ಅಮೆಜಾನ್‌ನಂತಹ ಜಾಗತಿಕ ಕಂಪನಿಯ ತೆಕ್ಕೆಗೆ ಸೇರಿರುವುದರಿಂದ ಆಕ್ಸಿಯೋಗೆ ಮರುಜೀವ ಸಿಕ್ಕಂತಾಗಿದೆ. ಈ ಡೀಲ್ ಮೂಲಕ ಹೂಡಿಕೆದಾರರಿಗೆ ತಮ್ಮ ಹಣ ಹಿಂಪಡೆಯಲು ಅವಕಾಶ ಸಿಕ್ಕಿದೆ.
ಜಾಗತಿಕ ಇ-ಕಾಮರ್ಸ್ ದಿಗ್ಗಜ ಜೆಫ್ ಬೆಜೋಸ್ ನೇತೃತ್ವದ ಅಮೆಜಾನ್, ಭಾರತದ ಆರ್ಥಿಕ ವಲಯದಲ್ಲಿ ಬಲವಾದ ಹೆಜ್ಜೆಯೊಂದನ್ನು ಇಟ್ಟಿದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಲೆಂಡಿಂಗ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ, ಬೆಂಗಳೂರು ಮೂಲದ ಪ್ರಮುಖ ಫಿನ್‌ಟೆಕ್ ಕಂಪನಿ 'ಆಕ್ಸಿಯೋ' ಅನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ಈ ಮೂಲಕ ಇ-ಕಾಮರ್ಸ್ ಮತ್ತು ಫಿನ್‌ಟೆಕ್ ವಲಯದ ನಡುವಿನ ಅಂತರವನ್ನು ಅಮೆಜಾನ್ ಮತ್ತಷ್ಟು ಕಡಿಮೆ ಮಾಡಿಕೊಂಡಿದ್ದು, ತನ್ನ ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ಪಡೆಯಲಿದೆ. ಈ ಮೂಲಕ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಫಿನ್‌ಟೆಕ್ ಕಂಪನಿಯು ಅಮೆರಿಕದ ದೈತ್ಯ ಕಂಪನಿ ಪಾಲಾಗಿದೆ.
ಅಮೆಜಾನ್ ಕಂಪನಿಯು ಆಕ್ಸಿಯೋದ ಶೇ. 100ರಷ್ಟು ಷೇರುಗಳನ್ನು ಖರೀದಿಸಿದ್ದು, ಈ ಡೀಲ್‌ನ ಮೌಲ್ಯ ಸುಮಾರು 200 ಮಿಲಿಯನ್ ಡಾಲರ್ (ಅಂದಾಜು 1,660 ಕೋಟಿ ರೂ.) ಎಂದು ವರದಿಯಾಗಿದೆ. ಇದು ಸಂಪೂರ್ಣ ನಗದು ವ್ಯವಹಾರವಾಗಿದ್ದು , ಭಾರತದಲ್ಲಿ ಅಮೆಜಾನ್ ಮಾಡಿದ ಅತಿ ದೊಡ್ಡ ಮತ್ತು ಮಹತ್ವದ ಸ್ವಾಧೀನಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಆಕ್ಸಿಯೋ: ಕ್ಯಾಪಿಟಲ್ ಫ್ಲೋಟ್‌ನಿಂದ ಅಮೆಜಾನ್ ತೆಕ್ಕೆಗೆ
'ಆಕ್ಸಿಯೋ' ಇಂದಿನ ಫಿನ್‌ಟೆಕ್ ವಲಯದಲ್ಲಿ ಚಿರಪರಿಚಿತ ಹೆಸರಾಗಿದ್ದರೂ, ಇದರ ಆರಂಭ 'ಕ್ಯಾಪಿಟಲ್ ಫ್ಲೋಟ್' (Capital Float) ಎಂಬ ಹೆಸರಿನಲ್ಲಿ ಆಗಿತ್ತು. 2013ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಗೌರವ್ ಹಿಂದೂಜಾ ಮತ್ತು ಶಶಾಂಕ್ ರಿಷ್ಯಾಶೃಂಗ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು.
ಆರಂಭದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (SME) ಸಾಲ ನೀಡುವ ಎನ್‌ಬಿಎಫ್‌ಸಿ ಆಗಿ ಇದು ಕಾರ್ಯನಿರ್ವಹಿಸುತ್ತಿತ್ತು. ಆದರೆ, ಮಾರುಕಟ್ಟೆಯ ಅಗತ್ಯಗಳನ್ನು ಅರಿತ ಸಂಸ್ಥಾಪಕರು, ಕ್ರಮೇಣ ಇದನ್ನು ಗ್ರಾಹಕ ಕೇಂದ್ರಿತ ಫಿನ್‌ಟೆಕ್ ಕಂಪನಿಯಾಗಿ ಬದಲಾಯಿಸಿದ್ದರು. 'ಬೈ ನೌ, ಪೇ ಲೇಟರ್' (BNPL) ಅಂದರೆ "ಈಗ ಖರೀದಿಸಿ, ಆಮೇಲೆ ಪಾವತಿಸಿ" ಎಂಬ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವಲ್ಲಿ ಆಕ್ಸಿಯೋ ಪ್ರಮುಖ ಪಾತ್ರ ವಹಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಆಕ್ಸಿಯೋ ಸುಮಾರು 1 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸಿದೆ ಮತ್ತು ಸುಮಾರು 9 ಮಿಲಿಯನ್ ಸಕ್ರಿಯ ಗ್ರಾಹಕರನ್ನು ಹೊಂದಿದೆ.
