ಮಹಿಳಾ ಸಬಲೀಕರಣಕ್ಕೆ ನೊಬೆಲ್ ವಿಜೇತೆ ಕ್ಲಾಡಿಯಾ ಗೋಲ್ಡಿನ್ ಸೂತ್ರ
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಕ್ಲಾಡಿಯಾ ಗೋಲ್ಡಿನ್ ಅವರು ಮಹಿಳಾ ಸಬಲೀಕರಣ ಮತ್ತು ಸ್ವಾಯತ್ತೆಯ ಕುರಿತು ಹೇಳಿರುವ ಸೂತ್ರಗಳು ಸಕಾಲಿಕ.
ಕ್ಲಾಡಿಯಾ ಗೋಲ್ಡಿನ್ ಅವರು ಉದ್ಯೋಗಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಮತ್ತು ಉದ್ಯೋಗಾವಕಾಶ ಕುರಿತ ಅಧ್ಯಯನಕ್ಕಾಗಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದಿದ್ದಾರೆ. ಮಹಿಳೆಯರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಬೆಂಬಲ ನೀಡುವುದು, ಅವರ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಮನೆಯ ಕೆಲಸಗಳು ಹಾಗೂ ಮಕ್ಕಳ ಪಾಲನೆಯಲ್ಲಿ ಸಹಾಯ ಮಾಡುವಂತೆ ಪುರುಷರನ್ನು ಪ್ರೋತ್ಸಾಹಿಸುವುದು ಮುಂದಿನ ಮಾರ್ಗ ಎಂದು ಅವರು ಹೇಳುತ್ತಾರೆ.
ಅರ್ಥಶಾಸ್ತ್ರಜ್ಞೆ ಕ್ಲಾಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯ ಗೌರವ ಸಂದಿದೆ. ಮಹಿಳೆಯರ ಆರ್ಥಿಕ ಬೆಳವಣಿಗೆ ಮಾತ್ರವಲ್ಲದೆ ಸಾಮಾಜಿಕ ಸಮಸ್ಯೆಗಳು ಮತ್ತು ಮನೆ ಹಾಗೂ ವೈಯಕ್ತಿಕ ಜೀವನದಲ್ಲಿ ಪುರುಷರು ಮತ್ತು ಮಹಿಳೆಯರ ದೈನಂದಿನ ನಡವಳಿಕೆಗಳನ್ನು ಅವರು ಅಧ್ಯಯನ ಮಾಡಿದ್ದಾರೆ.
ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡಿದರೆ, ನಮ್ಮ ಆರ್ಥಿಕತೆ ಇನ್ನಷ್ಟು ಬೆಳೆಯುತ್ತದೆ ಎಂಬ ಮಾತು ಇದೆ. ಜಾಗತಿಕವಾಗಿ 16-64 ವರ್ಷ ವಯಸ್ಸಿನ ಅಂದಾಜು ಶೇ.80 ಪುರುಷರು ಉದ್ಯೋಗಿಗಳಾಗಿರುತ್ತಾರೆ; ಆದರೆ, ಅದೇ ವಯೋಮಾನದ ಶೇ. 50 ಮಹಿಳೆಯರು ಮಾತ್ರ ಕೆಲಸ ಮಾಡುತ್ತಾರೆ. ಭಾರತದಲ್ಲಿ ಈ ಪ್ರಮಾಣ ಶೇ.20 ಇದೆ; ಇದು ಚೀನಾದಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡ ಮಹಿಳೆಯರ ಸಂಖ್ಯೆಯ ಅರ್ಧದಷ್ಟು. ಬಾಂಗ್ಲಾದೇಶದಲ್ಲಿ ಈ ಪ್ರಮಾಣ ಶೇ.33. ಭಾರತವು ಪಾಕಿಸ್ತಾನ ಮತ್ತು ಇರಾನ್‌ನಂತಹ ಸಂಪ್ರದಾಯವಾದಿ ರಾಷ್ಟ್ರಗಳ ಗುಂಪಿನಲ್ಲಿದೆ.
