .ವಾರ್ಷಿಕ ಸರಿಸುಮಾರು 31.3 ದಶಲಕ್ಷ ಟನ್ ಮಾಸಿಕ ಸರಿಸುಮಾರು 2.6 ದಶಲಕ್ಷ ಟನ್ ಬೇಡಿಕೆ ಇದೆ.
ಭಾರತವು ಬಹುಪಾಲು ಅರಬ್ ರಾಷ್ಟ್ರಗಳ ಮೇಲೆಯೇ ಅವಲಂಬಿತವಾಗಿದೆ. 2024-25ರಲ್ಲಿ ಭಾರತದ ಶೇ. 92.2 ರಷ್ಟು ಎಲ್‌ಪಿಜಿ ಯುಎಇ, ಕತಾರ್, ಸೌದಿ ಅರೇಬಿಯಾ ಮತ್ತು ಕುವೈತ್‌ನಿಂದ ಆಮದಾಗಿದೆ. ಯುಎಇ ಪಾಲು 2019-20ರಲ್ಲಿ ಶೇ. 22 ಇತ್ತು, 2024-25ರಲ್ಲಿ ಶೇ. 40.5 ಕ್ಕೆ ಭಾರಿ ಏರಿಕೆಯಾಗಿದೆ. ಕತಾರ್‌ನ ಪಾಲು ಶೇ. 30.9 ದಿಂದ ಶೇ. 22 ಕ್ಕೆ ಇಳಿಕೆಯಾಗಿದ್ದರೆ, ಸೌದಿ ಅರೇಬಿಯಾ ಶೇ. 26.4 ದಿಂದ 15 ಕ್ಕೆ ಇಳಿಕೆಯಾಗಿದೆ.
ಅಮೆರಿಕದೊಂದಿಗೆ ಹೊಸ ಒಪ್ಪಂದ
ಪರ್ಯಾಯ ಮೂಲಗಳನ್ನು ಹುಡುಕುತ್ತಿರುವ ಭಾರತ 2026ರಲ್ಲಿ ಅಮೆರಿಕದೊಂದಿಗೆ 2.2 ದಶಲಕ್ಷ ಟನ್ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಇದು ನಮ್ಮ ವಾರ್ಷಿಕ ಆಮದಿನ ಶೇ. 10 ರಷ್ಟಾಗಿದೆ. ಭಾರತೀಯ ಕಂಪನಿಗಳಾದ IOC, BPCL, HPCL ಸಂಸ್ಥೆಗಳು ಅಮೆರಿಕದ Chevron, Phillips ಮತ್ತು TotalEnergies ಜೊತೆ ಒಪ್ಪಂದ ಮಾಡಿಕೊಂಡಿವೆ.
400 ಬೃಹತ್ ಹಡಗುಗಳ ಸಾರಥ್ಯ!
ಭಾರತದ ವಾರ್ಷಿಕ ಎಲ್‌ಪಿಜಿ ಆಮದು ಸುಮಾರು 20 ದಶಲಕ್ಷ ಟನ್. 'ವೆರಿ ಲಾರ್ಜ್ ಗ್ಯಾಸ್ ಕ್ಯಾರಿಯರ್' (VLGC) ಎಂಬ ಒಂದು ಬೃಹತ್ ಹಡಗಿನಲ್ಲಿ ಕೇವಲ 50,000 ಟನ್ ಗ್ಯಾಸ್ ಹಿಡಿಸುತ್ತದೆ. ಅಂದರೆ, ಭಾರತದ ಆಮದು ಬೇಡಿಕೆಯನ್ನು ಪೂರೈಸಲು ವರ್ಷಕ್ಕೆ ಬರೋಬ್ಬರಿ 400 ಹಡಗುಗಳ ಅಗತ್ಯವಿದೆ. 2024ರಲ್ಲಿ ಒಟ್ಟು 20.4 ದಶಲಕ್ಷ ಟನ್ ಆಮದಾಗಿದ್ದು, ಇದರಲ್ಲಿ ಶೇ, 90 ರಷ್ಟು ಕೇವಲ ನಾಲ್ಕು ದೇಶಗಳಿಂದ ಬಂದಿದೆ.

