
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಿಸಿ: ದೇಶದಲ್ಲಿ ಅಡುಗೆ ಅನಿಲ (LPG) ಬಳಕೆ ಶೇ. 13ರಷ್ಟು ಕುಸಿತ
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ, ಪರಿಸ್ಥಿತಿ ಸಹಜವಾಗಿದೆ ಎಂದು ಸರ್ಕಾರ ಮತ್ತು ಸಚಿವರುಗಳು ಭರವಸೆ ನೀಡುತ್ತಿದ್ದರೂ ಅಂಕಿ ಅಂಶಗಳು ಕೊರತೆಯನ್ನು ಎದ್ದು ತೋರಿಸುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ (ಇರಾನ್-ಇಸ್ರೇಲ್) ನಡೆಯುತ್ತಿರುವ ನಿರಂತರ ಸಂಘರ್ಷದ ಪರಿಣಾಮ ಇದೀಗ ಭಾರತದ ಅಡುಗೆ ಮನೆಗಳ ಮೇಲೂ ಬೀರಲಾರಂಭಿಸಿದೆ. ಕಚ್ಚಾ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದಾಗಿ, ಮಾರ್ಚ್ ತಿಂಗಳಲ್ಲಿ ದೇಶದ ಅಡುಗೆ ಅನಿಲ (ಎಲ್‌ಪಿಜಿ - LPG) ಬಳಕೆಯಲ್ಲಿ ಶೇಕಡಾ 13ರಷ್ಟು ಭಾರಿ ಕುಸಿತ ಕಂಡಿರುವುದು ಇತ್ತೀಚಿನ ಅಧಿಕೃತ ಅಂಕಿಅಂಶಗಳಿಂದ ಬಹಿರಂಗವಾಗಿದೆ.
ಇಂಧನ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕದ (PPAC) ದತ್ತಾಂಶದ ಪ್ರಕಾರ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ 2.729 ಮಿಲಿಯನ್ ಟನ್ ಎಲ್‌ಪಿಜಿ ಬಳಕೆಯಾಗಿತ್ತು. ಆದರೆ, ಈ ವರ್ಷದ (2026) ಮಾರ್ಚ್‌ನಲ್ಲಿ ಈ ಪ್ರಮಾಣ 2.379 ಮಿಲಿಯನ್ ಟನ್‌ಗಳಿಗೆ ಕುಸಿದಿದೆ (ಶೇ. 12.8 ರಷ್ಟು ಇಳಿಕೆ). ಇದರಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳ ಮಾರಾಟವು ಶೇ. 8.1 ರಷ್ಟು ಕುಸಿದು 2.219 ಮಿಲಿಯನ್ ಟನ್‌ಗಳಿಗೆ ತಲುಪಿದೆ.
ಹೊಟೇಲ್ ಮತ್ತು ಕೈಗಾರಿಕೆಗಳಲ್ಲಿ ಬಳಸುವ ವಾಣಿಜ್ಯ ಸಿಲಿಂಡರ್ ಮಾರಾಟವು ಬರೋಬ್ಬರಿ ಶೇ. 48 ರಷ್ಟು ಪಾತಾಳಕ್ಕೆ ಕುಸಿದಿದ್ದರೆ, ಸಗಟು ಎಲ್‌ಪಿಜಿ ಮಾರಾಟವು ಶೇ. 75.5 ರಷ್ಟು ಭಾರಿ ಕುಸಿತ ಕಂಡಿದೆ.
ಪೂರೈಕೆ ಸಮಸ್ಯೆಗೆ ಕಾರಣಗಳೇನು?
ಭಾರತವು ತನ್ನ ಒಟ್ಟು ಬೇಡಿಕೆಯ ಶೇಕಡಾ 60ರಷ್ಟು ಎಲ್‌ಪಿಜಿಯನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಬಹುಪಾಲು ಅನಿಲವು 'ಹೊರ್ಮುಜ್ ಜಲಸಂಧಿ'ಯ ಮೂಲಕವೇ ಭಾರತಕ್ಕೆ ಬರಬೇಕು. ಆದರೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡಗಳಿಂದಾಗಿ ಈ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.
ಸೌದಿ ಅರೇಬಿಯಾ ಮತ್ತು ಯುಎಇ (UAE) ಯಿಂದ ಬರುತ್ತಿದ್ದ ಪೂರೈಕೆಯು ಬಹುತೇಕ ಸ್ಥಗಿತಗೊಂಡಿರುವುದರಿಂದ ದೇಶದಲ್ಲಿ ಎಲ್‌ಪಿಜಿ ಅಭಾವ ಸೃಷ್ಟಿಯಾಗಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಮನೆಗಳ ಬಳಕೆಯ ಸಿಲಿಂಡರ್‌ಗಳಿಗೆ ಮೊದಲ ಆದ್ಯತೆ ನೀಡಿದ್ದು, ಹೋಟೆಲ್‌ಗಳು ಮತ್ತು ಕೈಗಾರಿಕೆಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪೂರೈಸುವ ಎಲ್‌ಪಿಜಿಯನ್ನು ಕಡಿತಗೊಳಿಸಿದೆ.
ಸರ್ಕಾರದ ವಾದ vs ವಾಸ್ತವ ಡೇಟಾ
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ, ಪರಿಸ್ಥಿತಿ ಸಹಜವಾಗಿದೆ ಎಂದು ಸರ್ಕಾರ ಮತ್ತು ಸಚಿವರುಗಳು ಭರವಸೆ ನೀಡುತ್ತಿದ್ದಾರೆ. ಆದರೆ, ಪಿಪಿಎಸಿ (PPAC) ಬಿಡುಗಡೆ ಮಾಡಿರುವ ಈ ದತ್ತಾಂಶಗಳು ಸರ್ಕಾರದ ಪ್ರತಿಪಾದನೆಗೆ ತದ್ವಿರುದ್ಧವಾಗಿವೆ.
ವಾಣಿಜ್ಯ ಅನಿಲ ಪೂರೈಕೆ ಕಡಿತಗೊಂಡಿರುವುದರಿಂದ ಹೊಟೇಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಆಟೊ ಎಲ್‌ಪಿಜಿ ದರ ಹೆಚ್ಚಳದಿಂದಾಗಿ ಆಟೊ ಚಾಲಕರು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಶೀಘ್ರವೇ ಶಮನಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇಂಧನ ಮತ್ತು ಅನಿಲದ ಬೆಲೆ ಇನ್ನಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ.

