ʻಬೆನಕʼಗೆ 50; ಸಾವಿಲ್ಲದ ʼಸತ್ತವರ ನೆರಳುʼ ಬಿ ವಿ ಕಾರಂತ ಇನ್ನೂ ಜೀವಂತ
ಕನ್ನಡ ರಂಗಭೂಮಿಗೆ ಹೊಸ ನೀರು ಹರಸಿದ ಬಿ.ವಿ.ಕಾರಂತರ ಕನಸಿನ ಕೂಸಾದ ʻಬೆನಕʼ ರಂಗತಂಡಕ್ಕೆ ಈಗ 50 ರ ಪ್ರಾಯ. ಹೊಸ ಚಿಗುರು, ಹಳೆಬೇರು ಸೇರಿದಂತೆ ಬೆನಕ ಇನ್ನೂ ತನ್ನ ಕೃತಿಗಳಿಂದ ರಂಗ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಓದುಗರ ಆಸಕ್ತಿಗಾಗಿ ಒಂದು ಸಂಗತಿ. ಇಂದು ʻರಾಕಿಭಾಯ್ʼ ಆಗಿರುವ ಕನ್ನಡ ಚಿತ್ರರಂಗಕ್ಕೆ ಕೈಗೆಟುಕದ ಸ್ಥಾನ ತಲುಪಿರುವ ಯಶ್ ಒಂದು ಅವಧಿಯಲ್ಲಿ ʻಬೆನಕʼ ತಂಡದಲ್ಲಿ ದುಡಿದವರು. ʻಬೆನಕʼದ ಮೈಲುಗಲ್ಲಿನಂಥ ನಾಟಕ ʻಸತ್ತವರ ನೆರಳುʼ ಇಂದು (ಆಗಸ್ಟ್ 18 ರಂದು) ರಂಗ ಶಂಕರದಲ್ಲಿ ತನ್ನ 619 ನೇ ಪ್ರದರ್ಶನ ಕಾಣುತ್ತಿದೆ.
ಕರ್ನಾಟಕದ ರಂಗಭೂಮಿಯ ಇತಿಹಾಸದಲ್ಲಿ ಬಾಬುಕೋಡಿ ವೆಂಕಟರಮಣ ಕಾರಂತ ಅರ್ಥಾತ್ ಎಲ್ಲರೂ ಪ್ರೀತಿ ಮತ್ತು ಗೌರವದಿಂದ ಗುರುತಿಸುವ ಬಿ.ವಿ. ಕಾರಂತ ಒಂದು ವರ್ಣರಂಜಿತ ಹಾಗೂಲಯಭರಿತ ಅಧ್ಯಾಯ. ಕನ್ನಡ ರಂಗಭೂಮಿಗೆ ತಮ್ಮ ರಂಗ ಕಲ್ಪನೆಯ ಕಸುವಿನಿಂದಾಗಿ ಹೊಸತನವನ್ನು ತಂದುಕೊಟ್ಟವರು. ಎಪ್ಪತ್ತರ ದಶಕದಲ್ಲಿ ಹವ್ಯಾಸಿ ಕನ್ನಡ ರಂಗಭೂಮಿಯನ್ನು ಹೊಸ ತಿರುವಿನಲ್ಲಿ ತಿರುಗಿಸಿ ಅದರ ದಿಕ್ಕು ಬದಲಿಸಿದವರು.
