34 ಕೋಟಿ EPFO ಖಾತೆಗಳಿಗೆ 8.25%ಬಡ್ಡಿ ಜಮೆ|ನಿಮ್ಮ PFಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ
8.25% ಬಡ್ಡಿಯನ್ನು ಇಪಿಎಫ್ ಖಾತೆಗಳಿಗೆ ಜಮಾ ಮಾಡಿದ ಕೇಂದ್ರ ಸರ್ಕಾರ; ಪಾಸ್‌ಬುಕ್, ಉಮಂಗ್ ಆ್ಯಪ್, ಎಸ್‌ಎಂಎಸ್ ಹಾಗೂ ಮಿಸ್‌ಡ್ ಕಾಲ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಹುದು.
ನೌಕರರ ಭವಿಷ್ಯ ನಿಧಿ (EPF) ಸದಸ್ಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. 2025-26ನೇ ಹಣಕಾಸು ವರ್ಷದ ಇಪಿಎಫ್ ಠೇವಣಿಗಳ ಮೇಲೆ 8.25 ಶೇಕಡಾ ಬಡ್ಡಿಯನ್ನು ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಉದ್ಯೋಗಿಗಳ ಹಾಗೂ ಉದ್ಯೋಗದಾತರ ಕೊಡುಗೆ ಮೊತ್ತದ ಮೇಲೆ ಲೆಕ್ಕ ಹಾಕಿದ ಬಡ್ಡಿಯನ್ನು ದೇಶಾದ್ಯಂತ ಕೋಟ್ಯಂತರ ಸದಸ್ಯರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಹೊಸ ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಈ ಬಾರಿ ಬಡ್ಡಿ ಜಮಾ ಪ್ರಕ್ರಿಯೆ ಹಿಂದಿನ ವರ್ಷಗಳಿಗಿಂತ ವೇಗವಾಗಿ ಪೂರ್ಣಗೊಂಡಿದೆ.
ಈ ಹಿಂದೆ ವಿವಿಧ ಪ್ರಾದೇಶಿಕ ಕಚೇರಿಗಳ ಮೂಲಕ ಹಂತ ಹಂತವಾಗಿ ಬಡ್ಡಿ ಜಮಾ ಆಗುತ್ತಿದ್ದ ಕಾರಣ ಕೆಲವರಿಗೆ ಮೊದಲೇ, ಇನ್ನೂ ಕೆಲವರಿಗೆ ತಡವಾಗಿ ಹಣ ಜಮಾ ಆಗುತ್ತಿತ್ತು. ಆದರೆ ಈ ಬಾರಿ ಕೇಂದ್ರ ಸರ್ಕಾರ 'ಸೆಂಟ್ರಲೈಸ್ಡ್ ಐಟಿ ಎನೇಬಲ್ಡ್ ಸಿಸ್ಟಮ್' ಜಾರಿಗೆ ತಂದಿದ್ದು, ದೇಶದ 123 ಪ್ರಾದೇಶಿಕ ಡೇಟಾಬೇಸ್‌ಗಳನ್ನು ಏಕೀಕರಿಸಲಾಗಿದೆ. ಸುಮಾರು 1,700 ಕೋಟಿ ದಾಖಲೆಗಳು ಹಾಗೂ 1,400 ಕೋಟಿಗೂ ಅಧಿಕ ಹಣಕಾಸು ವ್ಯವಹಾರಗಳನ್ನು ಒಂದೇ ವ್ಯವಸ್ಥೆಯಲ್ಲಿ ನಿರ್ವಹಿಸಿರುವುದರಿಂದ ಬಡ್ಡಿ ಲೆಕ್ಕಾಚಾರ ಮತ್ತು ಜಮಾ ಪ್ರಕ್ರಿಯೆ ಸುಗಮವಾಗಿದೆ.