ಮಹಿಳೆಯರು ಎದುರಿಸುವ ಅಡೆತಡೆಗಳಿಗೆ ಕಾರಣಗಳ ಬಗ್ಗೆ ಗೋಲ್ಡಿನ್ ವಿವರಿಸುತ್ತಾರೆ ಮತ್ತು ಅವುಗಳಿಗೆ ಸಂಭವನೀಯ ಪರಿಹಾರಗಳನ್ನು ಸೂಚಿಸುತ್ತಾರೆ. ಅಮೆರಿಕದಲ್ಲಿ 200 ವರ್ಷಗಳ ಮಹಿಳೆಯರ ಕೆಲಸ ಮತ್ತು ವೇತನದಲ್ಲಿನ ಬದಲಾವಣೆಗಳನ್ನು ಅವರು ಅಧ್ಯಯನ ಮಾಡಿದ್ದಾರೆ. ಕೆಲವು ದತ್ತಾಂಶಗಳು 250 ವರ್ಷಗಳ ಹಿಂದಿನವು. ಕೆಲಸ ಮಾಡುವ ಮಹಿಳೆಯರ ನಿಜವಾದ ಶೇಕಡಾವಾರು ಪ್ರಮಾಣ ಮತ್ತು ಅವರು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಲೆಕ್ಕಾಚಾರ ಮಾಡಲು ಅವರು ವಿವಿಧ ಮಾಹಿತಿ ಮೂಲಗಳನ್ನು ಬಳಸಿದ್ದಾರೆ. ಇದರಿಂದ ಮಹಿಳೆಯರನ್ನು ನಿಖರವಾಗಿ ಪ್ರತಿನಿಧಿಸದ ಅಧಿಕೃತ ದತ್ತಾಂಶವನ್ನು ಸರಿಹೊಂದಿಸಬಹುದಾಗಿದೆ. ಉದಾಹರಣೆಗೆ, ಪುರುಷರು ಮೃತಪಟ್ಟ ಬಳಿಕ ಅವರ ಕೆಲಸಗಳನ್ನು ಮುಂದುವರಿಸಿದ ಮಹಿಳೆಯರ ವ್ಯವಹಾರಗಳನ್ನು ಅವರು ಪರಿಶೀಲಿಸಿದರು. ಈ ಹಿಂದೆ ಮಹಿಳೆಯರನ್ನು ಒಳಗೊಳ್ಳದೆ ಕೇವಲ ಪುರುಷರ ವ್ಯವಹಾರವೆಂದು ಪರಿಗಣಿಸಿದ ಉದ್ಯಮಗಳನ್ನು ಯಶಸ್ವಿಯಾಗಿ ನಿರ್ವ ಹಿಸುತ್ತಿದ್ದ ಗಣನೀಯ ಸಂಖ್ಯೆಯ ವಿಧವೆಯರನ್ನು ಅವರು ಪತ್ತೆ ಹಚ್ಚಿದರು. ಸಾಮರ್ಥ್ಯವಿದ್ದರೂ ವಿವಾಹಿತ ಮಹಿಳೆಯರಿಗೆ ಕುಟುಂಬದ ಕೆಲಸದಲ್ಲಿ ಭಾಗವಹಿಸಲು ಸಾಕಷ್ಟು ಅವಕಾಶ ನೀಡಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಅವರ ಪಾಲುದಾರರು ಅವಕಾಶ ನೀಡುವವರೆಗೆ, ಅವರು ಕಾಯಬೇಕಾಗಿ ಬಂದಿತು.