1974 ರಲ್ಲಿ ಕಾರಂತರು ಹುಟ್ಟುಹಾಕಿದ ರಂಗ ಸಂಸ್ಥೆ (ಹಾಗೆಂದು ಕರೆದರೆ ಅದಕ್ಕೊಂದು ಗೌರವ) ʻಬೆಂಗಳೂರು ನಗರ ಕಲಾವಿದರು-ಬೆನಕʼಗೆ ಈಗ ಐವತ್ತರ ಹರೆಯ. ಇಂದು ಕಾರಂತರು ನಮ್ಮೊಂದಿಗಿಲ್ಲ. ಅವರ ಗರಡಿಯಲ್ಲಿ ಸಾಮು ಮಾಡಿದ ಅವರ ಶಿಶ್ಯರು ವಿಶೇಷವಾಗಿ, ರಂಗಕರ್ಮಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಡಾ. ಟಿ. ಎಸ್. ನಾಗಾಭರಣ ʻಬೆನಕʼದ ಅಂತರಾತ್ಮವನ್ನು ಚೂರೂ ಮುಕ್ಕಾಗದಂತೆ ಕಾಪಾಡಿಕೊಂಡು ಬರುತ್ತಿದ್ದಾರೆ.
ಆರಂಭದ ದಿನಗಳಿಂದಲೂ, ಸಮಾಜ, ಸಂಸ್ಕೃತಿ, ಪ್ರಜಾಸತ್ತಾತ್ಮಕ ರಾಜಕಾರಣದ ಮೌಲ್ಯಾಧಾರಿತ ಸಂಗತಿಗಳನ್ನು ರಂಗರೂಪದಲ್ಲಿ ಪ್ರಸ್ತುತ ಪಡಿಸಿಕೊಂಡೇ ಬಂದಿರುವ ಕೀರ್ತಿ ʻಬೆನಕʼ ರಂಗ ತಂಡದ್ದು. ಒಂದರ್ಥದಲ್ಲಿ ʻಬೆನಕʼ ಅಸ್ತಿತ್ವಕ್ಕೆ ಬರಲು ಕಾರಣವಾದದ್ದು 1972 ರ ಬಯಲು ರಂಗಮಂದಿರ ರಂಗೋತ್ಸವ. ಈ ರಂಗೋತ್ಸವ ಕನ್ನಡದ ಹವ್ಯಾಸಿ ರಂಗಭೂಮಿಯ ಆಳ ಅಗಲವನ್ನು ವಿಸ್ತರಿಸಿತೆಂದರೂ ತಪ್ಪಾಗಲಾರದು. ಕನ್ನಡದ ಸಾಹಿತಿಗಳೂ, ನಾಟಕ ಕರ್ತೃಗಳೂ ಆದ, ಚಂದ್ರಶೇಖರ ಕಂಬಾರ, ಪಿ. ಲಂಕೇಶ್, ಚಂದ್ರಶೇಖರ ಪಾಟೀಲರು ತಮ್ಮ ಹೊಸ ಬಗೆಯ ನಾಟಕಗಳ ಮೂಲಕ, ರಂಗ ಕಲಾವಿದರಿಗೆ ಹೊಸ ಸವಾಲುಗಳನ್ನೆಸೆದರು. ಅದನ್ನ ರಂಗ ಕಲಾವಿದರು, ನಿರ್ದೇಶಕರು ಸಮರ್ಥವಾಗಿ ಬಳಸಿಕೊಂಡರು. ಅಂದು ರಂಗ ಪ್ರದರ್ಶನ ಕಂಡ, ʼಈಡೀಪಸ್ʼ, ʻಜೋಕುಮಾರಸ್ವಾಮಿʼ, ʻಸಂಕ್ರಾಂತಿʼ ನಾಟಕಗಳು ಐದು ದಶಕಗಳ ನಂತರವೂ, ಅಂದಿನ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನ ಚಿತ್ತಾರವನ್ನು ಮೂಡಿಸಿ ಉಳಿಸಿದೆ. ಈಗಿನ ರವೀಂದ್ರ ಕಲಾಕ್ಷೇತ್ರ ಅಂದು ಜೀರ್ಣೋದ್ಧಾರ ಸ್ಥಿತಿಯಲ್ಲಿದ್ದ ಕಾರಣ, ಕಲಾಕ್ಷೇತ್ರದ ಹಿಂದಿನ ಬಯಲೇ ಅಂದು ಆಲಯವಾಗಿ ʼಬಯಲು ರಂಗ ಮಂದಿರʻ ಚಳವಳಿಗೆ ಕಾರಣವೂ ಆಯಿತು. ಅದೇ ಸ್ಥಳ ಇಂದು ʻಸಂಸ ರಂಗ ಮಂದಿರʼ ಎಂದು ಅಂದಿನ ಜೀವಂತಿಕೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ.
