
ಚಿನ್ನ ಹಾಗೂ ಬೆಳ್ಳಿ (ಸಾಂದರ್ಭಿಕ ಚಿತ್ರ)
ಬೆಳ್ಳಿ ಮುಕ್ತ ಆಮದಿಗೆ ಕಡಿವಾಣ: ವ್ಯಾಪಾರ ಕೊರತೆ ಮತ್ತು ಚಿನ್ನದ ಆಮದು ನಿಯಂತ್ರಿಸಲು ಕ್ರಮ
ಪರಿಷ್ಕೃತ ನಿಯಮಗಳ ಪ್ರಕಾರ, ಇನ್ನು ಮುಂದೆ ಬೆಳ್ಳಿ ಗಟ್ಟಿಗಳು, ಕಚ್ಚಾ ಬೆಳ್ಳಿ ಮತ್ತು ಪುಡಿ ರೂಪದಲ್ಲಿರುವ ಬೆಳ್ಳಿ ಸೇರಿದಂತೆ ಅರೆ-ಸಿದ್ಧಪಡಿಸಿದ ಬೆಳ್ಳಿಯ ಆಮದಿಗೆ ಸರ್ಕಾರದ ಕಡ್ಡಾಯ ಅನುಮೋದನೆ ಅಗತ್ಯವಿದೆ.
ದೇಶದಲ್ಲಿ ಬೆಲೆಬಾಳುವ ಲೋಹಗಳ ಆಮದು ಪ್ರಮಾಣ ವಿಪರೀತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬೆಳ್ಳಿ ಆಮದಿಗೆ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಈ ಮೂಲಕ ವ್ಯಾಪಾರ ಕೊರತೆ ಹಾಗೂ ಆಮದು ವೆಚ್ಚವನ್ನು ನಿಯಂತ್ರಿಸಲು ಮುಂದಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಸರ್ಕಾರವು ಹಲವಾರು ವಿಭಾಗಗಳ ಬೆಳ್ಳಿ ಆಮದನ್ನು 'ಮುಕ್ತ' ಪಟ್ಟಿಯಿಂದ 'ನಿರ್ಬಂಧಿತ' ಪಟ್ಟಿಗೆ ಬದಲಾಯಿಸಿದೆ.
ಪರಿಷ್ಕೃತ ನಿಯಮಗಳ ಪ್ರಕಾರ, ಇನ್ನು ಮುಂದೆ ಬೆಳ್ಳಿ ಗಟ್ಟಿಗಳು, ಕಚ್ಚಾ ಬೆಳ್ಳಿ ಮತ್ತು ಪುಡಿ ರೂಪದಲ್ಲಿರುವ ಬೆಳ್ಳಿ ಸೇರಿದಂತೆ ಅರೆ-ಸಿದ್ಧಪಡಿಸಿದ ಬೆಳ್ಳಿಯ ಆಮದಿಗೆ ಸರ್ಕಾರದ ಕಡ್ಡಾಯ ಅನುಮೋದನೆ ಅಗತ್ಯವಿದೆ. ಇದಲ್ಲದೆ, ಬೆಳ್ಳಿಯ ಕೆಲವು ವರ್ಗದ ಆಮದುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಂತ್ರಣಗಳ ವ್ಯಾಪ್ತಿಗೆ ತರಲಾಗಿದೆ. ಐಟಿಸಿ (ಎಚ್‌ಎಸ್) ವರ್ಗೀಕರಣದ ಅಡಿಯಲ್ಲಿ ಆಮದು ನೀತಿ ವೇಳಾಪಟ್ಟಿಯಲ್ಲಿ ತಿದ್ದುಪಡಿಗಳನ್ನು ತರುವ ಮೂಲಕ ಸರ್ಕಾರವು ಈ ಬದಲಾವಣೆಗಳನ್ನು ಜಾರಿಗೊಳಿಸಿದೆ. ವ್ಯಾಪಾರ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಚಿನ್ನದ ಆಮದಿನ ಮೇಲೂ ಹದ್ದಿನ ಕಣ್ಣು
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇಕಡಾ 6 ರಿಂದ 15ಕ್ಕೆ ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ವಿದೇಶಿ ವ್ಯಾಪಾರ ನಿರ್ದೇಶನಾಲಯವು (ಡಿಜಿಎಫ್‌ಟಿ) ಅಡ್ವಾನ್ಸ್ ಆಥರೈಸೇಶನ್ ಯೋಜನೆಯಡಿ ರತ್ನ ಮತ್ತು ಆಭರಣ ರಫ್ತುದಾರರು ನಡೆಸುವ ಸುಂಕ-ಮುಕ್ತ ಚಿನ್ನದ ಆಮದಿನ ನಿಯಮಗಳನ್ನೂ ಬಿಗಿಗೊಳಿಸಿದೆ. ಹೊಸ ಮಾರ್ಗಸೂಚಿಗಳ ಅನ್ವಯ, ಈ ಯೋಜನೆಯಡಿ ಚಿನ್ನದ ಆಮದನ್ನು ಪ್ರತಿ ಪರವಾನಗಿಗೆ 100 ಕೆ.