ಮೆಟ್ರೋ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೃಷ್ಟಿ ದೋಷವುಳ್ಳವರು, ಮೂಗ ಮತ್ತು ಕಿವುಡರು ಹಾಗೂ ಆರ್ಥೋಪೆಡಿಕ್ ಸವಾಲುಗಳನ್ನು ಎದುರಿಸುತ್ತಿರುವ ಉದ್ಯೋಗಿಗಳಿಗೆ ಸಾರಿಗೆ ಭತ್ಯೆಯನ್ನು 15,000 ರೂ.ಗಳವರೆಗೆ ಹೆಚ್ಚಿಸಲಾಗಿದೆ.
ದೇಶದ ಐಟಿ ರಾಜಧಾನಿ ಮತ್ತು ಸಿಲಿಕಾನ್ ಸಿಟಿ ಎಂದು ಖ್ಯಾತಿಗಳಿಸಿರುವ ಬೆಂಗಳೂರಿನ ಲಕ್ಷಾಂತರ ವೇತನದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ 2026ರ ಕರಡು ಆದಾಯ ತೆರಿಗೆ ನಿಯಮಗಳ ಅನ್ವಯ, ಬೆಂಗಳೂರು ನಗರವನ್ನು ಇದೀಗ ಶೇ. 50ರಷ್ಟು ಮನೆ ಬಾಡಿಗೆ ಭತ್ಯೆ (HRA) ವಿನಾಯಿತಿ ಪಡೆಯಬಹುದಾದ ನಗರಗಳ ಪಟ್ಟಿಗೆ ಸೇರಿಸಲಾಗಿದೆ.
ಈ ಮೂಲಕ ದಶಕಗಳಿಂದ ಇದ್ದ ತಾರತಮ್ಯವೊಂದು ನಿವಾರಣೆಯಾಗಲಿದ್ದು, ಬೆಂಗಳೂರಿಗರು ಕೂಡ ಇನ್ಮುಂದೆ ದೇಶದ ಇತರೆ ಪ್ರಮುಖ ಮಹಾನಗರಗಳ ಉದ್ಯೋಗಿಗಳಂತೆ ಸಮಾನ ತೆರಿಗೆ ಲಾಭ ಪಡೆಯಲಿದ್ದಾರೆ.
ಮಹಾನಗರಗಳ ಸಾಲಿಗೆ ಬೆಂಗಳೂರು
ಇದುವರೆಗೂ ಕೇವಲ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ವಾಸಿಸುವ ಉದ್ಯೋಗಿಗಳಿಗೆ ಮಾತ್ರ ಮೂಲ ವೇತನದ ಶೇ. 50ರಷ್ಟು ಮೊತ್ತ ಮನೆ ಬಾಡಿಗೆ ಭತ್ಯೆಯಾಗಿ (HRA) ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿತ್ತು. ಬೆಂಗಳೂರು ಸೇರಿದಂತೆ ಇತರೆ ನಗರಗಳು ಮೆಟ್ರೋ ಪಾಲಿಟನ್ ನಗರಗಳಾಗಿದ್ದರೂ, ಅಲ್ಲಿನ ಉದ್ಯೋಗಿಗಳಿಗೆ ಶೇ. 40ರಷ್ಟು ವಿನಾಯಿತಿ ಮಾತ್ರ ಲಭ್ಯವಿತ್ತು. ಬೆಂಗಳೂರಿನಲ್ಲಿ ಜೀವನ ವೆಚ್ಚ ಮತ್ತು ಮನೆ ಬಾಡಿಗೆ ಗಗನಕ್ಕೇರಿದ್ದರೂ, ತೆರಿಗೆ ವಿನಾಯಿತಿಯಲ್ಲಿನ ಈ ತಾರತಮ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನವಿತ್ತು. ಇದೀಗ ಹೊಸ ಕರಡು ನಿಯಮಗಳು ಜಾರಿಯಾದರೆ, ಬೆಂಗಳೂರಿನ ಉದ್ಯೋಗಿಗಳು ಕೂಡ ಮುಂಬೈ ಮತ್ತು ದೆಹಲಿ ನಿವಾಸಿಗಳಂತೆ ಶೇ. 50ರಷ್ಟು ತೆರಿಗೆ ವಿನಾಯಿತಿಯನ್ನು ಪಡೆಯಲಿದ್ದಾರೆ. ಇದು ಮಧ್ಯಮ ವರ್ಗದ ಉದ್ಯೋಗಿಗಳ ಜೇಬಿಗೆ ಹೆಚ್ಚಿನ ಹಣ ಉಳಿತಾಯವಾಗಲು ಸಹಕಾರಿಯಾಗಲಿದೆ.
