ಗಾಜಾ ಆಕ್ರಮಣ: ಇಂಡಿಯದ ಮೌನ ಅಸಮರ್ಥನೀಯ
x

ಗಾಜಾ ಆಕ್ರಮಣ: ಇಂಡಿಯದ ಮೌನ ಅಸಮರ್ಥನೀಯ

ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಹಿಂಸಾತ್ಮಕ ದಾಳಿಗೆ ಪ್ರತಿಕ್ರಿಯೆಯಾಗಿ ಗಾಜಾದಲ್ಲಿ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿರುವ ಇಸ್ರೇಲ್‌ನ ಅಸಮರ್ಥನೀಯ ಕೃತ್ಯದ ಬಗ್ಗೆ ಇಂಡಿಯ ಸರ್ಕಾರ ಮತ್ತು ಹೆಚ್ಚಿನ ಜನರು ಮೌನವಾಗಿದ್ದಾರೆ. ಈ ಮೌನ ದೇಶಿ ರಾಜಕೀಯದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳನ್ನು ಮತ್ತು ಅದು ಸೃಷ್ಟಿಸುವ ಚರ್ಚೆಗಳನ್ನು ಪ್ರತಿಬಿಂಬಿಸುತ್ತದೆ.


ಅಧಿಕಾರ ಚಲಾಯಿಸುವವರು ಮಾಡಿದ ಆಯ್ಕೆಗಳು ಪ್ರಶ್ನಾತೀತ. ಪ್ರತಿಯೊಬ್ಬರೂ ತಮ್ಮನ್ನು ಸೈನಿಕರಂತೆ ಕಾಣಬೇಕು. ಆದೇಶಗಳ ಬಗ್ಗೆ ಮಾತನಾಡುವುದು ಅಥವಾ ಪ್ರಶ್ನಿಸಬಾರದು. ಆದರೆ, ಆಡಳಿತಗಾರರಿಗೋಸ್ಕರ ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂಬ ನಿಲುವು ಭಾರತೀಯವಾದದ್ದಲ್ಲ. ದೇಶದಲ್ಲಿ ಪ್ರತಿಭಟನೆಗಳನ್ನು ತಡೆಯಲು ಕಟ್ಟುನಿಟ್ಟಾದ ಕಾನೂನುಗಳು ಮತ್ತು ನಿಯಮಗಳನ್ನು ಬಳಸಲಾಗುತ್ತಿದೆ; ಜನ ಅಧಿಕಾರಸ್ಥರ ವಿರುದ್ಧ ಮಾತ ನಾಡಲು ಕಷ್ಟವಾಗುತ್ತಿದೆ.

ದೇಶದಲ್ಲಿ ಸಿಟ್ಟಿಗೇಳುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಇಳಿಕೆ ವರ್ತನೆಗಳನ್ನು ಬದಲಾಯಿಸಿಕೊಂಡಿದ್ದರ ಅಥವಾ ಮೌನವನ್ನು ಆಯ್ಕೆ ಮಾಡಿಕೊಂಡಿದ್ದರ ಪರಿಣಾಮ ಇರಬಹುದು. ಹಿಂದೆ, ಪ್ರತಿಭಟಿಸುವವರು ದೇಶದಾದ್ಯಂತ ಇರುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡುವ ಪರಂಪರೆಯೊಂದಿಗೆ ಬೆಳೆದ ಜನರು ಪ್ರತಿಭಟನೆಗಳ ಬಗ್ಗೆ ಉತ್ಸುಕರಾಗಿದ್ದರು. ಭಾರತೀಯರಿಗೆ ಅಧಿಕಾರಕ್ಕೆ ಸವಾಲು ಎಸೆಯುವ ಕಡೆಗೆ ಸ್ವಾಭಾವಿಕ ಒಲವು ಇದೆ.