ಡೀಲ್ ನಡೆದಿದ್ದು ಹೇಗೆ?
ಅಮೆಜಾನ್ ಮತ್ತು ಆಕ್ಸಿಯೋ ನಡುವಿನ ನಂಟು 2018ರಿಂದ ಆರಂಭಗೊಂಡಿದೆ. ಆ ವರ್ಷ ಅಮೆಜಾನ್ ಈ ಕಂಪನಿಯಲ್ಲಿ ಸುಮಾರು ಶೇ. 17ರಷ್ಟು ಪಾಲನ್ನು ಖರೀದಿಸುವ ಮೂಲಕ ಹೂಡಿಕೆ ಮಾಡಿತ್ತು. ಅಂದಿನಿಂದ ಆಕ್ಸಿಯೋ, ಅಮೆಜಾನ್‌ನ 'ಅಮೆಜಾನ್ ಪೇ ಲೇಟರ್' (Amazon Pay Later) ಸೇವೆ ನಿರ್ವಹಿಸುವ ಪ್ರಮುಖ ಬ್ಯಾಕ್‌ಎಂಡ್ ಪಾಲುದಾರನಾಗಿತ್ತು.
ಈ ವರ್ಷದ ಜೂನ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಸ್ವಾಧೀನ ಪ್ರಕ್ರಿಯೆಗೆ ಅಧಿಕೃತ ಅನುಮೋದನೆ ನೀಡಿತ್ತು. ಈಗ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದಿದ್ದು, ಆಕ್ಸಿಯೋ ಸಂಪೂರ್ಣವಾಗಿ ಅಮೆಜಾನ್‌ನ ಅಂಗಸಂಸ್ಥೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಅಮೆಜಾನ್, ಆಕ್ಸಿಯೋದಲ್ಲಿ ಹೂಡಿಕೆ ಮಾಡಿದ್ದ ಇತರ ಪ್ರಮುಖ ಹೂಡಿಕೆದಾರರಾದ ಲೈಟ್‌ರಾಕ್ , ರಿಬಿಟ್ ಕ್ಯಾಪಿಟಲ್ ಮತ್ತು ಪೀಕ್ ಎಕ್ಸ್‌ವಿ (ಹಿಂದಿನ ಸಿಕ್ವೊಯಾ ಇಂಡಿಯಾ) ಅವರ ಪಾಲನ್ನು ನಗದು ನೀಡಿ ಖರೀದಿಸಿದೆ.
ಬೈಜೂಸ್ ಹೊಡೆತದಿಂದ ಪಾರಾದ ಆಕ್ಸಿಯೋ
ಆಕ್ಸಿಯೋ ಕಂಪನಿಯ ಪಯಣ ಕಲ್ಲು, ಮುಳ್ಳಿನ ಹಾದಿಯಾಗಿತ್ತು. ಒಂದು ಕಾಲದಲ್ಲಿ ಅತ್ಯಂತ ಭರವಸೆಯ ಸ್ಟಾರ್ಟ್‌ಅಪ್ ಆಗಿದ್ದ ಆಕ್ಸಿಯೋ, ಎಡ್‌ಟೆಕ್ ದೈತ್ಯ 'ಬೈಜೂಸ್' ಪತನದಿಂದಾಗಿ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಬೈಜೂಸ್‌ನ ಕೋರ್ಸ್‌ಗಳನ್ನು ಖರೀದಿಸುವ ಪೋಷಕರಿಗೆ ಆಕ್ಸಿಯೋ ಸಾಲ ನೀಡಿತ್ತು. ಆದರೆ ಬೈಜೂಸ್ ಬಿಕ್ಕಟ್ಟಿನಿಂದಾಗಿ ಸಾಲ ಮರುಪಾವತಿ ನಿಂತುಹೋಗಿ, ಆಕ್ಸಿಯೋದ ಬ್ಯಾಲೆನ್ಸ್ ಶೀಟ್ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇದು ಕಂಪನಿಯ ಮೌಲ್ಯಮಾಪನ ಕುಸಿಯಲು ಕಾರಣವಾಗಿತ್ತು.