ನಿರಂತರ ಹೋರಾಟಕ್ಕೆ ಸಿಕ್ಕ ಜಯ: ತೇಜಸ್ವಿ ಸೂರ್ಯ
ಈ ಮಹತ್ವದ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಇದೊಂದು ಬೆಂಗಳೂರಿಗೆ ಸಿಕ್ಕಿರುವ ದೊಡ್ಡ ಬಂಪರ್ ಕೊಡುಗೆ ಎಂದು ಬಣ್ಣಿಸಿದ್ದಾರೆ. 2022ರಿಂದಲೂ ತಾನು ಈ ವಿಷಯವನ್ನು ಸಂಸತ್ತು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದೆ ಎಂದು ಅವರು ಸ್ಮರಿಸಿದ್ದಾರೆ. ಬೆಂಗಳೂರನ್ನು 50% HRA ಪಟ್ಟಿಗೆ ಸೇರಿಸುವಂತೆ ಹಣಕಾಸು ಸಚಿವಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದು, ಈ ನಿರ್ಧಾರದಿಂದ ನಗರದ ಲಕ್ಷಾಂತರ ಉದ್ಯೋಗಿಗಳಿಗೆ ನೇರ ಲಾಭವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಬೆಂಗಳೂರಿನ ಜೊತೆಗೆ ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ನಗರಗಳನ್ನೂ ಸೇರಿಸಲಾಗಿದೆ ಎಂಬುದು ಗಮನಾರ್ಹ.
ವಿಶೇಷ ಚೇತನರಿಗೆ ಸಾರಿಗೆ ಭತ್ಯೆಯಲ್ಲಿ ಭಾರಿ ಏರಿಕೆ
ಕೇವಲ ಸಾಮಾನ್ಯ ಉದ್ಯೋಗಿಗಳಿಗೆ ಮಾತ್ರವಲ್ಲದೆ, ವಿಶೇಷ ಚೇತನರಿಗೂ ಈ ಹೊಸ ಕರಡು ನಿಯಮಗಳಲ್ಲಿ ಭರ್ಜರಿ ಕೊಡುಗೆ ನೀಡಲಾಗಿದೆ. ಅಧಿಸೂಚಿತ ಮೆಟ್ರೋ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೃಷ್ಟಿ ದೋಷವುಳ್ಳವರು, ಮೂಗ ಮತ್ತು ಕಿವುಡರು ಹಾಗೂ ಆರ್ಥೋಪೆಡಿಕ್ ಸವಾಲುಗಳನ್ನು ಎದುರಿಸುತ್ತಿರುವ ಉದ್ಯೋಗಿಗಳಿಗೆ ಸಾರಿಗೆ ಭತ್ಯೆಯನ್ನು (Transport Allowance) 15,000 ರೂ.ಗಳವರೆಗೆ ಹೆಚ್ಚಿಸಲಾಗಿದೆ. ಸರ್ಕಾರದ ಈ ನಡೆ ವಿಶೇಷ ಚೇತನರ ಪರವಾದ ಅಂತರ್ಗತ ಮತ್ತು ಎಲ್ಲರನ್ನೂ ಒಳಗೊಳ್ಳುವ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.