ಪ್ರತಿಭಟನೆಗಳನ್ನು ದೇಶದ್ರೋಹ ಎನ್ನುವಂತೆ ನೋಡಲಾಗುತ್ತದೆ. ದೇಶದ ನಗರಗಳು ಮತ್ತು ಪಟ್ಟಣಗಳ ಬಹುತೇಕರು ಗಾಜಾದಲ್ಲಿ ಇಸ್ರೇಲಿ ಆಕ್ರಮಣದ ಬಗ್ಗೆ ಕೋಪ ಅಥವಾ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಇದು 1980 ರ ದಶಕದ ಅಂತ್ಯದವರೆಗೆ ಕಂಡುಬಂದ ಸ್ವಯಂಪ್ರೇರಿತ ಪ್ರತಿಕ್ರಿಯೆಗಿಂತ ಭಿನ್ನವಾಗಿದೆ. ಹಿಂದೆ ಪ್ಯಾಲೆಸ್ತೀನ್ ಜನರ ಮೇಲಿನ ದಾಳಿಗೆ ಭಾರತೀಯರು ಬೀದಿಗಿಳಿದು ಪ್ರತಿಭಟಿಸುವುದು ಸಾಮಾನ್ಯವಾಗಿತ್ತು. ಹೆಚ್ಚಿನ ಭಾರತೀಯರು ಪ್ರತ್ಯೇಕ ತಾಯ್ನಾಡಿನ ಹೋರಾಟದಲ್ಲಿ ಪ್ಯಾಲೆಸ್ತೀನಿಯನ್ನರನ್ನು ಬೆಂಬಲಿಸಿದರು; ಆದರೆ, ಈಗ ಇಸ್ರೇಲ್‌ ಅನ್ನು ಬೆಂಬಲಿಸುವುದು ಏಕೈಕ ಸ್ವೀಕಾರಾರ್ಹ ಪ್ರತಿಕ್ರಿಯೆ.

ಇಸ್ರೇಲ್‌ನಲ್ಲಿ ನಡೆದ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. 1980 ರ ದಶಕದವರೆಗೆ ದೇಶೀಯರು ಇಸ್ರೇಲ್ ಅಸ್ತಿತ್ವವನ್ನು ನೈತಿಕವಾಗಿ ತಪ್ಪು ಎಂದು ನೋಡುತ್ತಿದ್ದರು. ಪ್ಯಾಲೆಸ್ತೀನಿಯನ್ನರು ತಮ್ಮ ಮನೆಗಳನ್ನು ತೊರೆಯುವಂತೆ ಆಗಿದ್ದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ದೂಷಿಸಲಾಯಿತು. ಮಿತ್ರ ರಾಷ್ಟ್ರಗಳು ಮತ್ತು ಅವರ ಯುದ್ಧಾನಂತರದ ಪಾಲುದಾರರಿಂದ ಆದ ದುಷ್ಟ ಕೃತ್ಯಗಳನ್ನು ಸರಿದೂಗಿಸಲು ಯಹೂದಿ ತಾಯ್ನಾಡನ್ನು ಸ್ಥಾಪಿಸಲಾಯಿತು.

ಯಹೂದಿ ಸಮುದಾಯವನ್ನು ಕ್ರಿಶ್ಚಿಯನ್ನರಿಗೆ ಸಮಾನವಾಗಿ ಪರಿಗಣಿಸಲಾಗಿಲ್ಲ. 1980 ರ ದಶಕದ ಅಂತ್ಯದವರೆಗೆ ಭಾರತೀಯರು ಯಹೂದಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದರು ಮತ್ತು ತಮ್ಮ ಸ್ವಂತ ಸಮುದಾಯದ ಭಾಗವಾಗಿ ಸ್ವೀಕರಿಸಿದರು. ಆದರೆ, ಯಹೂದಿಗಳ ನಿಯಂತ್ರಣದಲ್ಲಿ ಪ್ರತ್ಯೇಕ ಭೂಮಿಯನ್ನು ಹೊಂದಿರಬೇಕೆಂಬ ಪ್ಯಾಲೆಸ್ತೀನಿಯನ್ನರಿಗೆ ವಿಧಿಸಿದ ಅನಗತ್ಯ ಶಿಕ್ಷೆಯನ್ನು ಅವರು ಎಂದಿಗೂ ಒಪ್ಪಲಿಲ್ಲ.

