ಸಾಲದ ಹಣಕ್ಕಾಗಿ ವೃದ್ಧೆಯ ಹತ್ಯೆ: ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ, ಆರೋಪಿ ಸೆರೆ
x

ಸಾಲದ ಹಣಕ್ಕಾಗಿ ವೃದ್ಧೆಯ ಹತ್ಯೆ: ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ, ಆರೋಪಿ ಸೆರೆ

67 ವರ್ಷದ ಲಕ್ಷ್ಮಮ್ಮ ಅವರು ಅ.3ರಂದು ತಮ್ಮ ಮನೆಯಿಂದ ವಿಜಿ ಕೊಪ್ಪಲಿಗೆ ಹೋಗಿ ಬರುವುದಾಗಿ ಪತಿಗೆ ತಿಳಿಸಿ ಹೊರಟಿದ್ದರು. ಆದರೆ, ಮನೆಗೆ ಮರಳಿದ ಲಕ್ಷ್ಮಮ್ಮ ಅಂದು ರಾತ್ರಿ ಮನೆ ತಲುಪಿರಲಿಲ್ಲ.


Click the Play button to hear this message in audio format

ಕೇವಲ 50 ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಆರಂಭವಾದ ವಿವಾದವು, ಕೊನೆಗೆ ವೃದ್ಧೆಯೊಬ್ಬಳ ದಾರುಣ ಸಾವಿಗೆ ಮತ್ತು ಆಕೆಯ ಮೈಮೇಲಿದ್ದ ಚಿನ್ನಾಭರಣಗಳ ದೋಚುವಿಕೆಗೆ ಕಾರಣವಾಗಿದೆ. ಅ.7ರಂದು ನಾಲೆಗೆ ಎಸೆದಿದ್ದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವು ಬೆಚ್ಚಿಬೀಳಿಸಿತ್ತು. ಇದೀಗ ಪೊಲೀಸರು ಈ ಪ್ರಕರಣದ ರಹಸ್ಯವನ್ನು ಭೇದಿಸಿದ್ದು, ಆರೋಪಿ ರಮೇಶನ ಕ್ರೌರ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ.

ಅರಕಲಗೂಡು ತಾಲೂಕಿನ ನಿವಾಸಿ 67 ವರ್ಷದ ಲಕ್ಷ್ಮಮ್ಮ ಅವರು ಅ.3ರಂದು ತಮ್ಮ ಮನೆಯಿಂದ ವಿಜಿ ಕೊಪ್ಪಲಿಗೆ ಹೋಗಿ ಬರುವುದಾಗಿ ಪತಿಗೆ ತಿಳಿಸಿ ಹೊರಟಿದ್ದರು. ಆದರೆ, ಮನೆಗೆ ಮರಳಿದ ಲಕ್ಷ್ಮಮ್ಮ ಅಂದು ರಾತ್ರಿ ಮನೆ ತಲುಪಲೇ ಇಲ್ಲ. ಮರುದಿನದಿಂದ ಕುಟುಂಬಸ್ಥರು ಆತಂಕಿತರಾಗಿ ಹುಡುಕಾಟ ನಡೆಸಿದರು. ಈ ನಡುವೆ, ಅ.7ರಂದು ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯೊಂದರಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ ಎಂಬ ಸುದ್ದಿ ಹರಡಿತು. ಅರಕಲಗೂಡು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಪರಿಶೀಲಿಸಿದಾಗ ಅದು ನಾಪತ್ತೆಯಾಗಿದ್ದ ಲಕ್ಷ್ಮಮ್ಮ ಅವರದ್ದು ಎಂದು ಖಚಿತಪಟ್ಟಿತು.

