
ಸಾಂದರ್ಭಿಕ ಚಿತ್ರ
ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!
ಮಂಗಳವಾರವಷ್ಟೇ (ಜೂ.30) 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಮೇಲೆ 1,800 ರೂ. ಹಾಗೂ 22 ಕ್ಯಾರಟ್ ಬಂಗಾರದ ಮೇಲೆ 1,650 ರೂ. ಇಳಿಕೆಯಾಗಿತ್ತು. ಇದೀಗ ಬುಧವಾರವೂ ಸಹ ಈ ಇಳಿಕೆಯ ಟ್ರೆಂಡ್ ಮುಂದುವರಿದಿದೆ.
ಆಭರಣ ಪ್ರಿಯರಿಗೆ ಹಾಗೂ ಸದ್ಯದಲ್ಲೇ ಬಂಗಾರ ಖರೀದಿಸಬೇಕೆಂದುಕೊಂಡಿರುವವರಿಗೆ ಒಂದು ಅತ್ಯಂತ ಸಿಹಿ ಸುದ್ದಿ ಸಿಕ್ಕಿದೆ. ಆಷಾಢ ಮಾಸ ಆರಂಭವಾಗುತ್ತಿದ್ದಂತೆಯೇ ಹಳದಿ ಲೋಹದ ಬೆಲೆಯಲ್ಲಿ ದಾಖಲೆಯ ಇಳಿಕೆ ಕಂಡುಬರುತ್ತಿದೆ. ಮಂಗಳವಾರದ ಭರ್ಜರಿ ಕುಸಿತದ ಬೆನ್ನಲ್ಲೇ, ಬುಧವಾರ (ಜು. 1) ಕೂಡ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಚಿನ್ನದ ಬೆಲೆ ಎಷ್ಟಿದೆ?
ಮಂಗಳವಾರವಷ್ಟೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಮೇಲೆ 1,800 ರೂ. ಹಾಗೂ 22 ಕ್ಯಾರಟ್ ಬಂಗಾರದ ಮೇಲೆ 1,650 ರೂ. ಇಳಿಕೆಯಾಗಿತ್ತು. ಇದೀಗ ಬುಧವಾರವೂ ಸಹ ಈ ಇಳಿಕೆಯ ಟ್ರೆಂಡ್ ಮುಂದುವರಿದಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,260 ರೂ. ಇಳಿಕೆಯಾಗಿದೆ. ಈ ಮೂಲಕ 1 ಗ್ರಾಂ ಚಿನ್ನದ ಬೆಲೆ 14,078 ರೂ. ತಲುಪಿದೆ.
22 ಕ್ಯಾರಟ್ ಚಿನ್ನ
ಇನ್ನೊಂದೆಡೆ ಅಭರಣ ಪ್ರಿಯರು ಹೆಚ್ಚಾಗಿ ಇಷ್ಟಪಡುವ 22 ಕ್ಯಾರಟ್ ಆಭರಣ ಚಿನ್ನದ ದರದಲ್ಲೂ ದೊಡ್ಡ ಕುಸಿತ ದಾಖಲಾಗಿದೆ. 10 ಗ್ರಾಂ ಚಿನ್ನದ ಮೇಲೆ 1,150 ರೂ. ಇಳಿಕೆಯಾಗಿದ್ದು, ಇದರೊಂದಿಗೆ 1 ಗ್ರಾಂ ಆಭರಣ ಚಿನ್ನದ ಬೆಲೆ 12,905 ರೂಪಾಯಿಗಳಿಗೆ ಬಂದು ತಲುಪಿದೆ. ಈ ಹಿಂದೆ ಜೂ. 30ರಂದು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 14,193 ರೂಪಾಯಿ ಆಗಿದ್ದೇ ಕಳೆದ 10 ದಿನಗಳ ಅತ್ಯಂತ ಕನಿಷ್ಠ ಕುಸಿತ ಎಂದು ದಾಖಲಾಗಿತ್ತು. ಆದರೆ ಇಂದು ಆ ದಾಖಲೆಯನ್ನೂ ಮೀರಿ ಚಿನ್ನದ ಬೆಲೆ ಮತ್ತಷ್ಟು ಪಾತಾಳಕ್ಕೆ ಇಳಿದಿರುವುದು ಖರೀದಿದಾರರಲ್ಲಿ ಸಂತಸ ಮೂಡಿಸಿದೆ.
ಬೆಳ್ಳಿ ಬೆಲೆಯಲ್ಲಿ ಏರಿಕೆ!
ಒಂದೆಡೆ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದರೆ, ಮತ್ತೊಂದೆಡೆ ಬೆಳ್ಳಿ ಮಾತ್ರ ಗ್ರಾಹಕರಿಗೆ ಶಾಕ್ ನೀಡಿದೆ. ಮಂಗಳವಾರ (ಜು.1) ದರಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಬುಧವಾರ ಒಂದು ಕೆಜಿ ಬೆಳ್ಳಿಯ ದರದಲ್ಲಿ ಸುಮಾರು 5,000 ರೂ. ಅಲ್ಪ ಏರಿಕೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 2,40 ಲಕ್ಷ ರೂ. ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಷಾಢದ ಶೂನ್ಯ ಮಾಸದಲ್ಲಿ ಆಭರಣ ಮಾರುಕಟ್ಟೆ ತಣ್ಣಗಿರುತ್ತದೆಯಾದರೂ, ಈ ಬಾರಿ ಚಿನ್ನದ ದರದಲ್ಲಿ ಆಗುತ್ತಿರುವ ಸರಣಿ ಕುಸಿತವು ಗ್ರಾಹಕರನ್ನು ಶೋರೂಮ್‌ಗಳತ್ತ ಕೈಬೀಸಿ ಕರೆಯುವಂತೆ ಮಾಡಿದೆ.

