ವಾಟ್ಸ್‌ಆ್ಯಪ್ ಯೂಸರ್ ನೇಮ್ ಫೀಚರ್‌ಗೆ ಕೇಂದ್ರ ಸರ್ಕಾರದಿಂದ ತಡೆ
x

ವಂಚನೆ ತಡೆಗೆ ಮೆಟಾ ಸಂಸ್ಥೆಗೆ ಸರ್ಕಾರದಿಂದ ನೋಟಿಸ್

ವಾಟ್ಸ್‌ಆ್ಯಪ್ ಯೂಸರ್ ನೇಮ್ ಫೀಚರ್‌ಗೆ ಕೇಂದ್ರ ಸರ್ಕಾರದಿಂದ ತಡೆ

ವಾಟ್ಸ್‌ಆ್ಯಪ್ ಹೊಸ ಯೂಸರ್ ನೇಮ್ ಫೀಚರ್‌ ಆನ್‌ಲೈನ್ ವಂಚನೆ ಹೆಚ್ಚಿಸಬಹುದು ಎಂದು ಕೇಂದ್ರ ಸರ್ಕಾರ ಮೆಟಾಗೆ ನೋಟಿಸ್ ನೀಡಿದ್ದು, ಸಮಾಲೋಚನೆ ಮುಗಿಯುವವರೆಗೆ ಜಾರಿಗೆ ತಡೆ ಒಡ್ಡಿದೆ.


Click the Play button to hear this message in audio format

ಕೇಂದ್ರ ಸರ್ಕಾರವು ದೇಶದಲ್ಲಿ ವಾಟ್ಸ್ಆ್ಯಪ್‌ನಲ್ಲಿ 'ಯೂಸರ್ ನೇಮ್' ಫೀಚರ್‌ ಅನ್ನು ಪರಿಚಯಿಸುವ ಮೆಟಾ ಸಂಸ್ಥೆಯ ಯೋಜನೆಗೆ ತಕ್ಷಣವೇ ತಡೆ ನೀಡಿದೆ. ಈ ಹೊಸ ಫೀಚರ್‌ನಿಂದ ಆನ್‌ಲೈನ್ ವಂಚನೆ, ಸೈಬರ್ ಕ್ರೈಂ ಮತ್ತು ವ್ಯಕ್ತಿರೂಪದ ನಕಲಿ ಖಾತೆಗಳ ಸೃಷ್ಟಿ ಹೆಚ್ಚಾಗಬಹುದು ಎಂಬ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು, ಈ ಕುರಿತು ಸಮಗ್ರ ವಿವರಣೆ ನೀಡುವಂತೆ ವಾಟ್ಸಾಪ್‌ನ ಮಾತೃ ಸಂಸ್ಥೆಯಾದ ಮೆಟಾಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ.

ಸರ್ಕಾರದೊಂದಿಗೆ ನಡೆಸುವ ಸಮಾಲೋಚನೆಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ಈ ವೈಶಿಷ್ಟ್ಯವನ್ನು ಭಾರತದಲ್ಲಿ ಜಾರಿಗೆ ತರಬಾರದು ಎಂದು ಸರ್ಕಾರವು ಕಡಾಖಂಡಿತವಾಗಿ ತಿಳಿಸಿದೆ. ಈ ಹೊಸ ಫೀಚರ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಮುಂದಿನ ಮೂರು ದಿನಗಳ ಒಳಗಾಗಿ ಒದಗಿಸುವಂತೆ ಮೆಟಾ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ.

ಫೋನ್ ನಂಬರ್ ಹಂಚಿಕೊಳ್ಳದೆ ಕೇವಲ ಯೂಸರ್ ನೇಮ್ ಬಳಸಿ ಚಾಟ್ ಮಾಡುವ ಈ ಸೌಲಭ್ಯವು ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ಹಣಕಾಸು ಸಂಸ್ಥೆಗಳು ಮತ್ತು ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಲು ಸೈಬರ್ ಅಪರಾಧಿಗಳಿಗೆ ದಾರಿ ಮಾಡಿಕೊಡಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಈ ಮೂಲಕ ಡಿಜಿಟಲ್ ಅರೆಸ್ಟ್, ಫಿಶ್ಶಿಂಗ್‌ ಮತ್ತು ಇತರೆ ಆನ್‌ಲೈನ್ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಬಹುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ ನಿಯಮಗಳು 2021ರ ಅಡಿಯಲ್ಲಿ ವಾಟ್ಸ್ಆ್ಯಪ್‌ ತನ್ನ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ನೆನಪಿಸಲಾಗಿದ್ದು, ನಿಯಮ ಉಲ್ಲಂಘನೆಗಾಗಿ ಕಂಪನಿಯ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಲಾಗಿದೆ.

ಮತ್ತೊಂದೆಡೆ, ಈ ಆರೋಪಗಳ ವಿರುದ್ಧ ಪ್ರತಿಕ್ರಿಯಿಸಿರುವ ವಾಟ್ಸ್ಆ್ಯಪ್‌ ವಕ್ತಾರರು, ಬಳಕೆದಾರರ ಸುರಕ್ಷತೆಗಾಗಿ ನಾವು ಈಗಾಗಲೇ ಹಲವು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರಮುಖ ವ್ಯಕ್ತಿಗಳು, ಸೆಲೆಬ್ರಿಟಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಅಧಿಕೃತ ಯೂಸರ್ ನೇಮ್‌ಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಮುಂಚಿತವಾಗಿಯೇ ಕಾಯ್ದಿರಿಸಲಾಗಿದೆ ಹಾಗೂ ನಕಲಿ ಖಾತೆಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ, ಅಪರಿಚಿತರು ಮೊದಲ ಬಾರಿಗೆ ಸಂದೇಶ ಕಳುಹಿಸಿದಾಗ ಅವರು ಯಾವ ದೇಶದವರು ಮತ್ತು ಹೊಸ ಖಾತೆಯೇ ಎಂಬುದನ್ನು ಬಳಕೆದಾರರಿಗೆ ಮುನ್ಸೂಚನೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಆದರೂ, ಸರ್ಕಾರದ ಸಂಪೂರ್ಣ ತೃಪ್ತಿಯಾಗುವವರೆಗೆ ಭಾರತದಲ್ಲಿ ಈ ಫೀಚರ್‌ ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿದೆ.

Read More
Next Story