ಆದರೆ, ಈಗ ಅಮೆಜಾನ್‌ನಂತಹ ಜಾಗತಿಕ ಕಂಪನಿಯ ತೆಕ್ಕೆಗೆ ಸೇರಿರುವುದರಿಂದ ಆಕ್ಸಿಯೋಗೆ ಮರುಜೀವ ಸಿಕ್ಕಂತಾಗಿದೆ. ಈ ಡೀಲ್ ಮೂಲಕ ಹೂಡಿಕೆದಾರರಿಗೆ ತಮ್ಮ ಹಣ ಹಿಂಪಡೆಯಲು ಅವಕಾಶ ಸಿಕ್ಕಿದೆ ಮತ್ತು ಕಂಪನಿಯ ನೌಕರರ ಭವಿಷ್ಯವೂ ಸುಭದ್ರವಾಗಿದೆ.
ಅಮೆಜಾನ್‌ಗೆ ಸಿಗುವ ಬ್ರಹ್ಮಾಸ್ತ್ರವೇನು?
ಈ ಸ್ವಾಧೀನದಿಂದ ಅಮೆಜಾನ್‌ಗೆ ಕೇವಲ ಒಂದು ಕಂಪನಿಯಲ್ಲ, ಬದಲಾಗಿ ಭಾರತದ ಫಿನ್‌ಟೆಕ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಬೇಕಾದ 'ಬ್ರಹ್ಮಾಸ್ತ್ರ' ಸಿಕ್ಕಿದೆ. ಎನ್‌ಬಿಎಫ್‌ಸಿ ಲೈಸೆನ್ಸ್ ಅಮೆಜಾನ್‌ಗೆ ಸಿಕ್ಕ ಅತ್ಯಂತ ದೊಡ್ಡ ಲಾಭ. ಇಲ್ಲಿಯವರೆಗೆ ಅಮೆಜಾನ್ ಸಾಲ ನೀಡಲು ಬ್ಯಾಂಕ್‌ಗಳು ಅಥವಾ ಇತರ ಹಣಕಾಸು ಸಂಸ್ಥೆಗಳ ಮೇಲೆ ಅವಲಂಬಿತವಾಗಿತ್ತು. ಈಗ ಸ್ವಂತ ಲೈಸೆನ್ಸ್ ಇರುವುದರಿಂದ ನೇರವಾಗಿ ಸಾಲ ನೀಡಬಹುದು.
ಸಾಲ ನೀಡಿಕೆ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಲ್ಲದ ಕಾರಣ, ಅಮೆಜಾನ್‌ಗೆ ಸಿಗುವ ಲಾಭದ ಪ್ರಮಾಣ (Margin) ಹೆಚ್ಚಾಗಲಿದೆ. ಅಮೆಜಾನ್ ಈಗಾಗಲೇ ಗ್ರಾಹಕರ ಖರೀದಿ ವರ್ತನೆಯ ಡೇಟಾವನ್ನು ಹೊಂದಿದೆ. ಈಗ ಸಾಲದ ಇತಿಹಾಸದ ಡೇಟಾವೂ ಸಿಗುವುದರಿಂದ, ಯಾರಿಗೆ ಎಷ್ಟು ಸಾಲ ನೀಡಬಹುದು ಎಂಬುದನ್ನು ನಿರ್ಧರಿಸಲು ಸುಲಭವಾಗಲಿದೆ.
ಭಾರತದಲ್ಲಿ ಈಗಾಗಲೇ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂಗಳು ಫಿನ್‌ಟೆಕ್ ವಲಯದಲ್ಲಿ ಆಳುತ್ತಿವೆ. ಈಗ ಅಮೆಜಾನ್ ಕೂಡ ಸಾಲ ನೀಡುವ ಮೂಲಕ ಈ ಸ್ಪರ್ಧೆಯಲ್ಲಿ ಮುಂಚೂಣಿಗೆ ಬರಲಿದೆ.
ಹೆಚ್ಚುವರಿ ಆರ್ಥಿಕ ಉತ್ಪನ್ನಗಳ ಪರಿಚಯಿಸಲು ಅವಕಾಶ
ಭಾರತದಲ್ಲಿ ಸಾಲದ ಮಾರುಕಟ್ಟೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಅಮೆಜಾನ್ ತನ್ನ ಮುಂದಿನ ಗುರಿಯಾಗಿ ಭಾರತದ 10 ಕೋಟಿಗೂ ಹೆಚ್ಚು ಜನರಿಗೆ ಡಿಜಿಟಲ್ ಸಾಲ ಸೌಲಭ್ಯ ತಲುಪಿಸುವ ಯೋಜನೆಯನ್ನು ಹಾಕಿಕೊಂಡಿದೆ. ಕೇವಲ ಆನ್‌ಲೈನ್ ಖರೀದಿಗಷ್ಟೇ ಅಲ್ಲದೆ, ವೈಯಕ್ತಿಕ ಸಾಲ, ವಿಮೆ ಮತ್ತು ಇತರ ಆರ್ಥಿಕ ಉತ್ಪನ್ನಗಳನ್ನು ಪರಿಚಯಿಸಲು ಅಮೆಜಾನ್ ಈ ಸ್ವಾಧೀನವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.