ಜಿಗೆ ಸೀಮಿತಗೊಳಿಸಲಾಗಿದೆ. ಅಲ್ಲದೆ, ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರ ಉತ್ಪಾದನಾ ಘಟಕಗಳನ್ನು ಕಡ್ಡಾಯವಾಗಿ ಭೌತಿಕ ತಪಾಸಣೆ ನಡೆಸಿದ ಬಳಿಕವಷ್ಟೇ ಅನುಮೋದನೆ ನೀಡಲಾಗುತ್ತದೆ. ಮರು-ಅರ್ಜಿದಾರರಿಗೆ ಹಳೆಯ ಪರವಾನಗಿಗಳ ಅಡಿಯಲ್ಲಿ ಶೇಕಡಾ 50ರಷ್ಟು ರಫ್ತು ಜವಾಬ್ದಾರಿಗಳನ್ನು ಪೂರೈಸಿದ ನಂತರವಷ್ಟೇ ಹೊಸ ಪರವಾನಗಿಗಳನ್ನು ನೀಡಲಾಗುವುದು. ಜೊತೆಗೆ, ಆಮದುದಾರರು ಪ್ರತಿ ಹದಿನೈದು ದಿನಗಳಿಗೊಮ್ಮೆ ಚಾರ್ಟರ್ಡ್ ಅಕೌಂಟೆಂಟ್‌ಗಳಿಂದ ದೃಢೀಕರಿಸಲ್ಪಟ್ಟ ಆಮದು ಮತ್ತು ರಫ್ತು ವಹಿವಾಟುಗಳ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ನಿಯಂತ್ರಣಕ್ಕೆ ಕಾರಣ ಮತ್ತು ಆಮದು ಪ್ರಮಾಣದ ಏರಿಕೆ
2025-26ನೇ ಸಾಲಿನಲ್ಲಿ ಚಿನ್ನದ ಆಮದು ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿರುವುದೇ ಸರ್ಕಾರದ ಈ ಕಠಿಣ ನಿರ್ಧಾರಗಳಿಗೆ ಪ್ರಮುಖ ಕಾರಣವಾಗಿದೆ. ಆಮದು ಪ್ರಮಾಣ ಕಡಿಮೆಯಾಗಿದ್ದರೂ, ಚಿನ್ನದ ಆಮದು ಮೌಲ್ಯವು ಶೇಕಡಾ 24ರಷ್ಟು ಜಿಗಿತ ಕಂಡು ಸಾರ್ವಕಾಲಿಕ ದಾಖಲೆಯ 71.98 ಬಿಲಿಯನ್ ಡಾಲರ್‌ಗೆ ತಲುಪಿದೆ. ಪ್ರಸ್ತುತ ಸ್ವಿಟ್ಜರ್ಲೆಂಡ್ ಭಾರತಕ್ಕೆ ಅತಿ ಹೆಚ್ಚು ಚಿನ್ನ ಪೂರೈಸುವ ರಾಷ್ಟ್ರವಾಗಿದ್ದು, ಯುಎಇ ಮತ್ತು ದಕ್ಷಿಣ ಆಫ್ರಿಕಾ ನಂತರದ ಸ್ಥಾನಗಳಲ್ಲಿವೆ. ಬೆಲೆಬಾಳುವ ಲೋಹಗಳ ಒಳಹರಿವಿನ ಮೇಲೆ ನಿಗಾ ಇಡುವುದು ಮತ್ತು ದೇಶದ ಆರ್ಥಿಕತೆಯ ಮೇಲಾಗುವ ಹೊರೆಯನ್ನು ತಗ್ಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಕಳ್ಳಸಾಗಣೆ ಹೆಚ್ಚಳದ ಆತಂಕ
ಸರ್ಕಾರದ ಈ ಕಠಿಣ ನಿಯಮಗಳು ಮತ್ತು ಆಮದು ಸುಂಕದ ಹೆಚ್ಚಳದಿಂದಾಗಿ ಆಭರಣ ಉದ್ಯಮದಲ್ಲಿ ಆತಂಕ ಶುರುವಾಗಿದೆ. ಅಖಿಲ ಭಾರತ ರತ್ನ ಮತ್ತು ಆಭರಣ ಮಂಡಳಿ ಸೇರಿದಂತೆ ಹಲವು ಉದ್ಯಮ ಸಂಸ್ಥೆಗಳು ಸರ್ಕಾರದ ಈ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಸುಂಕದ ಹೆಚ್ಚಳ ಮತ್ತು ಕಟ್ಟುನಿಟ್ಟಿನ ನಿರ್ಬಂಧಗಳು ದೇಶದಲ್ಲಿ ಅನಧಿಕೃತ ಮಾರುಕಟ್ಟೆ ವಹಿವಾಟುಗಳನ್ನು ಉತ್ತೇಜಿಸುವ ಜೊತೆಗೆ ಚಿನ್ನ ಮತ್ತು ಬೆಳ್ಳಿಯ ಕಳ್ಳಸಾಗಣೆ ಹೆಚ್ಚಾಗಲು ಕಾರಣವಾಗಬಹುದು ಎಂದು ಎಚ್ಚರಿಸಿವೆ.