ಲಭ್ಯವಿರುವ ಉದ್ಯೋಗಗಳ ಪ್ರಮಾಣ ಹೆಚ್ಚಾದಾಗ, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಉದ್ಯೋಗಕ್ಕೆ ಸೇರುವ ನಿರೀಕ್ಷೆಯಿದೆ. ಆದರೆ, ಇದು ಯಾವಾಗಲೂ ನಿಜವಲ್ಲ. ಗೋಲ್ಡಿನ್ ಪ್ರಕಾರ, ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿ ಕೆಗೆ ಇಂಗ್ಲೀಷಿನ ʻಯುʼ ಅಕ್ಷರದಂತೆ ಇರುತ್ತದೆ; ಅಂದರೆ, ಕಾಲಾನಂತರದಲ್ಲಿ ಏರಿಳಿತಗೊಳ್ಳುತ್ತದೆ. ಕೈಗಾರಿಕಾ ಕ್ರಾಂತಿಗೆ ಮೊದಲು ಪುರುಷರಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಉದ್ಯೋಗದ ಸ್ಥಳ ಕಾರ್ಖಾನೆಗಳಿಗೆ ಬದಲಾದಾಗ, ಕೆಲಸ ಮಾಡುವ ಮಹಿಳೆಯರು, ವಿಶೇಷವಾಗಿ, ವಿವಾಹಿತೆಯರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತು. ಸೇವಾ ವಲಯದಲ್ಲಿ ಉದ್ಯೋಗಗಳು ಹೆಚ್ಚಿದಂತೆ, ಮಹಿಳೆಯರಿಗೆ ಉದ್ಯೋಗಾವಕಾಶಗಳು ತೆರೆದುಕೊಂಡವು. ಜನನ ನಿಯಂತ್ರಣದ ಆವಿಷ್ಕಾರ, ವಿಶೇಷವಾಗಿ, ಜನನ ನಿಯಂತ್ರಣ ಮಾತ್ರೆಗಳು ಮಹಿಳೆಯರಿಗೆ ಗರ್ಭಧಾರಣೆಯನ್ನು ನಿಯಂತ್ರಿಸುವ ಶಕ್ತಿಯನ್ನು ನೀಡಿದವು. ಇದು ಕೆಲಸ ಮಾಡುವ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ದೊಡ್ಡ ಪರಿಣಾಮ ಬೀರಿತು.
ಗೋಲ್ಡಿನ್ ಅವರ ಪ್ರಕಾರ, ಮಹಿಳಾ ಉದ್ಯೋಗಿಗಳ ಶೇಕಡಾವಾರು ಪ್ರಮಾಣ ಕ್ರಮೇಣ ಹೆಚ್ಚುತ್ತದೆ; ಏಕೆಂದರೆ, ಮಹಿಳೆಯರ ಉದ್ಯೋಗವನ್ನು ಬೆಂಬಲಿಸುವ ಪರಿಸ್ಥಿತಿ ಮತ್ತು ಅಗತ್ಯ ಶಿಕ್ಷಣವನ್ನು ಪಡೆಯುವ ಅವರ ನಿರ್ಧಾರ ಇದಕ್ಕೆ ಕಾರಣ. ಏಳು ವರ್ಷಗಳ ಹಿಂದೆ ಸಾಕಷ್ಟು ಮಹಿಳೆಯರು ವಿಜ್ಞಾನ ಮತ್ತು ಗಣಿತವನ್ನು ಅಧ್ಯಯನ ಮಾಡಲು ಆಯ್ಕೆ ಮಾಡಿಕೊಂಡಿದ್ದರೆ ಮಾತ್ರ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅವರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಅಮೆರಿಕದಲ್ಲಿ ಮಹಿಳೆಯರು ದೀರ್ಘಾವಧಿ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಗರ್ಭನಿರೋಧಕ ಮಾತ್ರೆ ಮಹತ್ವದ ಪಾತ್ರ ವಹಿಸಿದೆ. ಕುಟುಂಬವನ್ನು ಯಾವಾಗ ಪ್ರಾರಂಭಿಸಬೇಕೆಂದು ನಿರ್ಧರಿಸಲು ಮಹಿಳೆಯರಿಗೆ ಈ ಮಾತ್ರೆಗಳು ಅವಕಾಶ ಮಾಡಿಕೊಟ್ಟವು.