ನವೆಂಬರ್ 1938 ರಲ್ಲಿ ಗಾಂಧೀಜಿ ಹರಿಜನ ಪತ್ರಿಕೆಯ ಲೇಖನವೊಂದರಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವುಗಳನ್ನು ಸಾರ್ವಜನಿಕರು ವ್ಯಾಪಕವಾಗಿ ಒಪ್ಪಿದ್ದಾರೆ. ವೈಯಕ್ತಿಕ ಸ್ನೇಹದ ಜೊತೆಗೆ ಯಹೂದಿಗಳ ಬಗ್ಗೆ ಅವರ ಸಹಾನುಭೂತಿಗೆ ಸಾರ್ವತ್ರಿಕ ಕಾರಣವಿದೆ. ಜರ್ಮನ್ನರು, ಯಹೂದಿಗಳ ಕಿರುಕುಳವು ಇತಿಹಾಸದಲ್ಲಿ ದಾಖಲಾಗಿದೆ ಎಂದು ಅವರು ಹೇಳಿದರು.

ʻಆದರೆ, ಯಹೂದಿಗಳು ಎದುರಿಸುತ್ತಿರುವ ತೊಂದರೆಗಳನ್ನು ಅರ್ಥಮಾಡಿಕೊಂಡಿದ್ದರೂ, ಅವರಿಗೆ ಒಂದು ನಿರ್ದಿಷ್ಟ ತಾಯ್ನಾಡಿನ ಅವಶ್ಯಕತೆ ಏಕೆ ಎಂದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ಅವರು ಹುಟ್ಟಿದ ದೇಶದಲ್ಲಿ ಮತ್ತು ಅವರು ಕೆಲಸ ಮಾಡುವ ದೇಶದಲ್ಲಿ ಏಕೆ ವಾಸಿಸಬಾರದು? ಪ್ಯಾಲೆಸ್ತೀನ್ ಅರಬ್ಬರಿಗೆ, ಇಂಗ್ಲೆಂಡ್ ಇಂಗ್ಲೀಷರಿಗೆ ಅಥವಾ ಫ್ರಾನ್ಸ್ ಫ್ರೆಂಚರಿಗೆ ಇದ್ದಂತೆʼ ಎನ್ನುವುದು ಅವರ ನಿಲುವಾಗಿತ್ತು. 1980ರ ದಶಕದವರೆಗೂ ಹೆಚ್ಚಿನ ಭಾರತೀಯರು ಗಾಂಧಿ ಯವರ ಅಭಿಪ್ರಾಯಗಳನ್ನು ಒಪ್ಪುತ್ತಾರೆ ಎಂದು ನಂಬಲಾಗಿತ್ತು. ಅರಬ್ಬರ ಮೇಲೆ ಯಹೂದಿಗಳನ್ನು ಹೇರುವುದು ಅನ್ಯಾಯ ಮತ್ತು ಕ್ರೂರ ಎಂದು ಹೇಳಿದರು. ಆಗ ನರಳುತ್ತಿರುವ ಮತ್ತು ತುಳಿತಕ್ಕೊಳಗಾದವರನ್ನು ಬೆಂಬಲಿಸುವುದು ಪ್ರಶಂಸನೀಯವೆಂದು ಪರಿಗಣಿಸಲ್ಪಟ್ಟಿತು. ಯಾಸರ್ ಅರಾಫತ್ ಹೀರೋ ಆಗಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ಭಾರತದಲ್ಲಿ ರಾಜಕೀಯ ನಾಯಕರು ಮಾನವೀಯತೆ ಮತ್ತು ನೈತಿಕವಾಗಿ ಸರಿಯಾದ ಮಾರ್ಗವನ್ನು ತ್ಯಜಿಸಬೇಕೆಂದು ಬಹಿರಂಗವಾಗಿ ಪ್ರತಿಪಾದಿಸುತ್ತಿದ್ದಾರೆ; ಇದು ದೌರ್ಬಲ್ಯದ ಸಂಕೇತವೆಂದು ಹೇಳುತ್ತಿದ್ದಾರೆ. ಇದು ಗಾಂಧಿ ಅಭಿಪ್ರಾಯಕ್ಕೆ ವಿರುದ್ಧವಾಗಿದೆ; ಅವರು ನಾಜಿಗಳ ಕಾರ್ಯತಂತ್ರವನ್ನು ಖಂಡಿಸಿದರು; ಬೂಟಾಟಿಕೆ ಅಥವಾ ದೌರ್ಬಲ್ಯ ಮಾನವೀಯತೆಯಂತೆ ತೋರುತ್ತಿರುವಾಗ ಅಹಿಂಸೆಯ ಅಗತ್ಯವನ್ನು ಎತ್ತಿ ತೋರಿಸಿದರು.