ಬೆನಕ ದ ಬೀಜರೂಪ
ʻಬೆನಕʼ ಹುಟ್ಟುವ ಮುನ್ನಿನ ಅದರ ಬೀಜ ರೂಪಗಳನ್ನು ʻಶಕಶೈಲೂಷರುʼ ಹಾಗೂ ʻಬೆಂಗಳೂರು ಚಿತ್ರ ನಾಟಕ ಕಲಾವಿದರು-ಬೆಂಚಿನಾಕʼ ಹೊಸ ರೀತಿಯ ನಾಟಕಗಳಿಗೆ ಜೀವ ನೀಡುತ್ತಿದ್ದವು. ಇವೆರಡರ ಸಂಗಮವೆಂಬಂತೆ ಹುಟ್ಟಿದ್ದು ʻಬೆನಕʼ. ಹೀಗೆಂದು ಹೊಸ ನಾಮಕರಣ ಮಾಡಿದ ಕೀರ್ತಿ ಪತ್ರಕರ್ತ-ಪಂಡಿತ ವೈಎನ್ ಕೆ. ʼಬೆನಕʼ ಎಂದರೆ ಒಂದರ್ಥದಲ್ಲಿ ಗಣಪ ಕೂಡ ಹೌದು. ನಾಟಕದ ಆರಂಭದಲ್ಲಿ “ಗಜವದನ ಹೇರಂಭ…” ರಂಗಗೀತೆ ಹಾಡುವ ಸಂಪ್ರದಾಯವೂ ಇದೆ. ಈ ರಂಗಗೀತೆಗೆ ರಾಗಸಂಯೋಜನೆ ಮಾಡಿದವರೂ ಕಾರಂತರೇ. ʻಬೆನಕʼದ ಪ್ರಮುಖ ನಾಟಕಗಳನ್ನು ಹೆಸರಿಸಬಹುದಾದರೆ; ʼಸತ್ತವರ ನೆರಳು, ʻ ʻಹಯವದನʼ ʻಜೋಕುಮಾರಸ್ವಾಮಿʼ, ʻಕತ್ತಲೆ ಬೆಳಕುʼ ʻಹ್ಯಾಮ್ಲೆಟ್ʼ ʻಕಾಗೆ ಕುಣಿತʼ ʻ ತಬರನ ಕತೆʼ ಇತ್ಯಾದಿ… ಇಂದಿಗೂ ಪ್ರದರ್ಶನಗೊಳ್ಳುತ್ತಿರುವ ನಾಟಕಗಳೆಂದರೆ, ʼಸತ್ತವರ ನೆರಳುʼ ಮತ್ತು ಪು. ತಿ. ನರಸಿಂಹಾಚಾರ್ ಅವರ ʼ ಗೋಕುಲ ನಿರ್ಗಮನʼ. ಇಂದಿನ ಗ್ರಾಮೀಣ ವಲಸೆಯನ್ನು ಭಾಗವತದ ಕೃಷ್ಣನ ಗೋಕುಲ ನಿರ್ಗಮನಕ್ಕೆ ಹೋಲಿಸಿದ ಈ ರಂಗ ಕೃತಿಗೆ ಜೀವ ತುಂಬಿ ಜೀವಂತ ಇರಿಸಿದವರು ಕಾರಂತರೆಂದರೆ ಅತಿಶಯೋಕ್ತಿಯಲ್ಲ.