ಬಡ್ಡಿ ಖಾತೆಗೆ ಬಂದಿದೆಯೇ? ಹೀಗೆ ಪರಿಶೀಲಿಸಿ
ಇಪಿಎಫ್ ಸದಸ್ಯರು ತಮ್ಮ ಯುಎಎನ್ (UAN) ಸಂಖ್ಯೆ ಹಾಗೂ ಪಾಸ್‌ವರ್ಡ್ ಬಳಸಿ ಇಪಿಎಫ್ ಪಾಸ್‌ಬುಕ್ ಪೋರ್ಟಲ್‌ಗೆ ಲಾಗಿನ್ ಆಗಿ ಬಡ್ಡಿ ಜಮಾ ಆಗಿರುವ ವಿವರವನ್ನು ಪರಿಶೀಲಿಸಬಹುದು. ಉಮಂಗ್ (UMANG) ಆ್ಯಪ್ ಮೂಲಕವೂ ಯುಎಎನ್ ಮತ್ತು ಒಟಿಪಿ ಬಳಸಿ ಬ್ಯಾಲೆನ್ಸ್ ಹಾಗೂ ಬಡ್ಡಿ ವಿವರ ನೋಡಬಹುದು. ಜೊತೆಗೆ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್‌ಎಂಎಸ್ ಸೇವೆ ಅಥವಾ ಮಿಸ್‌ಡ್ ಕಾಲ್ ಸೌಲಭ್ಯ ಬಳಸಿಯೂ ಖಾತೆಯ ಮಾಹಿತಿಯನ್ನು ಪಡೆಯುವ ಅವಕಾಶವಿದೆ.
ಬಡ್ಡಿ ಕಾಣಿಸದಿದ್ದರೆ ಆತಂಕ ಬೇಡ
ಕೆಲವು ಖಾತೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಬಡ್ಡಿ ಜಮಾ ಆಗಲು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಡ್ಡಿ ಇನ್ನೂ ಕಾಣಿಸದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ಕೆಲವು ದಿನಗಳು ಅಥವಾ ವಾರಗಳಲ್ಲಿ ಬಡ್ಡಿ ಸ್ವಯಂಚಾಲಿತವಾಗಿ ಖಾತೆಗೆ ಜಮಾ ಆಗಲಿದೆ. ಖಾತೆ ಸಕ್ರಿಯವಾಗಿರದಿದ್ದರೂ ಅದರಲ್ಲಿರುವ ಮೊತ್ತಕ್ಕೆ ವಾರ್ಷಿಕ ಬಡ್ಡಿ ಲಭ್ಯವಾಗುತ್ತದೆ.
ಪ್ರಸ್ತುತ ಇಪಿಎಫ್ ಸಂಸ್ಥೆ ಸುಮಾರು 32 ಲಕ್ಷ ರೂ. ಕೋಟಿ ಮೌಲ್ಯದ ನಿಧಿಯನ್ನು ನಿರ್ವಹಿಸುತ್ತಿದ್ದು, ಒಟ್ಟು 35 ಕೋಟಿಗೂ ಹೆಚ್ಚು ಸದಸ್ಯರ ಖಾತೆಗಳಿವೆ. ಅವುಗಳಲ್ಲಿ ಸುಮಾರು 8 ಕೋಟಿ ಖಾತೆಗಳು ಸಕ್ರಿಯವಾಗಿದ್ದು, ಉಳಿದ ಖಾತೆಗಳಿಗೂ ನಿಯಮಾನುಸಾರ ಬಡ್ಡಿ ಜಮಾ ಮಾಡಲಾಗುತ್ತಿದೆ. ಸದಸ್ಯರು ತಮ್ಮ ಖಾತೆಯ ವಿವರವನ್ನು ಪರಿಶೀಲಿಸಿ ಬಡ್ಡಿ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಇಪಿಎಫ್ ಸಂಸ್ಥೆ ಸಲಹೆ ನೀಡಿದೆ.