ಇಸ್ರೇಲ್ ಮತ್ತು ಝಿಯೋನಿಸ್ಟ್‌ಗಳನ್ನು ಬೆಂಬಲಿಸುವ ಇಂದಿನ ಬಹಳಷ್ಟು ವಾದಗಳು ಹಿಂದಿನ ಕಲ್ಪನೆಗಳನ್ನು ಆಧರಿಸಿವೆ; ನಿರ್ದಿಷ್ಟವಾಗಿ, ವಿ.ಡಿ. ಸಾವರ್ಕರ್ ಮತ್ತು ಎಂ.ಎಸ್. ಗೋಲ್ವಾಲ್ಕರ್ ಅವರಿಂದ. ಪ್ಯಾಲೆಸ್ತೀನ್ ಅನ್ನು ತಮ್ಮ ತಾಯ್ನಾಡು ಮತ್ತು ಪವಿತ್ರ ಭೂಮಿ ಎಂದು ಪರಿಗಣಿಸುವ ಯಹೂದಿ ಜನರ ವಸಾಹತು ಮಾಡಬೇಕು ಎಂದು ಈ ಹಿಂದೆ ಸಾವರ್ಕರ್ ಹೇಳಿದ್ದರು. 1938 ರಲ್ಲಿ ವಿ.ಡಿ. ಸಾವರ್ಕರ್ ಅವರು ನಾಗ್ಪುರದಲ್ಲಿ ತಮ್ಮ ಭಾಷಣದಲ್ಲಿ ಭವಿಷ್ಯದಲ್ಲಿ ಹಿಂದೂಗಳು ಬಲಿಷ್ಠರಾದರೆ, ಮುಸ್ಲಿಂ ಸ್ನೇಹಿತರನ್ನು ಜರ್ಮನ್-ಯಹೂದಿಗಳಂತೆಯೇ ಪರಿಗಣಿಸುತ್ತಾರೆ ಎಂದು ಹೇಳಿದರು.

ಇದನ್ನು ವಿನಾಯಕ ಚತುರ್ವೇದಿ ಎಂಬ ವಿದ್ವಾಂಸರು ಪ್ರಶ್ನಿಸಿದ್ದರು. ಹಿಂದುತ್ವ ಪ್ರಣೀತ ಸಾಮಾಜಿಕ ಮಾಧ್ಯಮ ಗುಂಪಿನ ಹಾನಿಕಾರಕ ಪೋಸ್ಟ್‌ಗಳಲ್ಲಿ ಇಂಥದ್ದೇ ವಿಚಾರಗಳನ್ನು ಕಾಣಬಹುದು. ಹಮಾಸ್ ದಾಳಿಯನ್ನು ಭಯೋತ್ಪಾದಕ ದಾಳಿ ಎಂಬ ಹಣೆಪಟ್ಟಿ ಕಟ್ಟುವ ಮೋದಿಯವರ ಆರಂಭಿಕ ಪ್ರತಿಕ್ರಿಯೆಯು, ಸಾವರ್ಕರ್ ಮತ್ತು ಗೋಲ್ವಾಲ್ಕರ್ ಅವರ ಸಿದ್ಧಾಂತಗಳೊಂದಿಗೆ ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ನೇತನ್ಯಾಹು ಅವರಂತೆ ಮೋದಿಯವರ ರಾಜಕೀಯ ಯಶಸ್ಸು ಇತಿಹಾಸವನ್ನು ತಿರುಚುವುದನ್ನು ಮತ್ತು ಆಗಾಗ ಪೌರಾಣಿಕ ಪಾತ್ರಗಳನ್ನು ಉಲ್ಲೇಖಿಸುವುದನ್ನು ಅವಲಂಬಿಸಿದೆ.

ಭಾರತ ಸರ್ಕಾರ ತನ್ನ ನಿಲುವನ್ನು ಸರಿಪಡಿಸಿಕೊಂಡ ನಂತರವೂ ಸಂಘಪರಿವಾರದ ಆರಂಭಿಕ ಅಭಿಪ್ರಾಯಗಳು ಇನ್ನೂ ಅಸ್ತಿತ್ವದಲ್ಲಿವೆ. ಪ್ಯಾಲೇಸ್ತೀನಿಯನ್ನರ ವಿರುದ್ಧದ ದಾಳಿಗಳಿಗೆ ಭಾರತ ಮತ್ತು ಭಾರತೀಯರು ಪ್ರತಿಕ್ರಿಯಿಸಿದ ರೀತಿ ಬದಲಾಗಿದೆ ಮತ್ತು ಇದು ದೇಶದಲ್ಲಿ ಆಗುತ್ತಿರುವ ಎಲ್ಲಾ ಬದಲಾವಣೆಗಳ ಒಂದು ಸಣ್ಣ ಭಾಗವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಹಿಂದೂ ಬಲಪಂಥೀಯ ಗುಂಪುಗಳು ಅರಬ್-ಪ್ಯಾಲೆಸ್ತೀನಿಯರ ಮೇಲೆ ದಾಳಿ ಮಾಡುವುದು ಮುಸ್ಲಿಮರ ಮೇಲಿನ ದಾಳಿ ಎಂದುಕೊಂಡಿದ್ದರು.

ಇಸ್ರೇಲ್‌ನಲ್ಲಿ ಝಿಯೋನಿಸಂಗೆ ಹೆಚ್ಚಿದ ಬೆಂಬಲವು ಭಾರತದಲ್ಲಿ ಬಹುಸಂಖ್ಯಾತವಾದಕ್ಕೆ ಹೆಚ್ಚುತ್ತಿರುವ ಬೆಂಬಲವನ್ನು ಹೋಲುತ್ತದೆ ಮತ್ತು ಈ ಎರಡು ಸಿದ್ಧಾಂತಗಳು ಜತೆಜತೆಗೆ ಹೋಗುತ್ತವೆ.

ಆದರೆ, ಇದು 2014 ರ ನಂತರ ಆರಂಭವಾಯಿತು ಎಂದು ಯೋಚಿಸುವ ತಪ್ಪನ್ನು ಮಾಡಬೇಡಿ. 1992 ರಲ್ಲಿ ಭಾರತ ಮತ್ತು ಇಸ್ರೇಲ್ ಅಧಿಕೃತ ರಾಜತಾಂತ್ರಿಕ ಪಾಲುದಾರರಾದರು. ಆಗ ಪ್ರಧಾನಿಯಾಗಿದ್ದವರು ಪಿ.ವಿ.ನರಸಿಂಹರಾವ್. ಮಧ್ಯಮ ವರ್ಗದಿಂದ ಜಿಯೋನಿಸ್ಟ್ ರಾಜ್ಯಕ್ಕೆ ಬೆಂಬಲ ಕಳೆದ 30 ವರ್ಷಗಳಲ್ಲಿ ಹೆಚ್ಚುತ್ತಿದೆ. ಪ್ಯಾಲೆಸ್ತೀನಿಯನ್ನರಿಗೆ ಮತ್ತು ಅವರ ಕಾರಣಕ್ಕೆ ಬೆಂಬಲ ಕಡಿಮೆಯಾಗುತ್ತಿದೆ. ಭಾರತೀಯ ರಾಜ್ಯವು ಈ ಕಲ್ಪನೆಯನ್ನು ಬೆಂಬಲಿಸಿದೆ ಮತ್ತು ಇದು ಅತ್ಯಂತ ಜನಪ್ರಿಯ ನಂಬಿಕೆಯಾಗಿದೆ.

(ಲೇಖನಗಳು ಲೇಖಕರ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯ ಆಗಿರುತ್ತವೆ. ಅದು ಫೆಡರಲ್‌ನ ದೃಷ್ಟಿಕೋನಗಳಿಗೆ ಅನುಗುಣವಾಗಿ ಇರಬೇಕೆಂದಿಲ್ಲ)

Read More
Next Story