ʻರಾಕಿʼ ಬಾಯ್ ಯಶ್ ಬೆನಕದ ಹುಡುಗ
ಇವೆಲ್ಲಕ್ಕಿಂತ ಒಂದು ಸಂಗತಿ ಇಂದಿನ ತಲೆಮಾರಿನ ಹುಡುಗರಿಗೆ ಸ್ಫೂರ್ತಿಯಾಗಬಹುದು. ಇಂದು ರಾಕಿ ಬಾಯ್ ಆಗಿರುವ ಕನ್ನಡ ಚಿತ್ರರಂಗಕ್ಕೆ ಕೈಗೆಟುಕದ ಸ್ಥಾನ ತಲುಪಿರುವ ಯಶ್ ಒಂದು ಅವಧಿಯಲ್ಲಿ ʻಬೆನಕʼ ತಂಡದಲ್ಲಿ ದುಡಿದವರು. “ಹೊಸ ಶತಮಾನದ ಆರಂಭದಲ್ಲಿ ಆಗಿನ್ನೂ ಯಶ್ ಆಗಿರದ ನವೀನ್ ಕುಮಾರ್ ಗೌಡ ನನ್ನನ್ನು ಭೇಟಿಯಾಗಿ ʼಬೆನಕʼದಲ್ಲಿ ಕಲಿಯುವ ಆಸಕ್ತಿ ತೋರಿದರು. ಆಗ ತೆರೆಯ ಹಿಂದೆ ದುಡಿಯುವ ಉತ್ಸಾಹವನ್ನೂ ತೋರಿದರು. ಬೆಳಕಿನ ವಿನ್ಯಾಸ ಮಾಡುವಲ್ಲಿ, ವೇದಿಕೆಗಳನ್ನು ರೂಪಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಯಾವುದೇ ಪಾತ್ರದ ಪಾತ್ರದಾರಿ ಸಕಾರಣವಾಗಿ ಗೈರು ಹಾಜರಾದರೆ, ಆ ಸ್ಥಾನವನ್ನು ಯಶಸ್ವಿಯಾಗಿ ತುಂಬುತ್ತಿದ್ದರು. ಈ ಹುಡುಗ ಮುಂದೊಂದು ದಿನ ದೊಡ್ಡ ನಟನಾಗುತ್ತಾನೆ ಎಂದು ಅಂದೇ ನನಗನ್ನಿಸಿತ್ತು” ಎಂದು ನಾಗಾಭರಣ ದ ಫೆಡರಲ್-ಕರ್ನಾಟಕದೊಂದಿಗೆ ಮಾತನಾಡುತ್ತಾ ನೆನಪಿಸಿಕೊಂಡರು.
ಸತ್ತವರ ನೆರಳು ಆರು ನೂರು
ಹೀಗೆ 1974 ರಲ್ಲಿ ಮೊದಲು ಪ್ರದರ್ಶನ ಕಂಡ ʼಸತ್ತವರ ನೆರಳುʼ ನಾಟಕ 600 ಪ್ರದರ್ಶನದ ಗಡಿಯನ್ನು ದಾಟಿದೆ. ಇಂದು ಅಂದರೆ ಆಗಸ್ಟ್ 18 ರಂದು ಈ ನಾಟಕದ 619 ನೇ ಪ್ರದರ್ಶನ ಎಂದು ನಾಗಾಭರಣ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಈ ʻಸತ್ತವರ ನೆರಳುʼ ನಾಟಕದ ಕರ್ತೃ ಜಡಭರತ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಖ್ಯಾತ ಸಾಹಿತಿ ಮನೋಹರ ಗ್ರಂಥ ಮಾಲಾದ ಸ್ಥಾಪಕರಾದ ಪದ್ಮಶ್ರೀ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಜಿ.ಬಿ. ಜೋಶಿ. ಇವರ ಇತರ ಕೃತಿಗಳೆಂದರೆ ʻಕದಡಿದ ನೀರುʼ, ʻಮೂಕಬಲಿʼ, ʼಪರಮಳದವರುʼ..ಇತ್ಯಾದಿ. ʼಸತ್ತವರ ನೆರಳುʼ ಕೃತಿಯನ್ನು ಮೊದಲು ರಂಗಕ್ಕೆ ಅಳವಡಿಸಿದವರು ಬಿ.ವಿ. ಕಾರಂತರು. ಈ ರಂಗಕೃತಿಗೆ ಪುರಂದರದಾಸರ ಕೀರ್ತನೆಗಳ ಮೂಲಕ ಹೊಸತನ್ನವನ್ನು ತಂದುಕೊಟ್ಟವರು ಅವರು. ಈ ರಂಗ ಗೀತೆಗಳೇ ಇಂದಿಗೂ ʻಸತ್ತವರ ನೆರಳುʼ ಕೃತಿಯನ್ನು ಜೀವಂತವಾಗಿಟ್ಟಿದೆ ಎಂದರೂ ತಪ್ಪಾಗಲಾರದು.