ವಿವಿಧ ರಾಜ್ಯಗಳಲ್ಲಿ ಈ ಮಾತ್ರೆಗಳನ್ನು ಕಾನೂನುಬದ್ಧಗೊಳಿಸಿದ್ದರಿಂದ ಮಹಿಳೆಯರ ಶಿಕ್ಷಣ ಮತ್ತು ವೃತ್ತಿ ಆಯ್ಕೆಗಳ ಮೇಲೆ ಹೇಗೆ ಪರಿಣಾಮ ಉಂಟಾಯಿತು ಎಂಬ ಕುರಿತು ಗೋಲ್ಡಿನ್ ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರ ಬಗ್ಗೆ ಸಮಾಜದ ದೃಷ್ಟಿಕೋನ ಸುಧಾರಿಸಿದಾಗ ಮಹಿಳೆಯರು ಶಿಕ್ಷಣದ ಬಗ್ಗೆ ಸರಿಯಾದ ಆಯ್ಕೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಆದರೆ, ಹೊಸ ರೀತಿಯ ಶಿಕ್ಷಣವು ಸಂಪೂರ್ಣವಾಗಿ ಪರಿಣಾಮಕಾರಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಅಂದರೆ, ಮಹಿಳೆಯರು ಪುರುಷರಷ್ಟೇ ವೇತನ ಗಳಿಸುತ್ತಾರೆ ಎಂದು ಇದರ ಅರ್ಥವಲ್ಲ.
ಯುರೋಪಿನಲ್ಲಿ ಪದವೀಧರರಲ್ಲಿ ಶೇ. 60 ಮಂದಿ ಮಹಿಳೆಯರು. ಆದರೆ, ಮಹಿಳೆಯರು ಪುರುಷರಿಗಿಂತ ಶೇ.13 ರಷ್ಟು ಕಡಿಮೆ ಗಳಿಸುತ್ತಾರೆ. ಲಿಂಗಗಳ ನಡುವಿನ ವೇತನ ವ್ಯತ್ಯಾಸಕ್ಕೆ ಕಾರಣವಿಲ್ಲದಿದ್ದರೂ, ಇದು ಸಂಭವಿಸುತ್ತದೆ. ಮಹಿಳೆಯರು ಕುಟುಂಬವನ್ನು ಆರಂಭಿಸಲು ಸ್ವಲ್ಪ ಸಮಯ ಉದ್ಯೋಗವನ್ನು ತೊರೆಯುವುದರಿಂದ ಗಳಿಕೆ ಕಡಿಮೆಯಾಗುತ್ತದೆ ಮತ್ತು ವೃತ್ತಿಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ದೀರ್ಘ ಮಾತೃತ್ವ ರಜೆ ಮತ್ತು ಶಿಶುಪಾಲನೆಗೆ ತಾಯಂದಿರನ್ನು ಬೆಂಬಲಿಸುವ ಉತ್ತಮ ನೀತಿಗಳನ್ನು ಹೊಂದಿರುವ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ಕೂಡ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಮಹಿಳೆಯರು ಇಲ್ಲ. ಪುರುಷರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಉದ್ಯೋಗಗಳಲ್ಲಿ ಮುಂದುವರಿದು, ಉನ್ನತ ಸ್ಥಾನ ಗಳಿಸುತ್ತಾರೆ.