ಕೊಲೆಯ ಕ್ರೂರ ಸ್ವರೂಪ

ಅರಕಲಗೂಡು ವೃತ್ತ ನಿರೀಕ್ಷಕ ವಸಂತ್ ಕುಮಾರ್ ನೇತೃತ್ವದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದರು. ತನಿಖೆಯ ಹಾದಿಯಲ್ಲಿ ರಮೇಶ (58) ಎಂಬಾತನ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಅ.3ರಂದು ವಿಜಿ ಕೊಪ್ಪಲಿಗೆ ತೆರಳುತ್ತಿದ್ದ ಲಕ್ಷ್ಮಮ್ಮ ಅವರನ್ನು ಕಂಡ ರಮೇಶ, ತಾನು ಬೈಕಿನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾನೆ. ನೇರವಾಗಿ ಅವರನ್ನು ಬೆಟ್ಟದಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಲಕ್ಷ್ಮಮ್ಮ ಅವರ ಕಪಾಳಕ್ಕೆ ಬಲವಾಗಿ ಹೊಡೆದು, ಬಳಿಕ ಕತ್ತು ಹಿಸುಕಿ ಪ್ರಾಣ ಕಸಿದುಕೊಂಡಿದ್ದಾನೆ. ಬಳಿಕ ಮೊದಲೇ ಯೋಜಿಸಿದ್ದಂತೆ, ತಾನು ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ತುಂಬಿ ನಾಲೆಗೆ ಎಸೆದು ಪರಾರಿಯಾಗಿದ್ದಾನೆ.

ಹಣದಾಸೆ - ಚಿನ್ನದ ವ್ಯಾಮೋಹ

ಹತ್ಯೆಗೆ ಮೂಲ ಕಾರಣ ಹಣದ ವ್ಯವಹಾರ. ಲಕ್ಷ್ಮಮ್ಮ ಅವರು ರಮೇಶನ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಈ ಹಣವನ್ನು ವಾಪಸ್ ಕೇಳಿದಾಗ ಲಕ್ಷ್ಮಮ್ಮ ಸತಾಯಿಸುತ್ತಿದ್ದರು. ಇದೇ ವಿಚಾರಕ್ಕೆ ದ್ವೇಷ ಸಾಧಿಸಿದ್ದ ರಮೇಶ, ಕೊಲೆ ಮಾಡಲು ನಿರ್ಧರಿಸಿದ. ಕೇವಲ ಹಣದ ವಿವಾದ ಮಾತ್ರವಲ್ಲದೆ, ಆಕೆಯ ಮೈಮೇಲಿದ್ದ ಚಿನ್ನಾಭರಣಗಳ ಮೇಲೆ ರಮೇಶನ ಕಣ್ಣು ಬಿದ್ದಿತ್ತು. ಕೊಲೆ ಮಾಡುವ ಮುನ್ನವೇ ಲಕ್ಷ್ಮಮ್ಮ ಅವರ ಮೈಮೇಲಿದ್ದ ಚಿನ್ನದ ತಾಳಿ, ಕಾಸಿನ ಸರ, ಓಲೆ, ಮಾಟಿ ಹಾಗೂ ಮೂರು ಉಂಗುರಗಳು ಸೇರಿದಂತೆ ಒಟ್ಟು 120 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾನೆ. ಕೊಂದ ಬಳಿಕ ಆಭರಣಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ರಮೇಶ, ಅವುಗಳನ್ನು ಬಚ್ಚಿಡಲು ಸಂಚು ರೂಪಿಸಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಜಾಲ - ಆರೋಪಿಯ ಬಂಧನ

ಕೊಲೆ ಮಾಡಿ ಬಚ್ಚಿಟ್ಟಿದ್ದ ಚಿನ್ನಾಭರಣಗಳ ಪೈಕಿ ಒಂದು ಉಂಗುರವನ್ನು ರಮೇಶ ಸ್ಥಳೀಯ ಗಿರವಿ ಅಂಗಡಿಯಲ್ಲಿ ಅಡವಿಟ್ಟು ಹಣ ಪಡೆದಿದ್ದನು. ಉಳಿದ ಆಭರಣಗಳನ್ನು ತನ್ನ ಶುಂಠಿ ಬೆಳೆದಿದ್ದ ಜಮೀನಿನ ಹಳೆಯ ಕೋಣೆಯೊಂದರಲ್ಲಿ, ಪ್ಲಾಸ್ಟಿಕ್ ಪೈಪ್‌ಗಳ ನಡುವೆ ಅಡಗಿಸಿಟ್ಟಿದ್ದನು. ಆರೋಪಿಯ ವಿಚಾರಣೆ ನಡೆಸಿದ ಕೊಣನೂರು ಠಾಣಾ ಪೊಲೀಸರು, ಆತ ಮಾಹಿತಿ ನೀಡಿದ ಸ್ಥಳಕ್ಕೆ ಹೋಗಿ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಕ್ಷ್ಯಾಧಾರಗಳ ಸಮೇತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read More
Next Story