ಜಿ.ಬಿ. ಜೋಶಿ ಒಂದರ್ಥದಲ್ಲಿ ಭವಿಷ್ಯವನ್ನು ನೋಡಬಲ್ಲವರಾಗಿದ್ದರು. ತಾವು ಬದುಕಿದ ಸಮುದಾಯವನ್ನು ಕ್ಲಿನಿಕಲ್ ಆಗಿ ನೋಡುವ ಮನಃಸ್ಥಿತಿಯವರಾಗಿದ್ದರು. ʼಸತ್ತವರ ನೆರಳುʼ ಇಂದು ಬರೆದಿದ್ದರೆ, ಇಂದು ಪ್ರದರ್ಶನಕಂಡಿದ್ದರೆ, ಅವರನ್ನು ಟ್ರೋಲ್ ಮಾಡಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರೇನೋ! ಅಂಥಹ ಪ್ರತಿಭೆ ಅವರದ್ದು. ಅವರು ಬರೆದ ಕಾಲ ಪ್ರಜಾಸತ್ತಾತ್ಮಕವಾಗಿತ್ತು. ಆಗ ʻಸಂಸ್ಕಾರʼದಂಥ ಚಿತ್ರ ಮಾಡಿ ಸೈ ಎನ್ನಿಸಿಕೊಳ್ಳಬಹುದಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಆದರೆ ಅಂದು ಈ ಕೃತಿ ಮತ್ತು ರಂಗಕೃತಿಗೆ ಎಂಥ ಸ್ವಾಗತವಿತ್ತೆಂದು ಊಹಿಸಿಕೊಳ್ಳುವದೂ ಕೂಡ ಕಷ್ಟ.
ಇತಿಹಾಸ ಸೃಷ್ಟಿ
1974 ರಲ್ಲಿ ಮೊದಲ ಪ್ರದರ್ಶನ ಕಂಡ ಈ ನಾಟಕ ನೋಡಲು ಪ್ರೇಕ್ಷಕರು, ಸಾಲುಗಟ್ಟಿ ನಿಂತದ್ದರು. ಎಷ್ಟೋ ಮಂದಿಗೆ ಟಿಕೆಟ್ ಸಿಗದೆ ನಿರಾಶರಾದರು. ಸಿಕ್ಕವರು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂದು ರಂಗ ಮಂದಿರ ಪ್ರವೇಶಿಸಿ, ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡರು. ಪ್ರದರ್ಶನ ನೋಡಿ ಹೊರ ಬರುವ ವೇಳೆಗೆ ಅವರ ಮನಃಸ್ಥಿತಿಯೇ ಬದಲಾಗಿತ್ತು. ಅವರು ಮೂಕವಿಸ್ಮಿತರಾಗಿದ್ದರೆಂದು, ಅಂದು ನಾಟಕ ನೋಡಿದವರು ನೆನಪಿಸಿಕೊಳ್ಳುತ್ತಾರೆ. ನಾಟಕದ ವೇದಿಕೆ, ಸಂಗೀತ ಸೇರಿದಂತೆ ಎಲ್ಲದರಲ್ಲೂ ಕಾರಂತರು ಕುಸುರಿ ಕೆಲಸ ಮಾಡಿ ಹೊಸತನದ ಜೀವಸ್ಪರ್ಶ ಮಾಡಿದ್ದರು. ಒಂದು ಕಾಲದ ಧಾರ್ಮಿಕ ಸಂಸ್ಥೆಗಳಾದ ಮಠಗಳ ಒಳಕೆಸರನ್ನು ಕುರಿತು ಕಟುವಾಗಿ ಟೀಕಿಸಿದ ಕಾರಣ ವಿವಾದಾತ್ಮಕವಾಗಬೇಕಿದ್ದ ನಾಟಕ, ಇತಿಹಾಸ ಸೃಷ್ಟಿಸಿತು. ಕಾರಂತರೆಂಥ ಪ್ರತಿಭಾವಂತರೆಂದರೆ, ಈ ನಾಟಕದ ಮೂಲಕ ಯಾವುದೇ ಸಂದೇಶ ಕೊಡಲು ಯತ್ನಿಸಲಿಲ್ಲ. ವಸ್ತು ಸ್ಥಿತಿಯನ್ನು ಪ್ರೇಕ್ಷಕರ ಮುಂದಿರಿಸಿ, “…ಹೀಗಿದೆ ನಮ್ಮ ಮಠಗಳು”, ಎಂದು ಹೇಳಿ, ತಾಳ ಮದ್ದಳೆ ಸದ್ದಿನಲ್ಲಿ ಪ್ರೇಕ್ಷಕರನ್ನು ಮುಳುಗಿಸಿಬಿಟ್ಟರು.
ಮಠಗಳ ಪ್ರಸ್ತುತತೆಯ ಜಿಜ್ಞಾಸೆ
ಒದರ್ಥದಲ್ಲಿ ಅಂದಿನ ಮತ್ತು ಇಂದಿನ ಸಂದರ್ಭದಲ್ಲಿ ಮಠಗಳ ಪ್ರಸ್ತುತತೆ ಮತ್ತು ಅಪ್ರಸ್ತುತತೆಯನ್ನು ಅನಾವರಣಗೊಳಿಸುವ ನಾಟಕ ʻಸತ್ತವರ ನೆರಳುʼ. ಧಾರ್ಮಿಕ ಸಂಸ್ಥೆಗಳಾದ ಅನೇಕಾನೇಕ ಮಠಗಳಲ್ಲಿ ಇಂದಿಗೂ ನಡೆಯುತ್ತಿರುವ ಅಧಿಕಾರ ಕಲಹ, ಅಂಧ ಶ್ರದ್ಧೆಗಳ ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿರುವ ಆಚರಣೆಗಳು. ಅರ್ಥಾತ್ ಮೂಢನಂಬಿಕೆಗಳು, ಜ್ಞಾನ ವೃದ್ಧಿಗಿಂತ ಆಚರಣೆಯ ಪರಂಪರೆಗೆ ಜೋತು ಬೀಳುವ ಮಠಾಧೀಶರು, ಮಠದ ಆಡಳಿದ ಮೇಲಿನ ಹಿಡಿತಕ್ಕಾಗಿ ಪ್ರತಿಕ್ಷಣವೂ ಕುತಂತ್ರದ ಜಾಲ ಹೆಣೆಯುವ ದಿವಾನರು (ಈಗಿನ ಆಡಳಿತಾಧಿಕಾರಿಗಳು), ಈ ನಡುವೆಯೂ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹಪಾಹಪಿಸುವ ಕೆಲ ಮಠಾಧೀಶರು, ಸೂಕ್ತ ಉತ್ತರಾಧಿಕಾರಿಗಾಗಿ ಹಲಬುವ ಮಠಾಧೀಶರು…. ಈ ಎಲ್ಲ ಚಿತ್ರಣಗಳ ತಾತ್ವಿಕ ಎಳೆಯನ್ನು ಮೀಟಿ ಸುಭದ್ರ ತತ್ವದ ನೆಲಗಟ್ಟನ್ನೇ, ಅಲ್ಲಾಡಿಸಿ, ಅಚಲ ನಂಬಿಕೆಗಳ ಅಂತರಂಗವನ್ನು ಶೋಧಿಸುವ ವೈಚಾರಿಕ ಮರ್ಮಭೇದಿ ರಂಗಧ್ವನಿಯೇ ʼಸತ್ತವರ ನೆರಳುʼ.