ಇದು ಕಂಪನಿಗಳ ಆಡಳಿತ ಮಂಡಳಿಗೆ ಆಯ್ಕೆಯಾಗುವಿಕೆ ಮೇಲೆ ಪರಿಣಾಮ ಬೀರುತ್ತದೆ. ಯುರೋಪಿಯನ್ ಕಮಿಷನ್, ಕಾರ್ಪೊರೇಟ್ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಕಡಿಮೆ ಮಹಿಳೆಯರು ಇರುವ ಸಮಸ್ಯೆಯನ್ನು ಪರಿಹರಿಸಲು 2022ರಲ್ಲಿ ನಿರ್ದೇಶನ ನೀಡಿತು. ಕಾರ್ಯನಿರ್ವಾಹಕವಲ್ಲದ ಮಂಡಳಿಗಳಲ್ಲಿ ಶೇ.40 ಮತ್ತು ಎಲ್ಲ ಮಂಡಳಿಗಳಲ್ಲಿ ಶೇ.30 ರಷ್ಟು ಮಹಿಳೆಯರು ಇರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಆಯೋಗವು ಸದಸ್ಯ ರಾಷ್ಟ್ರಗಳಿಗೆ ಸೂಚಿಸಿತು. ಮಹಿಳೆಯರು ಶಿಕ್ಷಣದಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ಅವರ ಉದ್ಯೋಗ ಮತ್ತು ಗಳಿಕೆ ಮೇಲೆ ಗಮನಾರ್ಹ ಪರಿಣಾಮ ಆಗುವುದಿಲ್ಲ ಎಂಬುದು ಗೋಲ್ಡಿನ್ ಅವರ ಅಭಿಪ್ರಾಯ. ದಕ್ಷಿಣ ಕೊರಿಯಾ ಮತ್ತು ಜಪಾನ್ ಮದುವೆ-ಫಲವತ್ತತೆ ದರಗಳಲ್ಲಿ ಗಮನಾರ್ಹ ಕುಸಿತ ಕಂಡಿವೆ; ಮಕ್ಕಳು, ಹಿರಿಯರ ಆರೈಕೆಯ ಹೊಣೆಯನ್ನು ಹೆಂಗಸರು ಹೊರಬೇಕು ಎಂಬ ಅಭಿಪ್ರಾಯ ಇದೆ.
ಮಹಿಳೆಯರಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಕೊಡಬೇಕಿದ್ದು, ಅವರ ಸ್ವಾತಂತ್ರ್ಯವನ್ನು ಗೌರವಿಸಬೇಕಿದೆ; ಲೈಂಗಿಕ ಕಿರುಕುಳ ಮತ್ತು ಟೀಕೆಗಳನ್ನು ತಡೆಯಬೇಕಿದೆ. ಇದರರ್ಥ-ಪುರಾತನ ಸಂಪ್ರದಾಯಗಳಿಂದ ಬರುವ ಅಸಮಾನ ಲಿಂಗ ನಿರೀಕ್ಷೆಗಳನ್ನು ತಪ್ಪಿಸಬೇಕು. ಪುರುಷರು ಮಕ್ಕಳ ಪಾಲನೆ ಮತ್ತು ಹಿರಿಯರ ಆರೈಕೆ, ಮನೆ ಕೆಲಸದ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಸಿದ್ಧರಿರಬೇಕು. ಪುರುಷರು, ಮಹಿಳೆಯರು ಸೇರಿದಂತೆ ಎಲ್ಲ
ಲಿಂಗಗಳಿಗೂ ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆ ಇರಬೇಕು. ಭಾರತ ಈ ಮೂಲಕ ಜನಸಂಖ್ಯಾ ಬಲದ ಸಂಪೂರ್ಣ ಪ್ರಯೋಜನ ಪಡೆಯಬಹುದು.
(ಈ ಬರಹದ ಲೇಖಕರಾದ ಟಿ.ಕೆ.ಅರುಣ್ ,ದೆಹಲಿ ಮೂಲದ ಹಿರಿಯ ಪತ್ರಕರ್ತ. ಲೇಖನ ʼದ ಫೆಡರಲ್ʼನಲ್ಲಿ ಅಕ್ಟೋಬರ್ 10, 2023ರಂದು ಪ್ರಕಟಗೊಂಡಿತ್ತು. ಲೇಖನದಲ್ಲಿನ ಮಾಹಿತಿ, ಚಿಂತನೆ ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು ಫೆಡರಲ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ.)