“ಮಠಗಳ ಹಿರಿಯ ಸ್ವಾಮಿಗಳ ಧ್ವನಿಪೂರ್ಣ ಬೈಗುಳ, ಸನ್ಯಾಸಿಯಾಗಲೊಪ್ಪದ ನಾರಾಯಣನ ವಿಭಿನ್ನ ಆಲೋಚನೆ, ತನಗೊಲಿದ, ತಾನು ಅದಕ್ಕೊಲಿಯದ ಸನ್ಯಾಸ ಸಾಮ್ರಾಜ್ಯದ ಅಧಿಪತಿಯಾಗದೆ ಅತಂತ್ರವಾಗಿ ಬೇರೆಯವರಿಗೂ ತಾನಿಲ್ಲದ, ತನಗೂ ತಾನಿಲ್ಲದ, ಇದ್ದೂ ಇಲ್ಲದಂತವನಾಗಿ ಬಿಡುವ ಅಮಾಯಕ ಬಲಿಪಶು ನಾರಾಯಣ ಕೊನೆಗೆ ಎಲ್ಲವನ್ನೂ ತೊರೆದು ಕಾಶಿಗೆ ಹೋಗುವಲ್ಲಿ ಒಂದು ಹಂತ ಮುಕ್ತಾಯ. ಕೆಲವು ವರ್ಷಗಳ ಬಳಿಕ ನಾರಾಯಣ ಮಠಕ್ಕೆ ಹಿಂದಿರುಗಿ ಬಂದಾಗ, ಮತ್ತೊಬ್ಬ ಸ್ವಾಮಿಯ ನೇಮಕ. ಹಿಂದಿನ ಪೀಠಾಧಿಪತಿ ನಾರಾಯಣನಿಗೆ ಬೃಂದಾವನ ನಿರ್ಮಾಣ. ತಾನಿನ್ನೂ ಬದುಕಿದ್ದೇನೆ ಎಂದರೂ ಒಪ್ಪಿಕೊಳ್ಳದ ಭಕ್ತಾದಿಗಳಿಂದಲೇ ಥಳಿತ-ತುಳಿತಕ್ಕೊಳಗಾಗುವ ನಾರಾಯಣನ ಅತರ್ ಪಿಶಾಚಿಯ ಸ್ಥಿತಿ. ಈ ಕಥನಕ್ಕೆ ಹಿನ್ನೆಲೆಯಾಗಿ ಬರುವ ʼಡೊಂಕು ಬಾಲದ ನಾಯಕರೇ…” ರಂಗಗೀತೆ… ʼಸತ್ತವರ ನೆರಳುʼ ನಾಟಕದ ಸಹಿ ಸಂಗೀತ”..ಇದು ನಾಟಕವನ್ನು ಕುರಿತ ವಿಮರ್ಶೆ.
ಈ ನಾಟಕ 619 ನೇ ಪ್ರದರ್ಶನ ಇಂದು ಮಧ್ಯಾಹ್ನ 3.30ಕ್ಕೆ ರಂಗ ಶಂಕರದಲ್ಲಿ. ಇದು ಓದುಗರ ಗಮನಕ್ಕೆ.